ಬೆಂಗಳೂರು, ಸೆಪ್ಟೆಂಬರ್,24, 2021 (www.justkannada.in): ಥಲಸ್ಸೇಮಿಯಾ (ಅನುವಂಶಿಕ ರಕ್ತದ ಖಾಯಿಲೆ) ಖಾಯಿಲೆಯಿಂದ ಬಳಲುವ ಮಕ್ಕಳಿಗೆ ಚಿಕಿತ್ಸೆ ಕಲ್ಪಿಸುವ ಹೊಸ ಬೋನ್ ಮ್ಯಾರೊ ಕಸಿ (ಬಿಎಂಟಿ) ಘಟವನ್ನು ಬುಧವಾರ ಬೆಂಗಳೂರು ನಗರದಲ್ಲಿ ಉದ್ಘಾಟಿಸಲಾಯಿತು. ಈ ಹೊಸ ಘಟಕ ಪ್ರತಿ ವರ್ಷ ಕನಿಷ್ಟ 120 ಮಕ್ಕಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಹೊಂದಿದೆ.
ರಕ್ತ ವರ್ಗಾವಣೆ (blood transfusion) ಅಗತ್ಯವಿರುವಂತಹ ಥಲಸ್ಸೇಮಿಯಾ ರೋಗಿಗಳಿಗೆ ಅದರಲ್ಲಿಯೂ ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಅಗತ್ಯವಿರುವವರಿಗೆ ನೆರವಾಗುತ್ತಿರುವಂತಹ, ಬೆಂಗಳೂರು ನಗರದ ಸಂಕಲ್ಪ್ ಇಂಡಿಯಾ ಫೌಂಡೇಷನ್ ಎಂಬ ಹೆಸರಿನ ಸರ್ಕಾರೇತರ ಸಂಸ್ಥೆ, ನಗರದ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಈ ಬೋನ್ ಮ್ಯಾರೊ ಟ್ರ್ಯಾನ್ಸ್ಪ್ಲಾಂಟ್ (ಬಿಎಂಟಿ) ಕೇಂದ್ರವನ್ನು ಸ್ಥಾಪಿಸುವ ಮೂಲಕ ಸಮಾಜ ಸೇವೆಯ ತನ್ನ ನಿಲುವಿನ ಕಡೆ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಅಂದಾಜು ರೂ.೫.೫ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹೊಸ ಬಿಎಂಟಿ ಘಟಕಕ್ಕೆ ಜರ್ಮನ್ ಬೊನ್ ಮ್ಯಾರೊ ಡೋನಾರ್ ಸೆಂಟರ್, ಡಿಕೆಎಂಎಸ್ ಹಣಕಾಸಿನ ನೆರವು ಒದಗಿಸಿದೆ.
ಥಲಸ್ಸೆಮಿಯಾ ಎಂದರೇನು?
ಥಲಸ್ಸೆಮಿಯಾ ಒಂದು ಅನುವಂಶಿಕ ರಕ್ತದ ಕಾಯಿಲೆ. ವಿವಿಧ ರೀತಿಯ ಥಲಸ್ಸೆಮಿಯಾಗಳು ಇವೆ. ಮುಖ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಆಲಸ್ಯ, ಕಿರಿಕಿರಿ ಉಂಟಾಗುವುದು, ನಿದ್ರಾಹೀನತೆ, ಆಹಾರ ಸೇವನೆಯನ್ನು ತ್ಯಜಿಸುವುದು, ಮಂಕಾದ ಮುಖ, ಹೊಟ್ಟೆ ಉಬ್ಬುವಿಕೆ, ಆಗಾಗ ಕಾಣಿಸಿಕೊಳ್ಳುವ ಅನಾರೋಗ್ಯ, ಕಡಿಮೆ ತೂಕ ಇವೆಲ್ಲವೂ ರೋಗದ ಮುಖ್ಯ ಲಕ್ಷಣಗಳು.
