ಚನ್ನಪಟ್ಟಣ, ಶಿಗ್ಗಾವಿ : ಕುಟುಂಬ ರಾಜಕಾರಣಕ್ಕೆ ಮಣೆ ಹಾಕದ ಮತದಾರ

Channapatna, Shiggavi: Voter Rejects Nepotism in This Byelection

ಮೈಸೂರು, ನ.23,2024: (www.justkannada.in news) ಕರ್ನಾಟಕದಲ್ಲಿ ನಡೆದ ಮೂರು ಉಪ ಚುನಾವಣೆಗಳ ಪೈಕಿ ಎರಡರಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಹಾಗೂ ಮೊಮ್ಮಕ್ಕಳು ಅಖಾಡದಲ್ಲಿ ಸ್ಪರ್ಧಿಸುವ ಮೂಲಕ ಕುತೂಹಲ ಮೂಡಿಸಿದ್ದರು. ಆದರೆ ಕ್ಷೇತ್ರದ ಮತದಾರರು ವಂಶಾಪಾರಂಪರ್ಯಕ್ಕೆ ಮಣೆ ಹಾಕದೆ ಅವರನ್ನು ತಿರಸ್ಕರಿಸುವ ಮೂಲಕ ಪ್ರಬುದ್ಧತೆ ಮೆರೆದಿದ್ದಾರೆ.

ಅಖಾಡದಲ್ಲಿದ್ದ ನಿಖಿಲ್‌ ಕುಮಾರಸ್ವಾಮಿ ಹಾಗೂ ಭರತ್‌ ಬೊಮ್ಮಾಯಿ ಕ್ರಮವಾಗಿ ಚೆನ್ನಪಟ್ಟಣ ಹಾಗೂ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಮಾಜಿ ಮುಖ್ಯಮಂತ್ರಿ ಮಕ್ಕಳು- ಮೊಮ್ಮಕ್ಕಳು:

ನಿಖಿಲ್ ಕುಮಾರಸ್ವಾಮಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಗ, ಜತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರ ಮೊಮ್ಮಗ. ಕುಟುಂಬದ ಶ್ರೀರಕ್ಷೆ ಇದ್ದರು ಜನತೆ ಆರ್ಶೀವಾದ ಪಡೆಯುವಲ್ಲಿ ವಿಫಲ. ಇದು ಮೊದಲನೇ ಬಾರಿ ಏನಲ್ಲ. ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ರಾಮನಗರ ವಿಧಾನಸಭಾ ಚುನಾವಣೆ ಅಖಾಡಕ್ಕಿಳಿದು ಅಲ್ಲಿಯೂ ಸೋಲುಂಡಿದ್ದರು.

೨೦೧೯ ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್‌ ವಿರುದ್ಧ ಸ್ಪರ್ಧಿಸಿದ್ದರು. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಷ್‌ ಅವರು ೭೦೩,೬೬೦ ಮತಗಳನ್ನು ಪಡೆದರೆ. ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ೫೭೭೭೮೪ ಮತಗಳನ್ನು ಪಡೆದು ಸೋಲು ಅನಭವಿಸಿದ್ದರು.

ಬಳಿಕ ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿಖಿಲ್‌ ಕುಮಾರಸ್ವಾಮಿ, ೭೬,೯೭೫ ಮತಗಳನ್ನು ಪಡೆದರು. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಎಚ್. ಎ. ಇಕ್ಬಾಲ್‌ ಹುಸೇನ್‌ ೮೭,೬೯೦ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.

