ಮೈಸೂರು, ಜನವರಿ ೧೦,೨೦೨೫: ನಕ್ಸಲಿಸಂ ಅನ್ನು ಸಂಪೂರ್ಣ ತೊಡೆದುಹಾಕವುದು ಕಾಂಗ್ರೆಸ್ ಸರ್ಕಾರದ ಉದ್ದೇಶ.ಯಾವುದೇ ಹೋರಾಟಗಳಾಗಲಿ ಶಾಂತಿಯುತವಾಗಿರಬೇಕೇ ಹೊರತು ಹಿಂಸಾತ್ಮಕ ದಾರಿ ಹಿಡಿಯಬಾರದೆಂಬುದು ಸರ್ಕಾರದ ನಿಲುವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಶರಣಾಗತರಾದ ನಕ್ಸಲರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಹಾಗೂ ನಕ್ಸಲರ ಶರಣಾಗತಿಯ ಬಗ್ಗೆ ಪರವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಕ್ಸಲರು ಶರಣಾಗಿದ್ದು, ಅವರ ಶಸ್ತ್ರಾಸ್ತ್ರಗಳನ್ನೂ ಮೊಹಜರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೋರಾಟುಗಳು ಸಂವಿಧಾನತ್ಮಕ ರೀತಿಯಲ್ಲಿ ನಡೆಯಬೇಕೆಂದು ಡಾ.ಅಂಬೇಡ್ಕರ್ ರವರೂ ಹೇಳಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿಎತ್ತಲು ಸಂವಿಧಾನದಲ್ಲಿ ಅವಕಾಶವಿದ್ದರೂ, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅವಕಾಶ ಯಾರಿಗೂ ನೀಡಲಾಗಿಲ್ಲ. ಶೃಂಗೇರಿಯಲ್ಲಿ ಮತ್ತೊಬ್ಬ ನಕ್ಸಲ್ ಇರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೂ ಅವರೂ ಕೂಡ ಕಾನೂನಿಗೆ ಶರಣಾಗಿ ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಕೋರುವುದಾಗಿ ತಿಳಿಸಿದರು.
ಅಂಬೇಡ್ಕರ್ ರವರ ಕುರಿತ ಕಾಂಗ್ರೆಸ್ ಬದ್ಧತೆಯನ್ನು ತೋರ್ಪಡಿಸುವ ಅಗತ್ಯವಿಲ್ಲ
ಕಾಂಗ್ರೆಸ್ ಸರ್ಕಾರಕ್ಕೆ ಅಂಬೇಡ್ಕರ್ ರವರ ಕುರಿತ ಬದ್ಧತೆಯನ್ನು ತೋರ್ಪಡಿಸುವ ಅಗತ್ಯವಿಲ್ಲ, ಸಂವಿಧಾನದ ರಕ್ಷಣೆಯಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರ, ಅದರ ಆಶಯಗಳ ಅನುಷ್ಠಾನಕ್ಕೆ ಬದ್ಧವಾಗಿದೆ ಎಂದು ತಿಳಿಸಿದರು.
ಡಾ.ಅಂಬೇಡ್ಕರ್ ರವರ ಕುರಿತು ಬಿಜೆಪಿಯವರ ಅಗೌರವದ ಹೇಳಿಕೆ :
ಡಾ.ಅಂಬೇಡ್ಕರ್ ರವರ ಜಪ ಮಾಡಬಾರದೆಂದು ಹೇಳುವ ಕೇಂದ್ರ ಸಚಿವ ಅಮಿತ್ ಶಾ ಅವರು ದಲಿತರ ಮನೆಗಳಿಗೆ ಭೇಟಿ ನೀಡಿ,ಡಾ.ಅಂಬೇಡ್ಕರ್ ಅಭಿಯಾನ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಡಾ. ಅಂಬೇಡ್ಕರ್ ಅವರ ಕುರಿತ ಅವರ ಹೇಳಿಕೆ, ಬಿಜೆಪಿಯವರಿಗೆ ಅಂಬೇಡ್ಕರ್ ರವರ ಮೇಲಿನ ಅಗೌರವವನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷದವರ ಕಾಲದಲ್ಲಿ ಸಂವಿಧಾನವನ್ನು ಅಂಬೇಡ್ಕರ್ ಅವರೇ ರಚಿಸಿದ್ದರು. ವಾಜಪೇಯಿಯವರ ಸರ್ಕಾರವಿದ್ದ ಸಂದರ್ಭದಲ್ಲಿ ಸಂವಿಧಾನ ಬದಲಾವಣೆಗೆ ಮುಂದಾಗಿದ್ದರು. ಸಂವಿಧಾನ ಬದಲಾವಣೆಗಾಗಿಯೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿಯ ಅನೇಕ ಸಚಿವರು ಹೇಳಿಕೆ ನೀಡಿದ್ದರು. ಆರ್ ಎಸ್ ಎಸ್ ನ ಪ್ರಮುಖರು ಸಂವಿಧಾನವನ್ನು ವಿರೋಧಿಸಿದ್ದರು ಎಂದರು.
