ಬೆಂಗಳೂರು,ಅಕ್ಟೋಬರ್,21,2020(www.justkannada.in) : ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಕ್ಕಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮತ್ತು ಬೆಳಗಾವಿಯಲ್ಲಿ ನಿರ್ಮಿಸಲಾಗಿರುವ ನೂತನ ಸುಸಜ್ಜಿತ ಕಟ್ಟಡಗಳನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಲೋಕಾರ್ಪಣೆ ಮಾಡಿದರು.ಬೆಂಗಳೂರಿನಿಂದಲೇ ವರ್ಚುಯಲ್ ವೇದಿಕೆಯ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಿಸಿಎಂ, ಜಿಟಿಟಿಸಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಶೇಕಡಾ ನೂರಕ್ಕೆ ನೂರು ಉದ್ಯೋಗಾವಕಾಶ ಸಿಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ಯೋಗಗಳ ಸೃಷ್ಟಿ ಹಾಗೂ ನಿರುದ್ಯೋಗ ನಿವಾರಣೆ ಮಾಡುವಲ್ಲಿ ಈ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.
ಜಿಟಿಟಿಸಿ ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸೌಲಭ್ಯ
ಗುಂಡ್ಲುಪೇಟೆಯಲ್ಲಿ 51305.10 ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿ ಜಿಟಿಟಿಸಿ ಕೇಂದ್ರವನ್ನು ನಿರ್ಮಿಲಾಗಿದೆ. ಬೆಳಗಾವಿಯಲ್ಲಿ 47951.60 ಚದರ ಅಡಿ ಪ್ರದೇಶದಲ್ಲಿ ನೂತನ ಕಟ್ಟಡ ತಲೆ ಎತ್ತಿದೆ. ಈ ಎರಡೂ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸೌಲಭ್ಯಗಳು ದೊರೆಯಲಿವೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಚಾಮರಾಜನಗರದಲ್ಲಿ ಮತ್ತಷ್ಟು ಕೈಗಾರಿಕೆ ವಿಶ್ವಾಸ
ಗಡಿ ಜಿಲ್ಲೆಯಾಗಿರುವ ಚಾಮರಾಜ ನಗರದಲ್ಲಿ ಹೊಸದಾಗಿ ಕೈಗಾರಿಕೆಗಳು, ಉದ್ಯಮಗಳು ಬರಲು ಆಸಕ್ತಿ ತೋರುತ್ತಿವೆ. ಈಗಾಗಲೇ ಕೆಲ ಭಾಗಗಳಲ್ಲಿ ಕೈಗಾರಿಕೆಗಳು ಬಂದಿವೆ. ಮುಂದಿನ ದಿನಗಳಲ್ಲಿ ಸ್ಥಾಪನೆಯಾಗಲಿರುವ ಕೈಗಾರಿಕೆಗಳಿಗೆ ಗುಂಡ್ಲುಪೇಟೆಯ ಜಿಟಿಟಿಸಿಯಿಂದಲೇ ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲ ಸಿಗಲಿದೆ. ಇದರಿಂದ ಜಿಲ್ಲೆಯ ಒಟ್ಟಾರೆ ಆಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಕೇಂದ್ರದಲ್ಲಿ ಪ್ರಸ್ತುತ 199 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಬೆಳಗಾವಿಗೆ ಜಿಟಿಟಿಸಿ ಕೇಂದ್ರದಲ್ಲಿ ಮತ್ತಷ್ಟು ಹೊಸ ಕೋರ್ಸ್ ಸೇರ್ಪಡೆಗೆ ಚಿಂತನೆ
ಜಿಲ್ಲೆಯ ಜಿಟಿಟಿಸಿ ಕೇಂದ್ರದಲ್ಲಿ ಈ ವರ್ಷದಿಂದಲೇ ಮತ್ತಷ್ಟು ಹೊಸ ಕೋರ್ಸ್ʼಗಳನ್ನು ಸೇರ್ಪಡೆ ಮಾಡಲಾಗುವುದು. ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಕುಶಲತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಹೊಸ ಅವಕಾಶಗಳಿಗೆ ತಕ್ಕಂತೆ ತರಬೇತಿ ನೀಡಲಾಗುತ್ತಿದೆ. ಸದ್ಯಕ್ಕೆ ಬೆಳಗಾವಿ ಕೇಂದ್ರದಲ್ಲಿ 294 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ತಮ್ಮ ತರಬೇತಿ ಮುಗಿದ ನಂತರ ಇವರೆಲ್ಲರಿಗೂ ಉತ್ತಮ ಅವಕಾಶಗಳು ಸಿಗಲಿವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಎರಡೂ ಕಡೆಯ ಈ ವರ್ಚುಯಲ್ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಡಿಸಿಎಂ ಜತೆಗೆ, ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಭಾಗಿಯಾಗಿದ್ದರು. ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ್ ಮತ್ತಿತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಗುಂಡ್ಲುಪೇಟೆಯಿಂದ ಜಿಟಿಟಿಸಿ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದರು.
ದೀರ್ಘಾವಧಿ-ಅಲ್ಪಾವಧಿ ತರಬೇತಿ
ಕೌಶಾಲ್ಯಾಭಿವೃದ್ಧಿಯಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿ ಕಾಲದ ತರಬೇತಿಯನ್ನು ನೀಡುತ್ತಿರುವ ಇವೆರಡೂ ಕೇಂದ್ರಗಳಲ್ಲಿ ನಾಲ್ಕು ವರ್ಷದ ಡಿಪ್ಲೊಮೋ ಇನ್ ಟೂಲ್ಸ್ ಅಂಡ್ ಡೈ ಮೇಕಿಂಗ್, ಡಿಪ್ಲೊಮೋ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸುಗಳಿವೆ. ಅದೇ ರೀತಿ ಅಲ್ಪಾವಧಿಯ ಸಿಎನ್ಸಿ ಪ್ರೋಗ್ರಾಮಿಂಗ್ ಮತ್ತು ಆಪರೇಷನ್, ಕ್ಯಾಡ್ ಅಂಡ್ ಕಾಂ, ಟರ್ನರ್, ಫಿಟ್ಟರ್, ಟೂಲ್ಸ್ ಅಂಡ್ ಮೆಷಿನಿಸ್ಟ್ ಮತ್ತು ಸಿಎಂಎಂ ಕೋರ್ಸುಗಳಿವೆ.
key words : New- Skill-Training-Center-Belgaum-Gundlupete-
Virtualization-DCM Dr.C.N.Ashwatthanarayan-inauguración