ಥಲಸ್ಸೆಮಿಯಾ ಖಾಯಿಲೆಗೆ ಬೋನ್ ಮ್ಯಾರೊ ಕಸಿ ಒಂದೇ ಶಾಶ್ವತ ಪರಿಹಾರವಾಗಿದ್ದು, ಒಂದು ಬಾರಿ ಕಸಿ ವಿಧಾನಕ್ಕೆ ರೂ.೨೦ ಲಕ್ಷ ವೆಚ್ಚವಾಗುತ್ತದೆ. ಸಂಕಲ್ಪ್ ಫೌಂಡೇಷನ್ ಈಗಾಗಲೇ ೧೫ ಮಕ್ಕಳಿಗೆ ಬೋನ್ ಮ್ಯಾರೊ ಕಸಿ ಚಿಕಿತ್ಸೆಯನ್ನು ಕಲ್ಪಿಸಿದೆ.
ಸಂಕಲ್ಪ್ ಫೌಂಡೇಷನ್ ನ ನೆರವಿನೊಂದಿಗೆ ಎರಡು ವರ್ಷಗಳ ಹಿಂದೆ ಬೋನ್ ಮ್ಯಾರೊ ಕಸಿ ಚಿಕಿತ್ಸೆ ಪಡೆದಂತಹ ಏಳು-ವರ್ಷ-ವಯಸ್ಸಿನ ಮಗುವಿನ ತಾಯಿ ಪದ್ಮಾವತಿ ಅವರು ಹೇಳುವಂತೆ, ” ನನ್ನ ಮಗ ಅನುಭವಿಸುತ್ತಿದ್ದಂತಹ ಗಂಭೀರ ಸ್ವರೂಪದ ನೋವು ಹಾಗೂ ಬಳಲುವಿಕೆಯಿಂದ ಸಂಕಲ್ಪ್ ಫೌಂಡೇಷನ್ ನಿಂದ ಪರಿಹಾರ ಪಡೆಯಲು ನೆರವಾಯಿತು. ನನ್ನ ಮಗ ಒಂದು ವರ್ಷದವನಿದ್ದಾಗಲೇ ಅವನಿಗೆ ಥಲಸ್ಸೆಮಿಯಾ ಇರುವುದು ಖಾತ್ರಿಯಾಯಿತು. ಅಂದಿನಿಂದ ಈ ಬೋನ್ ಮ್ಯಾರೊ ಕಸಿ ಚಿಕಿತ್ಸೆ ಪಡೆಯುವ ದಿನದವರೆಗೆ ಆತನನ್ನು ನಿರಂತರವಾಗಿ ರಕ್ತ ವರ್ಗಾವಣೆಗಾಗಿ ಆಸ್ಪತ್ರೆಗೆ ಕರೆತರಬೇಕಾಗುತಿತ್ತು,” ಎಂದರು.
“ಆದರೆ ಈ ಕಸಿ ಚಿಕಿತ್ಸೆ ನಂತರ ನನ್ನ ಮಗ ಚೇತರಿಸಿಕೊಂಡಿದ್ದಾನೆ. ಆತನಿಗೆ ಕಳೆದ ವರ್ಷ ಕೋವಿಡ್-19 ಸೋಂಕು ತಗುಲಿತು. ಆಗ ನಮಗೆ ಬಹಳ ಚಿಂತೆಯಾಗಿತ್ತು. ಆದರೆ ಆತ ಚೆನ್ನಾಗಿ ಚೇತರಿಸಿಕೊಂಡ,” ಎಂದು ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಹಾಜರಿದ್ದಂತಹ ಫಲಾನುಭವಿಯ ತಾಯಿ ಪದ್ಮಾವತಿ ಅವರು ತಿಳಿಸಿದರು.
