ಮೈಸೂರು,ಜನವರಿ,21,2021(www.justkannada.in): ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು, ಬೆಟ್ಟದಪುರ ಹೋಬಳಿಯ ಕೂರ್ಗಲ್ಲು ಗ್ರಾಮದಲ್ಲಿ ನವಶಿಲಾಯುಗ ಸಂಸ್ಕೃತಿಯ ಮಾನವನ ಕಲ್ಲಿನ ಕೊಡಲಿ ಮತ್ತು ಕಲ್ಲಿನ ಆಯುಧಗಳು ಹಾಗೂ ಹುಟ್ಟು ಬಂಡೆಯ ಮೇಲೆ ಆಯುಧಗಳನ್ನು ನಯಗೊಳಿಸಿ ಕೊಂಡಿರುವ, ಅರೆದಿರುವ ಎರಡು ಕುಳಿಗಳನ್ನು ಶೋಧ ಮಾಡಲಾಗಿದೆ.
ಕೂರ್ಗಲ್ಲು ಗ್ರಾಮದ ನೆಲೆಯು ಹೋಬಳಿ ಕೇಂದ್ರದಿಂದ 2 ಕಿ.ಮೀ, ತಾಲ್ಲೂಕು ಕೇಂದ್ರದಿಂದ 14 ಕಿ.ಮೀ, ಜಿಲ್ಲಾ ಕೇಂದ್ರದಿಂದ 74 ಕಿ.ಮೀ ದೂರದಲ್ಲಿದೆ. ಈ ಗ್ರಾಮದ ಭೂ ಭಾಗವನ್ನು ಗಂಗರ ರಾಜನಾದ ಭೂತುಗನ ರಾಣಿ ಪರಮಬ್ಬೆಯು ಆಳ್ವಿಕೆ ನಡೆಸುತ್ತಿದ್ದ ಭೂ ಪ್ರದೇಶವಾಗಿತ್ತು. (ಇ.ಸಿ.ಸಂ.4 ಶಾಸನ 28,ಕೂರಗಲ್ಲು) ಇದು 10ನೇ ಶತಮಾನದಿಂದ 17 ನೇ ಶತಮಾನದವರೆಗಿನ 8 ಶಾಸನಗಳಿರುವ ಶಾಸನೋಕ್ತ ಐತಿಹಾಸಿಕ ಗ್ರಾಮವಾಗಿದೆ.
ಗ್ರಾಮದ ನೆಲೆಯಲ್ಲಿ ಸುಮಾರು 4000 ವರ್ಷಗಳ ಕಾಲಮಾನದ ನವಶಿಲಾಯುಗ ಸಂಸ್ಕೃತಿಯ ಮಾನವನ ಕಲ್ಲಿನ ಕೊಡಲಿ ಮತ್ತು ಕಲ್ಲಿನಾಯುಧಗಳು ಹಾಗೂ ಹುಟ್ಟು ಬಂಡೆಯ ಮೇಲೆ ಆಯುಧಗಳನ್ನು ನಯಗೊಳಿಸಿ ಕೊಂಡಿರುವ, ಅರೆದಿರುವ ಎರಡು ಕುಳಿಗಳು ಶೋಧವಾಗಿವೆ, ಈ ಶೋಧನೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿಯೇ ಮೊಟ್ಟ ಮೊದಲ ಶೋಧನೆಯಾಗಿದೆ.
ಹಾಗೂ ಸುಮಾರು 3000 ಸಾವಿರ ವರ್ಷಗಳ ಕಾಲಾವಾಧಿಯ ಬೃಹತ್ ಶಿಲಾಯುಗ ಸಂಸ್ಕೃತಿಯ ಎರಡು ಕಲ್ಲು ವೃತ್ತವಿರುವ, ಮದ್ಯಭಾಗದಲ್ಲಿ ಶಿಲಾತೊಟ್ಟಿ ಸಮಾಧಿಗಳು, ಹಾಳಾಗಿರುವ ಕಂಡಿ ಕೋಣೆ ಶಿಲಾತೊಟ್ಟಿ ಸಮಾಧಿಗಳು, ಕಲ್ಲುವೃತ್ತ ಸಮಾಧಿಗಳು ಮತ್ತು ವಿವಿಧ ಬಣ್ಣಗಳ ಮಣ್ಣಿನ ಮಡಕೆಗಳ ತುಣುಕುಗಳು ಶೋಧವಾಗಿವೆ.
ಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಜಿ,ರಾಮದಾಸ ರೆಡ್ಡಿ ಅವರು ಕೂರ್ಗಲ್ಲು ಗ್ರಾಮದ ಜಯಣ್ಣ ಬಿನ್ ಜವರಪ್ಪ, ಮಹೇಶ್.ಕೆ.ಎನ್, ಗ್ರಾಮದ ಯಜಮಾನರಾದ ಕೆ.ಎಸ್. ಚಂದ್ರಣ್ಣ ಹಾಗೂ ಉಪನ್ಯಾಸಕ .ಬಿ,ಎಸ್.ಚರಣ್ಕುಮಾರ್, ಹೆಚ್.ಜೆ.ರಾಜು ಹಾಗೂ ಎನ್.ಎಸ್.ಎಸ್.ಸ್ವಯಂ ಸೇವಕ ಧನರಾಜ್,ಸಿ ಹಾಗೂ ಮಲ್ಲಪ್ಪ.ಎಸ್.ಪಿ. ವಿಕಾಸ್,ಎ.ಆರ್. ಅವರ ಸಹಕಾರದೊಂದಿಗೆ ಕ್ಷೇತ್ರಕಾರ್ಯ ಮಾಡಿ ನೆಲೆಯನ್ನು ಹಾಗೂ ಅವಶೇಷಗಳನ್ನು ಶೋಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೂರ್ಗಲ್ಲು ಗ್ರಾಮದ ಉತ್ತರಕ್ಕೆ ಜಯಣ್ಣ ಬಿನ್ ಜವರಪ್ಪ ಅವರ ಜಮೀನಿನಲ್ಲಿ ನವಶಿಲಾಯುಗ ಸಂಸ್ಕೃತಿಯ (4000 ವರ್ಷ) ಡಾಲೋರೈಟ್ ಡೈಕ್ ನ 5 ಇಂಚು ಉದ್ದದ ಕಲ್ಲಿನಕೊಡಲಿ, ರಂಧ್ರವಿರುವ ತಿರುಗಣಿ, ಅರೆಯುವ ಕಲ್ಲು, ಕಲ್ಲಿನ ಒನಕೆ ಇತರೆ ಕಲ್ಲಿನಾಯುಧಗಳು ದೊರಕಿವೆ ಹಾಗೂ ಹುಟ್ಟು ಬಂಡೆಯ ಮೇಲೆ ಆಯುಧಗಳನ್ನು ನಯಗೊಳಿಸಿ ಕೊಂಡಿರುವ 8 ಇಂಚು ಉದ್ದ, 5 ಇಂಚು ಆಗಲ, 5 ಇಂಚು ಆಳವಿರುವ ಹಾಗೂ 8 ಇಂಚು ಉದ್ದ, 6 ಇಂಚು ಅಗಲ, 6 ಇಂಚು ಆಳವಿರುವ ಎರಡು ಕುಳಿಗಳು ಶೋಧವಾಗಿವೆ, ಈ ತರಹದ ಕಲ್ಲಿನ ಕೊಡಲಿ ಮತ್ತು ಇತರೆ ಕಲ್ಲಿನಾಯುಧಗಳು ಹಾಗೂ ಆಯುಧಗಳನ್ನು ಅರೆದಿರುವ ಕುಳಿಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಂಗನಕಲ್ಲು, ಕುಪ್ಪಗಲ್ಲು ನೆಲೆಗಳ ಆಯುಧಗಳ ಹಾಗೂ ಕುಳಿಗಳ ಹಾಗೆ ಹೋಲಿಕೆ ಇವೆ. ಈ ಶೋಧನೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿಯೇ ಮೊಟ್ಟ ಮೊದಲ ಶೋಧನೆಯಾಗಿದೆ.
ಹಾಗೂ ಬೃಹತ್ ಶಿಲಾಯುಗ ಸಂಸ್ಕೃತಿಯ ಕಾಲದ ಕೆಂಪು, ಕಪ್ಪು ಬಣ್ಣದ ಹಾಗೂ ಕೆಂಪು ಮತ್ತು ಕಪ್ಪು ಬಣ್ಣದ ಮಡಕೆ ತುಣುಕುಗಳು ಮತ್ತು ಗಾಜಿನಂತೆ ಹೊಳೆಯುವ ಕಪ್ಪು ಬಣ್ಣದ ಮಡಕೆ ತುಣುಕುಗಳು, ಕೆಂಪು ಬಣ್ಣದ ಮಡಕೆಗಳ ಮೇಲೆ ಕೆಂಪು ಬಣ್ಣ ಲೇಪನ ಮಾಡಿದ ಮಡಿಕೆ ತುಂಡುಗಳು ದೊರಕಿವೆ. ಹಾಗೂ ಜಯಣ್ಣನವರ ಜಮೀನಿನಲ್ಲಿ ಹಾಳಾಗಿರುವ ಕಲ್ಲುವೃತ್ತ ಶಿಲಾತೊಟ್ಟಿ ಸಮಾಧಿಗಳು,ಇದೇ ಗ್ರಾಮದ ಕಾಳೇಗೌಡ ಬಿನ್ ಮರೀಗೌಡ, ರಾಮೇಗೌಡರವರ ಜಮೀನಿನಲ್ಲಿ ತ್ರುಟಿತ ಗೊಂಡಿರುವ ಕಂಡಿಕೋಣೆ ಶಿಲಾತೊಟ್ಟಿ ಸಮಾಧಿಗಳು,ಕಲ್ಲು ವೃತ್ತ ಸಮಾಧಿಗಳು,.