ನವದೆಹಲಿ, ಸೆಪ್ಟೆಂಬರ್ ,7, 2022 (www.justkannada.in): ಪುಣೆ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಪದವೀಧರ ಲಕ್ಷ್ಮಣ್ ನರಸಿಂಹನ್ ಅವರು ಇತ್ತೀಚೆಗೆ ವಿಶ್ವದ ಅತೀ ಜನಪ್ರಿಯ ಕಾಫಿ ಜಾಯಿಂಟ್ ಕಂಪನಿ ಸ್ಟಾರ್ಬಕ್ಸ್ ನ ನೂತನ ಸಿಇಓ ಆಗಿ ನೇಮಕಗೊಂಡಿದ್ದಾರೆ. ವರದಿಗಳ ಪ್ರಕಾರ ಸ್ಟಾರ್ ಬಕ್ಸ್ ಅವರಿಗೆ ಬೃಹತ್ ಮೊತ್ತದ ವೇತನವನ್ನು ನೀಡಲು ಮುಂದಾಗಿದೆ.
‘ದಿ ಗಾರ್ಡಿಯನ್’ ಪ್ರಕಾರ ನರಸಿಂಹನ್ ಅವರ ವಾರ್ಷಿಕ ವೇತನ ವಿವಿಧ ಭತ್ಯೆಗಳು ಒಳಗೊಂಡಂತೆ 17.5 ದಶಲಕ್ಷ ಡಾಲರ್ ಗಳಿರಬಹುದು ಎಂದು ಅಂದಾಜಿಸಲಾಗಿದೆ. ಮತ್ತೊಂದು ವರದಿಯ ಪ್ರಕಾರ ನರಸಿಂಹನ್ ಅವರು ವಾರ್ಷಿಕ 13 ಲಕ್ಷ ಯುಎಸ್ ಡಾಲರ್ ಗಳ ವೇತನದ ಜೊತೆಗೆ, ವಾರ್ಷಿಕ ತಲುಪಬೇಕಾದ ಗುರಿಯನ್ನು ಆಧರಿಸಿ ಅವರ ಮೂಲ ವೇತನದ ಮೇಲೆ ೨೦೦ರಷ್ಟು ಹೆಚ್ಚಿನ ನಗದು ಪ್ರೋತ್ಸಾಹಧನವನ್ನು ಪಡೆಯಲಿದ್ದಾರೆ.
ಅದಷ್ಟೇ ಅಲ್ಲ. ಸ್ಟಾರ್ ಬಕ್ಸ್ ನರಸಿಂಹನ್ ಅವರಿಗೆ ೧.೬ ದಶಲಕ್ಷ ಡಾಲರ್ ಗಳ ಬೋನಸ್ ಜೊತೆಗೆ ೯.೩ ದಶಲಕ್ಷ ಡಾಲರ್ ಗಳ ಮೊತ್ತದ ಶೇರುಗಳನ್ನೂ ಸಹ ನೀಡಲಿದೆಯಂತೆ. ಈ ಹಿಂದೆ ರೆಕ್ಕಿಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ನರಸಿಂಹನ್ ಅವರು ೨೦೨೧ರಲ್ಲಿ ೬ ದಶಲಕ್ಷ ಯೂರೊಗಳ ವೇತನ ಪಡೆಯುತ್ತಿದ್ದರು.
ನರಸಿಂಹನ್ ಅವರು ಪ್ರಸ್ತುತ ೫ ದಶಕಗಳಷ್ಟು ಹಳೆಯ ಅತ್ಯಂತ ಜನಪ್ರಿಯ ಕಾಫಿ ಚೇನ್ ಸ್ಟಾರ್ ಬಕ್ಸ್ ಕಾಫಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಈ ಕಂಪನಿಯು ವಿಶ್ವದಾದ್ಯಂತ ೩೪,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಮಳಿಗೆಗಳನ್ನು ಹೊಂದಿದ್ದು, ಪ್ರೀಮಿಯರ್ ರೋಸ್ರ್ಹಾಗೂ ವಿಶೇಷ ಕಾಫಿಯ ರೀಟೆಲರ್ ಕಂಪನಿಯೂ ಆಗಿದೆ.
ನರಸಿಂಹನ್ ಅವರು ಲಂಡನ್ನಿಂದ ಸೀಟ್ಟಲ್ ಗೆ ಸ್ಥಳಾಂತರಗೊಂಡ ನಂತರ, ಅಕ್ಟೋಬರ್ ೧ರಂದು ಸಿಇಓ ಆಗಿ ಸೇರ್ಪಡೆಗೊಳ್ಳಲಿದ್ದು, ಸ್ಟಾರ್ಬಕ್ಸ್ ನ ಮಧ್ಯಂತರ ಮುಖ್ಯಸ್ಥ ಹೊವಾರ್ಡ್ ಶೂಲ್ಟ್ ಝ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದ್ದಾರೆ. ಏಪ್ರಿಲ್ ೧, ೨೦೨೩ರಂದು ಬೋರ್ಡ್ ಗೆ ಸೇರ್ಪಡೆಗೊಳ್ಳಲಿದ್ದಾರೆ.
ನರಸಿಂಹನ್ ಅವರು ಜಾಗತಿಕ ಮಟ್ಟದ ಗ್ರಾಹಕ ಬ್ರ್ಯಾಂಡ್ ಗಳನ್ನು ಮುನ್ನಡೆಸುವ ಹಾಗೂ ಸಲಹೆ ನೀಡುವ ಕೆಲಸದಲ್ಲಿ ೩೦ ವರ್ಷಗಳ ಅಪಾರ ಅನುಭವವನ್ನು ಪಡೆದಿದ್ದಾರೆ. ಇತ್ತೀಚೆಗೆ ಅವರು ರೆಕ್ಕಿಟ್ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರುವ ನರಸಿಂಹನ್ ಅವರು ಪೆಪ್ಸಿಕೊ ಕಂಪನಿಯಲ್ಲಿ ಗ್ಲೋಬಲ್ ಚೀಫ್ ಕಮರ್ಷಿಯಲ್ ಅಧಿಕಾರಿ ಒಳಗೊಂಡಂತೆ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಅವರು ದೀರ್ಘಾವಧಿ ಕಾರ್ಯ ತಾಂತ್ರಿಕ ಹಾಗೂ ಡಿಜಿಟಲ್ ಸಾಮರ್ಥ್ಯಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಸುದ್ದಿ ಮೂಲ: ದಿ ಎಕನಾಮಿಕ್ ಟೈಮ್ಸ್
Key words: new CEO -Star Bucks – Laxman Narasimhan – huge -salary.