ಕೊಪ್ಪಳ,ಜೂನ್,21,2021(www.justkannada.in): ರಾಜ್ಯಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ನಾನು ಎಲ್ಲೂ ಕೂಡ ಸಿಎಂ ಆಗ್ತೇನೆ ಎಂದು ಹೇಳಿಲ್ಲ. ಚುನಾವಣೆಯಲ್ಲಿ ಗೆದ್ಧ ಬಳಿಕ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.
ಕೊಪ್ಪಳದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಮ್ಮಲ್ಲಿ ಡಿಕೆಶಿ ಬಣ, ಸಿದ್ಧರಾಮಯ್ಯ ಬಣ ಅಂತಾ ಯಾವುದೇ ಬಣಗಳಿಲ್ಲ. ನಮ್ಮಲ್ಲಿರುವುದು ಅಖಿಲ ಭಾರತೀಯ ಕಾಂಗ್ರೆಸ್ ಬಣ. ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿರುವುದು ಬೇರೆ ಕೆಲಸಕ್ಕೆ. ನನಗೆ ಹೇಳಿಯೇ ಅವರು ಹೋಗಿದ್ದಾರೆ ಎಂದರು.
ಕೊರೋನಾ ಸಂಕಷ್ಟದಲ್ಲಿ ನಾನು ಸಿಎಂ ಸ್ಥಾನದಲ್ಲಿದ್ದಿದ್ದರೇ ರಾಜ್ಯದ ಜನರಿಗೆ 10 ಕೆ.ಜಿ ಅಕ್ಕಿ ಕೊಡುತ್ತಿದ್ದೆ. 10 ಸಾವಿರ ರೂ. ಪರಿಹಾರ 10 ಕೆ.ಜಿ ಅಕ್ಕಿ ನೀಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಸಲಹೆ ನೀಡಿದ್ದೆ. ಆದರೆ ಬಿಎಸ್ ಯಡಿಯೂರಪ್ಪ ಸರ್ಕಾರ ಜಪ್ಪಯ್ಯ ಅಂದ್ರೂ ಒಪ್ಪಲಿಲ್ಲ. ಹೀಗಾಗಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿ ಇರಕೂಡದು. ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಲ್ಲಿ ಬಿಎಸ್ ವೈ ಇರಬಾರದು ಎಂದು ಸಿದ್ಧರಾಮಯ್ಯ ಹೇಳಿದರು.
ರಾಜ್ಯದಲ್ಲಿ 2ನೇ ಅಲೆಯಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಬಿಎಸ್ ವೈ ಕಾರಣ. 2ನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಿಲ್ಲ. ಸಿದ್ದತೆ ಮಾಡಿಕೊಂಡಿದ್ದರೇ ಇಷ್ಟೊಂದು ಜನ ಸಾಯುತ್ತಿರಲಿಲ್ಲ ಎಂದು ತಿಳಿಸಿದರು.
ಮೋದಿ ಅಚ್ಚೇ ದಿನ್ ಬರುತ್ತೆ ಅಂದಿದ್ರು, ಅಚ್ಚೆ ದಿನ್ ಬಂದಿದ್ದೇಯಾ. ಯಡಿಯೂರಪ್ಪ ನೇತೃತ್ವದ ಸರ್ಕಾರ ಲೂಟಿ ಹೊಡೆಯುತ್ತಿದ್ದಾರೆ. ಅವರಿಗೆ ಲೂಟಿ ಹೊಡೆಯೋದು ಬಿಟ್ಟರೇ ಬೇರೇನು ಮಾಡುತ್ತಿಲ್ಲ. ಬಿಎಸ್ ವೈ ಮಗ ಸೇರಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಇದನ್ನ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಬೆಲ್ಲದ್ ಸಿಪಿ ಯೋಗೇಶ್ವರ್, ಹೆಚ್. ವಿಶ್ವನಾಥ್ ಯತ್ನಾಳ್, ಹೇಳುತ್ತಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನರ ಜೀವನ ದುಸ್ತರವಾಗಿದೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
Key words: never said -CM -Opposition leader- Siddaramaiah- clarified.