ಮೈಸೂರು, ಮೇ 16, 2024 (www.justkannada.in): ಮೈಸೂರಿನಲ್ಲಿ ಇಂದು ಎನ್ಐಎ ದಾಳಿ ನಡೆಸಿದ್ದು, ಭಯೋತ್ಪಾದಕ ಕೃತ್ಯಕ್ಕೆ ಸಹಕರಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬೇಹುಗಾರಿಕೆ ಪ್ರಕರಣವೊಂದರಲ್ಲಿ ಎನ್ಐಎಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೈಸೂರಿನ ರಾಜೀವ್ ನಗರದಲ್ಲಿ ಬಂಧಿಸಲಾಗಿದೆ.
ನೂರುದ್ದೀನ್ ಅಲಿಯಾಸ್ ರಫಿ ಬಂಧಿತ ಆರೋಪಿ. ಈತ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ರಾಜೀವ್ ನಗರದ ಮನೆಯಲ್ಲಿ ನೂರುದ್ದೀನ್ ನನ್ನು ಬಂಧನ ಮಾಡಲಾಗಿದೆ.
ಮನೆಯಲ್ಲಿದ್ದ ಆತನ ಮೊಬೈಲ್ ಫೋನ್, ಪೆನ್‌ಡ್ರೈವ್ ಸೇರಿದಂತೆ ಮೊದಲಾದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಬೆಂಗಳೂರಿನ ಇಸ್ರೇಲ್ ಹಾಗೂ ಚೆನ್ನೈನ ಅಮೆರಿಕಾ ರಾಯಭಾರ ಕಚೇರಿಗಳ ಮೇಲೆ ಸ್ಫೋಟಕ್ಕೆ ಸಂಚು ರೂಪಿಸಿದ ಎಂಬ ಆರೋಪ ಈತನ ಮೇಲಿದೆ.
ಶ್ರೀಲಂಕಾ ಪ್ರಜೆ ಮೊಹಮ್ಮದ್ ಸಕೀರ್ ಹುಸೇನ್ ಹಾಗೂ ಕೊಲಂಬೊದ ಪಾಕಿಸ್ತಾನದ ರಾಜತಾಂತ್ರಿಕ ಕಚೇರಿ ನೌಕರರಾಗಿರುವ ಪಾಕಿಸ್ತಾನದ ಪ್ರಜೆ ಅಮೀರ್ ಜುಬೇರ್ ಸಿದ್ದಿಕಿಯನ್ನು ಎನ್ಐಎ ಅಧಿಕಾರಿಗಳು 2014ರಲ್ಲಿ ಬಂಧಿಸಿದ್ದರು. ಆರೋಪಿಗಳಿಗೆ ಭಾರತದ ನಕಲಿ ನೋಟು ಪೂರೈಸುವ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ನೂರುದ್ದೀನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
2023ರ ಆಗಸ್ಟ್‌ನಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ನೂರುದ್ದೀನ್. ಚೆನ್ನೈನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆ ಆರೋಪಿ ನೂರುದ್ದೀನ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಖಚಿತ ಮಾಹಿತಿ ಆಧರಿಸಿ ಬುಧವಾರ ದಾಳಿ ನಡೆಸಿ ಈತನನ್ನು ಬಂಧಿಸಲಾಗಿದೆ.