ಬೆಂಗಳೂರು,ಜುಲೈ,22,2024 (www.justkannada.in): ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ 64 ಹೊಸ ತಾಲ್ಲೂಕುಗಳಿಗೂ ಸ್ವಂತ ಆಡಳಿತ ಕಚೇರಿ ನಿರ್ಮಾಣ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಸಭೆ ಕಲಾಪದಲ್ಲಿ ಇಂದು ಉತ್ತರ ನೀಡಿದ ಸಚಿವ ಕೃಷ್ಣಭೈರೇಗೌಡ , ಹೊಸ ತಾಲ್ಲೂಕುಗಳು ರಚನೆಯಾಗಿ 6 ವರ್ಷಗಳಾದರೂ 14 ತಾಲೂಕುಗಳಲ್ಲಿ ಮಾತ್ರ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಉಳಿದ ತಾಲೂಕುಗಳಿಗೆ ಇನ್ನೂ ಸರ್ಕಾರಿ ಕಟ್ಟಡಗಳು ಮಂಜೂರೇ ಆಗಿಲ್ಲ. ಈ ಬಗ್ಗೆ ನಾನು ಹಿಂದಿನ ಅಧಿವೇಶನದಲ್ಲೇ ಹೇಳಿದ್ದೇನೆ. ಮುಂದಿನ ಮೂರು ವರ್ಷದಲ್ಲಿ ಎಲ್ಲಾ ಹೊಸ ತಾಲೂಕುಗಳಿಗೂ ತಾಲೂಕು ಆಡಳಿತ ಕಚೇರಿ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಏನೇ ಸವಾಲು ಬಂದರೂ ಸಹ ಹೊಸ ತಾಲ್ಲೂಕುಗಳಿಗೆ ನಾವು ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಡುತ್ತೇವೆ. ಸಿಬ್ಬಂದಿ ನಿಯೋಜನೆಯನ್ನೂ ಮಾಡಿಕೊಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Key words: new taluks, administrative office, Minister, Krishnabhairegowda