ಕೇಂದ್ರದಲ್ಲಿ ಅಮಾನವೀಯ ಹಾಗೂ ರೈತವಿರೋಧಿ ಸರ್ಕಾರವಿದೆ
ನವದೆಹಲಿಯಲ್ಲಿ ಎಂಎಸ್ ಪಿ ಬೇಡಿಕೆ ಸಂಬಂಧ ರೈತರ ಬಹಳ ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಅವರ ನ್ಯಾಯಬದ್ಧ ಬೇಡಿಕೆಗೆ ಸ್ಪಂದಿಸುತ್ತಿಲ್ಲವೆಂಬ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿ, ಕೇಂದ್ರಸರ್ಕಾರ ರೈತರ ಪರವಾದ ಸರ್ಕಾರವಲ್ಲ. ಬೆಳೆಗಳಿಗೆ ಎಂಎಸ್ ಪಿ ನೀಡುವುದಕ್ಕೆ ಕಾನೂನು ರಚಿಸುವಂತೆ ರೈತರ ಬೇಡಿಕೆಯಾಗಿದ್ದು, ಈ ಬೇಡಿಕೆಗೆ ಮಣಿಯದ ಅಮಾನವೀಯ ಹಾಗೂ ರೈತವಿರೋಧಿ ಸರ್ಕಾರವಾಗಿದೆ. ನೂರಾರು ರೈತರು ಪ್ರತಿಭಟನೆಯನ್ನು ಪ್ರಾಣ ಕಳೆದುಕೊಂಡಿದ್ದರೂ ಸಹ ರೈತರ ಬೇಡಿಕೆಗೆ ಮಣಿಯುತ್ತಿಲ್ಲ ಎಂದರು.
ಆಶಾ ಕಾರ್ಯಕರ್ತರಿಗೆ 10,000 ರೂ. ಮಾಹೆಯಾನ
ಆಶಾ ಕಾರ್ಯಕರ್ತರ ಮುಷ್ಕರದ ಬಗ್ಗೆ ಪ್ರತಿಕ್ರಿಯೆ ನೀಡಿ, ಆಶಾ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗಿದೆ. ಈ ಮುಂಚೆ ಮಾಹೆಯಾನ 8000 ರೂ. ನೀಡಲಾಗುತ್ತಿದ್ದು, ಈಗ ಪ್ರೋತ್ಸಾಹಕಗಳನ್ನೂ ಸೇರಿದಂತೆ ಪ್ರತಿ ಮಾಹೆ 10,000 ರೂ.ಗಳ ವೇತನವನ್ನು ನೀಡಲು ನಿರ್ಧಾರ ಕೈಗೊಂಡಿದ್ದು, ಅವರು ಮುಷ್ಕರವನ್ನು ಕೈಬಿಡಲು ಸಮ್ಮತಿಸಿದ್ದಾರೆ ಹಾಗೂ ಈ ಮೊತ್ತವನ್ನು ನೀಡಲು, ಸರ್ಕಾರದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ತಿಳಿಸಿದರು.
ಚಾಮರಾಜನಗರದಲ್ಲಿ ಸಚಿವ ಸಂಪುಟ ಸಭೆ
ಚಾಮರಾಜನಗರದಲ್ಲಿ ಫೆಬ್ರವರಿ 15 ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. ಚಾಮರಾಜನಗರ ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಸಭೆ ನಡೆಸಲಾಗುವುದು ಎಂದರು.
key words: Naxal, Sringeri, surrender, mainstream, CM
SUMMARY:
No information about another Naxal in Sringeri, but let him also surrender to law and come into mainstream: CM