ರೋಗಿಯ ಕುಟುಂಬಸ್ಥರು ಚಿಕಿತ್ಸೆಯ ಒಟ್ಟು ವೆಚ್ಚದ ಪೈಕಿ ಶೇ.10ರಷ್ಟು ವೆಚ್ಚವನ್ನು ಭರಿಸಿದರು. ಉಳಿದ ಮೊತ್ತವನ್ನು ಸಂಕಲ್ಪ್ ಫೌಂಡೇಷನ್ ವತಿಯಿಂದ ಒದಗಿಸಲಾಯಿತು. ಇತರೆ ಫಲಾನುಭವಿಗಳ ಪೈಕಿ ಇತರೆ ರಾಜ್ಯಗಳವರೂ ಇದ್ದಾರೆ. ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಒಬ್ಬ ವ್ಯಕ್ತಿ ರಕ್ತದ ಕ್ಯಾನ್ಸರ್ ಅಥವಾ ಮತ್ಯಾವುದಾದರೂ ರೀತಿಯ ರಕ್ತದ ತೊಂದರೆಗಳಿಗೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ೪೨ ದಶಲಕ್ಷ ರೋಗಿಗಳಿದ್ದು, ವಿಶ್ವದ ಥಲಸ್ಸೆಮಿಯಾ ರಾಜಧಾನಿ ಎಂದೇ ಹೆಸರು ಗಳಿಸಿದೆ. ಬೋನ್ ಮ್ಯಾರೊ ಕಸಿ ಚಿಕಿತ್ಸೆಗೆ ಅತ್ಯಂತ ಬೇಡಿಕೆಯಿದೆ. ಆದರೆ ಚಿಕಿತ್ಸೆ ಒದಗಿಸುವ ಸೌಲಭ್ಯಗಳು ಬಹಳ ಕಡಿಮೆ ಇದೆ.
ಸಂಕಲ್ಪ್ ಇಂಡಿಯಾ ಫೌಂಡೇಷನ್ನ ಅಧ್ಯಕ್ಷ ಲಲಿತ್ ಪಾಲ್ಮರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಈ ಹೊಸ ಘಟಕದಲ್ಲಿ ವಾರ್ಷಿಕ ೧೨೦ ಮಕ್ಕಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಈ ಹೊಸ ಘಟಕದಲ್ಲಿ ಸಮರ್ಪಿತ ತಂಡ ಹಾಗೂ ಅತ್ಯುತ್ಕೃಷ್ಟ ತರಬೇತಿ ಹೊಂದಿರುವ ಅಂತಾರಾಷ್ಟ್ರಿಯ ಮಟ್ಟದ ತಜ್ಞರ ತಂಡವಿದ್ದು, ಇಲ್ಲಿಗೆ ಬರುವ ರೋಗಿಗಳಿಗೆ ಸಾಧ್ಯವಾದಷ್ಟೂ ಅತ್ಯುತ್ತಮ ಚಿಕಿತ್ಸಾ ಸೌಲಭ್ಯ ಒದಗಿಸುವುದು ನಮ್ಮ ಗುರಿಯಾಗಿದೆ. ಅಹ್ಮದಾಬಾದ್ ನಲ್ಲಿರುವ ಮತ್ತೊಂದು ಘಟಕದೊಂದಿಗೆ ಈ ಕೇಂದದ ಸ್ಥಾಪನೆಯೊಂದಿಗೆ ಕಸಿ ಚಿಕಿತ್ಸೆಗಾಗಿ ಲಭ್ಯಗೊಳಿಸುವ ಹಾಸಿಗೆಗಳ ಸಂಖ್ಯೆಯನ್ನು 14ಕ್ಕೆ ಹೆಚ್ಚಿಸಿದಂತಾಗಿದೆ. ಈ ಪ್ರಕಾರವಾಗಿ ಭಾರತವನ್ನು ಥಲಸ್ಸೆಮಿಯಾ ಮುಕ್ತ ರಾಷ್ಟ್ರವನ್ನಾಗಿ ಮಾಡುವ ನಮ್ಮ ಸಂಸ್ಥೆಯ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗಿದೆ,” ಎಂದು ವಿವರಿಸಿದರು.
Key words: New Bone- Marrow- Transplant -Facility – Bangalore