ಮೈಸೂರು,ಡಿಸೆಂಬರ್,31,2024 (www.justkannada.in): ಹೊಸ ವರ್ಷಾಚರಣೆ ಸ್ವಾಗತಕ್ಕೆ ಸಜ್ಜಾಗಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದ ರೀತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಚಾಮುಂಡಿಬೆಟ್ಟಕ್ಕೆ ರಾತ್ರಿ ಸಂಚಾರ ಬಂದ್ ಮಾಡಲಾಗಿದೆ. ಚಾಮುಂಡಿಬೆಟ್ಟಕ್ಕೆ ಪ್ರವಾಸಿಗರು, ಭಕ್ತರಿಗೆ ರಾತ್ರಿ ಪ್ರವೇಶವಿರುವುದಿಲ್ಲ. ಇಂದು ರಾತ್ರಿ ಚಾಮುಂಡಿಬೆಟ್ಟಕ್ಕೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ರಾತ್ರಿ 8 ರಿಂದ ಜನವರಿ1 ರ ಬೆಳಗ್ಗೆ 6 ರವರೆಗೆ ನಿರ್ಬಂಧವಿರಲಿದೆ.
ಈ ಕುರಿತು ಆದೇಶ ಹೊರಡಿಸಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ರಾತ್ರಿ 9ರ ಬಳಿಕ ಚಾಮುಂಡಿಬೆಟ್ಟದಲ್ಲಿರುವವರೆಲ್ಲ ಖಾಲಿ ಮಾಡಿ ಕೆಳಕ್ಕೆ ಬರಬೇಕು. ಚಾಮುಂಡಿಬೆಟ್ಟಕ್ಕೆ ಊಟ, ಮದ್ಯ ತೆಗೆದುಕೊಂಡು ಹೋಗುವಂತಿಲ್ಲ. ತಾವರೆಕಟ್ಟೆ ಮಾರ್ಗದ ಮೂಲಕ ಬೆಟ್ಟದಿಂದ ನಿರ್ಗಮಿಸಬೇಕು. ಬೆಟ್ಟದ ನಿವಾಸಿಗಳನ್ನ ಹೊರತುಪಡಿಸಿ ಯಾರೇ ಇದ್ದರೂ ಬೆಟ್ಟದಿಂದ ಕೆಳಗೆ ಇಳಿಯಬೇಕು. ಹೊಸ ವರ್ಷದ ದಿನ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅರಮನೆಯ ಮುಂಭಾಗ ಹೊಸ ವರ್ಷಾಚರಣೆ ಇಲ್ಲ..!
ಇನ್ನು ಪ್ರತಿವರ್ಷ ಮೈಸೂರು ಅರಮನೆ ಮುಂಭಾಗ ಹೊಸ ವರ್ಷ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅರಮನೆಯ ಮುಂಭಾಗ ಹೊಸ ವರ್ಷಾಚರಣೆ ಇರುವುದಿಲ್ಲ. ಮಾಗಿ ಉತ್ಸವದ ಹಿನ್ನೆಲೆ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗುತ್ತಿತ್ತು. ರಾತ್ರಿ 12 ಗಂಟೆಗೆ ದೀಪಾಲಂಕಾರದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ನಿಧನ ಹಿನ್ನೆಲೆ ಕಾರ್ಯಕ್ರಮಗಳು ರದ್ದಾಗಿವೆ. ಫಲಪುಷ್ಪ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳನ್ನ ಏರ್ಪಡಿಸಲಾಗಿತ್ತು. ಕನ್ನಡ, ಇಂಗ್ಲಿಷ್ ಪೊಲೀಸ್ ಬ್ಯಾಂಡ್ ಕೂಡ ರದ್ದಾಗಿದೆ.
ಮೈಸೂರಲ್ಲಿ ಹೈ ಅಲರ್ಟ್, ಖಾಕಿ ಕಟ್ಟೆಚ್ಚರ
ಹಾಗೆಯೇ ಹೊಸ ವರ್ಷಾಚರಣೆಗೆ ಮೈಸೂರುಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದ ರೀತಿ ಕಟ್ಟೆಚ್ಚರ ವಹಿಸಿದ್ದಾರೆ. ಬಾಂಬ್ ಪತ್ತೆದಳ, ಶ್ವಾನದಳದಿಂದ ಅರಮನೆ, ಚಾಮುಂಡಿಬೆಟ್ಟ ,ಮೃಗಾಲಯ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿ ಹಲವೆಡೆ ತೀವ್ರ ತಪಾಸಣೆ ನಡೆಸಲಾಗಿದೆ.
ಶ್ವಾನದಳ, ಬಾಂಬ್ ಪತ್ತೆದಳದ ಸಿಬ್ಬಂದಿ ನಗರದ ಹಲವೆಡೆ ಇಂಚಿಂಚೂ ಶೋಧ ನಡೆಸಿದ್ದು, ಅನುಮಾನಸ್ಪದ ವಸ್ತು, ವ್ಯಕ್ತಿಗಳನ್ನು ತಪಾಸಣಾ ಕಾರ್ಯ ಮಾಡಲಾಗುತ್ತಿದೆ.
Key words: New Year, celebrations, break, Chamundi Hills