ಈ ಬಾರಿ ಮತ್ತೆ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಿಂದ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದ ನಿಖಿಲ್.‌ ತಂದೆ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿಖಿಲ್.‌

ಕುಟುಂಬದ ಕುಡಿಯನ್ನು ಶತಾಯಗತಾಯ ಗೆಲ್ಲಿಸಿಕೊಳ್ಳಲೇ ಬೇಕು ಎಂದು ಪಣತೊಟ್ಟಿದ್ದ ದೊಡ್ಡಗೌಡರ ಕುಟುಂಬ. ಖುದ್ದು ಮಾಜಿ ಪ್ರಧಾನಿ ದೇವೇಗೌಡರೇ ಕ್ಷೇತ್ರದಲ್ಲಿ ಒಂದು ವಾರ ಮೊಕ್ಕಾಂ ಹೂಡಿದ್ದರು. ಹಲವಾರು ಬಹಿರಂಗ ಸಭೆಗಳಲ್ಲಿ ಭಾಗವಹಿಸಿ ಮೊಮ್ಮಗನ ಬಗ್ಗೆ ಅಬ್ಬರ ಪ್ರಚಾರ ಮಾಡಿದ್ದರು. ಇಳಿ ವಯಸ್ಸನ್ನು ಲೆಕ್ಕಿಸದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದರು. ಮತ್ತೊಂದೆಡೆ ಕುಮಾರಸ್ವಾಮಿ ಹಾಗೂ ನಿಖಿಲ್‌ ಬಹಿರಂಗ ಪ್ರಚಾರದಲ್ಲಿ ಕಣ್ಣೀರಧಾರೆ ಹರಿಸಿದ್ದರು. ಆದರೆ, ಚುನಾವಣೆಯಲ್ಲಿ ಇದ್ಯಾವುದು ಲೆಕ್ಕಕ್ಕೆ ಬಂದಿಲ್ಲ .ಕ್ಷೇತ್ರದ ಮತದಾರರು ದೊಡ್ಡ ಗೌಡರ ಕುಟುಂಬ ತಿರಸ್ಕರಿಸಿ ಕಾಂಗ್ರೆಸ್‌ ಬೆಂಬಲಿಸಿದ್ದು ಎದ್ದು ಕಂಡಿದೆ.

ಬೊಮ್ಮಾಯಿ ಕುಟುಂಬ:

ಮತ್ತೊಂದೆಡೆ, ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲೂ ಜನ ಬೊಮ್ಮಾಯಿ ಕುಟುಂಬವನ್ನು ತಿರಸ್ಕರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಪುತ್ರ ಭರತ್‌ ಬೊಮ್ಮಾಯಿ ಅಭ್ಯರ್ಥಿಯನ್ನಾಗಿ ಅಖಾಡಕ್ಕೆ ಇಳಿಸಲಾಯಿತು. ಆರಂಭದಲ್ಲಿ ಬಸವರಾಜ ಬೊಮ್ಮಾಯಿ, ನನ್ನ ಮಗ ಯಾವುದೇ ಕಾರಣಕ್ಕೂ ಅಭ್ಯರ್ಥಿಯಲ್ಲ ಎಂದೇ ಹೇಳುತ್ತಿದ್ದರಾದರೂ ಅಂತಿಮವಾಗಿ ಪುತ್ರನನ್ನೇ ಅಭ್ಯರ್ಥಿಯನ್ನಾಗಿಸಿದರು. ಇದಕ್ಕೆ ಪಕ್ಷದ ಹೈಕಮಾಂಡ್‌ ಆದೇಶ ಎಂಬ ಸಬೂಬು ನೀಡಿದ್ದರು. ಭರತ್‌ ಬೊಮ್ಮಾಯಿ ಸಹ ಮಾಜಿ ಮುಖ್ಯಮಂತ್ರಿ ಎಸ್.‌ ಆರ್.‌ ಬೊಮ್ಮಾಯಿ ಮೊಮ್ಮಗ .

ಇಲ್ಲೂ ಕ್ಷೇತ್ರದ ಜನ ವಂಶಪಾರಂಪರ್ಯಕ್ಕೆ ಮಣೆ ಹಾಕಿಲ್ಲ. ಬದಲಿಗೆ ಕಳೆದ ಚುನಾವಣೆಯಲ್ಲಿ ಸೋತ್ತಿದ್ದ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್ ಪಠಾಣ್‌ ಗೆ ಮತ ಹಾಕಿ ಜಯಶೀಲರನ್ನಾಗಿ ಮಾಡಿದ್ದಾರೆ.‌

key words:  Channapatna, Shiggavi, Voter Rejects, Nepotism, in Byelection