ಮೈಸೂರು, ಜನವರಿ 14, 2020 (www.justkannada.in): ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಪರಿಶಿಷ್ಟ ಪಂಗಡಗಳ ಇಲಾಖೆ, ಧಾರವಾಡ ವಿವಿಯ ಡಾ.ಬಿ.ಆರ್.ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜ.18 ಹಾಗೂ 19ರಂದು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ ಸಮಸ್ಯೆ ಹಾಗೂ ಸವಾಲುಗಳು ಕುರಿತು ವಿಚಾರ ಸಂಕಿರಣ ನಡೆಯಲಿದ್ದು, 18ರಂದು ಬೆಳಗ್ಗೆ 11ಗಂಟೆಗೆ ಕರ್ನಾಟಕ ವಿವಿಯ ಸುವರ್ಣ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಶ ಅವರು ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉಪಸ್ಥಿತರಿರಲಿದ್ದಾರೆ. ಬುಡಕಟ್ಟು ಕಲಾ ತಂಡಗಳ ಮೆರವಣಿಗೆಗೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಲಿದ್ದಾರೆ. ಖ್ಯಾತ ನ್ಯಾಯವಾದಿ ಅರುಣ್ ಜೋಶಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಾನಾ ಗೋಷ್ಠಿಗಳು ನಡೆಯಲಿವೆ. ಜ.19ರಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಧಾರವಾಡ ವಿವಿ ಕುಲಪತಿ ಡಾ.ಎ.ಎಸ್.ಶಿರಾಳ ಶೆಟ್ಟಿ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಟಿ.ಟಿ.ಬಸನಗೌಡ ಇತರರು ಪಾಲ್ಗೊಳ್ಳಲಿದ್ದಾರೆ.