ಬೆಟ್ಟದಪುರದ ನಾಗರಾಜು, ಕೂರ್ಗಲ್ಲಿನ ಅಣ್ಣಯ್ಯ,ಗೋವಿಂದಯ್ಯ ಇವರ ಜಮೀನುಗಳಲ್ಲಿ ಸುಮಾರು 23 ಅಡಿ, 19 ಅಡಿ ಸುತ್ತಳತೆ ಇರುವ ವಿವಿಧ ಆಳತೆಯ ಎರಡು ಕಲ್ಲು ವೃತ್ತವಿರುವ ಹಾಗೂ ಮದ್ಯಭಾಗದಲ್ಲಿ ಶಿಲಾತೊಟ್ಟಿ ಇರುವ 5 ಸಮಾಧಿಗಳು ಶೋಧವಾಗಿವೆ, ಸಮಾಧಿಗಳ ಮೇಲೆ 9 ಅಡಿ ಉದ್ದ, 3 ಅಡಿ ವಿಸ್ತಿರ್ಣದ ಬಂಡೆಗಳನ್ನು ಹಾಸಿದ್ದಾರೆ,
ಈ ತರಹದ ಸಮಾಧಿಗಳ ಹಾಗೂ ಅವಶೇಷಗಳ ಹಾಗೆ ನಾಗರಹೊಳೆ, ಬಂಡಿಪುರ ಆಭಯಾರಣ್ಯಗಳಲ್ಲಿ, ಇದೇ ತಾಲ್ಲೂಕಿನ ದೊಡ್ಡ ನೆರಳೆ,ಚಿಕ್ಕನೆರಳೆ, ಕೊಪ್ಪ, ಹೆಗ್ಗಡೆಹಳ್ಳಿ, ಬ್ರಹ್ಮಗಿರಿ, ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಆಯರಹಳ್ಳಿ, ಹುಣಸೂರು ತಾಲ್ಲೂಕಿನ ಆಯಿರಹಳ್ಳಿ, ರಾಮನಗರ, ಬೆಂಗಳೂರು ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ಈ ಸಮಾಧಿಗಳ ಹಾಗೆ ಹೋಲಿಕೆ ಇವೆ.
ಗ್ರಾಮದ ಭೂಭಾಗದಲ್ಲಿ ಚಿತ್ರಮಠ, ಕಳ್ಳರಗವಿ, ಚೌಡಮ್ಮನ ಕೊಳ, ಬಸವನ ಕಟ್ಟೆ, ಎಮ್ಮೆಬಸವೇಶ್ಪರ ದೇವಾಲಯ, ಉಪ್ಪರಿಗೆ ಬಸಪ್ಪ ದೇವಾಲಯ, ಸೀತೆಯ ಪಾದ, ನಾಲ್ಕು ಕಾಲು ಮಂಟಪ, ಸೀತೆಯ ಕಣ್ಣೀರು ಎಂದು ಕರೆಯುವ ಐತಿಹಾಸಿಕ ಸ್ಥಳಗಳು ಇಲ್ಲಿವೆ.
ಈ ತರಹದ ವಿವಿಧ ನಮೂನೆಯ ಸಮಾಧಿಗಳನ್ನು ಉತ್ಖನನಕ್ಕೆ ಒಳಪಡಿಸಿದ್ದು ಬೃಹತ್ ಶಿಲಾಯುಗ ಸಂಸ್ಕೃತಿ ಜನ ಸಮುದಾಯದ ಸಮಾಧಿ ಕ್ರಿ.ಪೂ. 800-700ಗಳೆಂದು ಖಚಿತಪಟ್ಟಿದೆ. ಈ ಶೋಧನೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿಯೇ ಮೊಟ್ಟ ಮೊದಲ ಶೋಧನೆಯಾಗಿದ್ದು ನೆಲೆ ಹಾಗೂ ಸಮಾಧಿಗಳನ್ನು ಕಿತ್ತು ಕೃಷಿಗೆ ಒಳಪಡಿಸಿ ಕೊಳ್ಳುತ್ತಿದ್ದಾರೆ. ಸಂರಕ್ಷಿಸುವ ಅಗತ್ಯವಿದೆ ಎಂದು ಡಾ.ಎಸ್.ಜಿ.ರಾಮದಾಸ ರೆಡ್ಡಿ ತಿಳಿಸಿದ್ದಾರೆ.
Keywords: Neolithic culture- stone- ax -finder -Korgallu village- Mysore district.