ಬೆಂಗಳೂರು,ಡಿಸೆಂಬರ್,24,2020(www.justkannada.in): ಇಂದಿನಿಂದ ಜನವರಿ 1ರವರೆಗೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಈ ಹಿನ್ನೆಲೆ ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡಿದರೇ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ನೈಟ್ ಕರ್ಫ್ಯೂ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹೀಗಾಗಿ ಬೆಂಗಳೂರು ನಗರಾದ್ಯಂತ ಸಂಪೂರ್ಣ ಬಂದೋಬಸ್ತ್ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಾಲಾಗುತ್ತದೆ. ರಾತ್ರಿ 11 ಗಂಟೆ ನಂತರ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ‘ಅನಾವಶ್ಯಕವಾಗಿ ಓಡಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದರು.
ನೈಟ್ ಕರ್ಫ್ಯೂ ವೇಳೆ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಗೂಡ್ಸ್ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ರೈಲು, ಏರ್ ಪೋರ್ಟ್ ಗಳಲ್ಲಿ ನಿಬಂಧನೆ ಇರುವುದಿಲ್ಲ, ಏರ್ ಪೋರ್ಟ್ ಗಳಲ್ಲಿ ಟ್ಯಾಕ್ಸಿಗಳಿಗೆ ವಿನಾಯಿತಿ ನೀಡಲಾಗಿದೆ. ‘ರಾತ್ರಿ ವೇಳೆ ಕಂಪನಿಗಳಲ್ಲಿ ಕೆಲಸ ಮಾಡುವವರು ಗುರುತಿನ ಚೀಟಿ ಇಟ್ಟುಕೊಂಡಿರಬೇಕು ಎಂದು ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ…
ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆಗೆ ಯಾವುದೇ ಅವಕಾಶವಿಲ್ಲ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಜನರು ಸೇರುವಂತಿಲ್ಲ. ರಾತ್ರಿ 11ರ ಬಳಿಕ ವಿನಾಕಾರಣ ರಸ್ತೆಗಳಿಯುವಂತಿಲ್ಲ. ನಿಯಮ ಉಲ್ಲಂಘಿಸಿದರೆ ತಪ್ಪಿತಸ್ಥರನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತ ಎಚ್ಚರಿಕೆ ನೀಡಿದ್ದಾರೆ.
Key words: Night curfew-Disciplinary –action-Bangalore City Police-Commissioner -Kamal Pant -warns