ಶಿವಮೊಗ್ಗ,ಸೆಪ್ಟಂಬರ್,12,2023(www.justkannada.in): ಆಡಳಿತಾರೂಢ ಸರ್ಕಾರದ ನೂತನ ಶೈಕ್ಷಣಿಕ ಯೋಜನೆಗಳು ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ಕರೆತರುವಲ್ಲಿ ಸಹಕಾರಿಯಾಗಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.
ಇಂದು ಸೊರಬ ತಾಲೂಕು ಕುಬಟೂರಿನ ಕೆರೆಗೆ ತಮ್ಮ ಕುಟುಂಬದ ಸದಸ್ಯರು ಹಾಗೂ ಊರಿನ ಗ್ರಾಮಸ್ಥರೊಂದಿಗೆ ಬಾಗಿನ ಸಮರ್ಪಿಸಿದ ನಂತರ ಅಲ್ಲಿನ ಶಾಲಾ ಆವರಣದಲ್ಲಿ ಸಸ್ಯ ಶ್ಯಾಮಲ ಯೋಜನೆಯಡಿ ಸಸಿಗಳನ್ನು ನೆಟ್ಟು, ಗ್ರಾಮಸ್ಥರಿಂದ ನಾಗರಿಕ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಿಂದ ದೂರ ಸರಿಯದಂತೆ ಹಾಗೂ ವಿದ್ಯಾರ್ಥಿಗಳು ನಿರಂತರವಾಗಿ ಓದಿನಲ್ಲಿ ತೊಡಗಿ ಕೊಳ್ಳುವಂತೆ ಎರಡು ಬಾರಿ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಸುಮಾರು 11,9000 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆ ಪೈಕಿ 41 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿ ತಮ್ಮ ಓದನ್ನು ಮುಂದುವರೆಸಿರುವುದು ಸಂತಸ ಎನಿಸಿದೆ ಎಂದರು.
ಮಕ್ಕಳಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಲಾಗಿದೆ. ಈ ದಿಸೆಯಲ್ಲಿ ಮಕ್ಕಳಲ್ಲಿ ಪರಿಸರದ ಕುರಿತು ಭಾವನಾತ್ಮಕ ಸಂಬಂಧಗಳು ಸೃಜಿಸಬೇಕು. ಆ ನಿಟ್ಟಿನಲ್ಲಿ ರಾಜ್ಯದ ಪ್ರತಿ ಶಾಲೆಯಲ್ಲಿ ಮಕ್ಕಳೆ ಗಿಡಗಳನ್ನು ನೆಟ್ಟು ಪೋಷಿಸುವ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದಾಗಿ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಪ್ರಕೃತಿ- ಪರಿಸರದ ಕಾಳಜಿ ಬರಲಿದೆ ಅಲ್ಲದೆ ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಕಾಣಬಹುದಾಗಿದೆ. ಪ್ರಸ್ತುತ ಈ ಯೋಜನೆಯಡಿ ಸೆ. 22ರ ಒಳಗಾಗಿ ರಾಜ್ಯದಲ್ಲಿ 50 ಲಕ್ಷ ಸಸಿಗಳನ್ನು ನೀಡಲಾಗುವುದು ಎಂದರು.
ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈಗಾಗಲೇ 4 ಕೋಟಿ ಗಿಡಗಳನ್ನು ನೀಡಿದ್ದು ಇನ್ನೂ ಒಂದು ಕೋಟಿ ಸಸಿಗಳನ್ನು ನೀಡಲಿದೆ ಎಂದರು.
Key words: New scheme -implemented – bring- children – – education – Minister – Madhu Bangarappa