ಮೋರಿಯಲ್ಲಿ ನವಜಾತ ಗಂಡು ಮಗು ಎಸೆದಿದ್ದ ತಾಯಿ ಪತ್ತೆ

ಮೈಸೂರು,ಜನವರಿ,11,2025 (www.justkannada.in): ಇತ್ತೀಚೆಗೆ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲ್ಲೂಕಿನ ಗ್ರಾಮವೊಂದರಲ್ಲಿ ಮೋರಿಯಲ್ಲಿ ನವಜಾತ ಗಂಡು ಮಗು ಎಸೆದಿದ್ದ ಪ್ರಕರಣ ಸಂಬಂಧ ಇದೀಗ ಮಗು ಎಸೆದಿದ್ದ ತಾಯಿಯ ಪತ್ತೆಯಾಗಿದೆ.

ನಾಲ್ಕು ದಿನಗಳ ಹಿಂದೆ ಮಗುವನ್ನ ಕೊರೆವ ಚಳಿಯಲ್ಲಿ ಚರಂಡಿಗೆ ಎಸೆದಿದ್ದ ತಾಯಿ ಪತ್ತೆಯಾಗಿದ್ದಾಳೆ. ಪತ್ತೆಯಾಗಿರುವ ತಾಯಿ ಅಪ್ರಾಪ್ತೆಯಾಗಿದ್ದು ಮದುವೆಯಾಗದೇ ಮಗು ಹಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ. ಸಮಾಜಕ್ಕೆ ಹೆದರಿ ಜೀವಂತವಾಗಿ ಮಗುವನ್ನು ಚರಂಡಿಗೆ ಎಸೆದಿರುವುದಾಗಿ ಇದೀಗ ಅಪ್ರಾಪ್ತ ಬಾಲಕಿ ಒಪ್ಪಿಕೊಂಡಿದ್ದಾಳೆ.

ಅಂದು ಮಗುವನ್ನು ಚರಂಡಿಗೆ ಎಸೆದು ನಂತರ ಬಾಲಕಿ ಹೊಟ್ಟೆ ನೋವೆಂದು ಹೇಳಿ ಚಿಕಿತ್ಸೆ ಪಡೆದಿದ್ದಳು. ಕಳೆದ ವರ್ಷ ಬಾಲಕಿಗೆ ವಿವಾಹ ನೆರವೇರಿಸಲು ಸಿದ್ದತೆ ನಡೆದಿತ್ತು. ಸಿಡಿಪಿಒ ಮಧ್ಯ ಪ್ರವೇಶದಿಂದ ಬಾಲಕಿ ಮದುವೆ ನಿಂತಿತ್ತು.18 ವರ್ಷ ಪೂರ್ಣಗೊಳ್ಳುವ ತನಕ ವಿವಾಹ ನೆರವೇರಿಸುವುದಿಲ್ಲವೆಂದು ಪೋಷಕರು ಮುಚ್ಚಳಿಕೆ ಬರೆದುಕೊಟ್ಟಿದ್ದರು.

ಸದ್ಯ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ತಾಯಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಮಗುವನ್ನು ತಾಯಿ ಮಡಿಲಿಗೆ ಸೇರಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದು ಆದರೆ ತಾಯಿ ತನಗೆ ಮಗು ಬೇಡವೇ ಬೇಡ ಎನ್ನುತ್ತಿದ್ದಾಳೆ. ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Mother, found, throwing, newborn, child