ಬೆಂಗಳೂರು, ಜನವರಿ 02, 2021 (www.justkannada.in): ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್.ನಿರಾಣಿ ಅವರು ‘ಹೊಸ ವರ್ಷದ ಬಂಪರ್ ಕೊಡುಗೆ’ ನೀಡಿದ್ದಾರೆ.
ಸಚಿವ ಮುರುಗೇಶ್ ನಿರಾಣಿಯವರು ಹೊಸ ವರ್ಷದಲ್ಲಿ ’10 ವರ್ಷಗಳ ಲೀಸ್ ಕಮ್ ಸೇಲ್ ಡೀಡ್’ ನೂತನ ನಿಯಮವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ಸಂಕಲ್ಪ ತೊಟ್ಟಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಮೂಲಕ ಕೈಗಾರಿಕಾ ಉದ್ದೇಶಗಳಿಗೆ ಹಂಚಿಕೆಯಾದ 2 ಎಕರೆಗೂ ಹೆಚ್ಚಿನ ಭೂಮಿಯನ್ನು 10 ವರ್ಷಗಳ ಅವಧಿಯ ಭೋಗ್ಯ ಮತ್ತು ಮಾರಾಟಕ್ಕೆ (ಲೀಸ್ ಕಂ ಸೇಲ್ ) ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿದೆ.
ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಬಂಡವಾಳ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಸುಲಲಿತ ವಹಿವಾಟು ನಡೆಸಲು ಅನುಕೂಲವಾಗುವಂತೆ ಶೀಘ್ರದಲ್ಲೇ ಹೊಸ ನೀತಿ ನಿಯಮಗಳನ್ನು ರೂಪಿಸಲಾಗುವುದು ಎಂದು ಸಚಿವ ನಿರಾಣಿ ಅವರು ತಿಳಿಸಿದ್ದಾರೆ.