ಆರೋಗ್ಯ ಸಚಿವರೇ… ಶ್ರವಣದೋಷವುಳ್ಳ ಸಾವಿರಾರು ಮಕ್ಕಳ ಬಾಳಿಗೆ ಆಶಾಕಿರಣವಾಗಿ: ನಿಮ್ಹಾನ್ಸ್ ನಿವೃತ್ತ ವೈದ್ಯ ಡಾ.ಎಂ.ಜಯರಾಮ್ ಮನವಿ

ಬೆಂಗಳೂರು, ಜೂನ್ 11, 2020 (www.justkannada.in): ಸಾಮಾಜಿಕವಾಗಿ , ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಶ್ರವಣದೋಷವುಳ್ಳ ಸಾವಿರಾರು ಮಕ್ಕಳ ಪಾಲಿಗೆ ಆಶಾಕಿರಣವಾಗಬೇಕಿದೆ…

ಬೆಂಗಳೂರಿನ ನಿಮ್ಹಾನ್ಸ್ ನ ವಾಕ್ ರೋಗ ಲಕ್ಷಣ ಶಾಸ್ತ್ರ ಮತ್ತು ಆಡಿಯಾಲಜಿ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ಎಂ.ಜಯರಾಮ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಕ್ಕಳಲ್ಲಿನ ಕಿವುಡುತನ ಸಮಸ್ಯೆಯನ್ನು ಆರಂಭದಲ್ಲಿ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಆ ಮಕ್ಕಳ ಭವಿಷ್ಯವೇ ಹಾಳಾದಂತೆ. ಈ ಹಂತದಲ್ಲಿ ಸರಕಾರದ ಜವಾಬ್ದಾರಿ ಪ್ರಮುಖವಾದದ್ದು. ಇಂಥ ಮಕ್ಕಳನ್ನು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕಂಡು ಬರುವ ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕಿವುಡತನ ಸಮಸ್ಯೆಯಿಂದ ಹೊರ ಬರಲು ಸಹಕಾರಿಸಬೇಕು. ಈಗಾಗಲೇ ಹಲವಾರು ಯೋಜನೆಗಳು ಚಾಲ್ತಿಯಲ್ಲಿದ್ದರು ಅವುಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಕೇವಲ ಕಿವುಡುತನ ಪತ್ತೆ ಹಚ್ಚಿ, ಶ್ರವಣ ಯಂತ್ರ ನೀಡುವುದರಿಂದ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯದು. ಕಾರಣ ಕಿವುಡುತನದಿಂದ ಬಳಲುತ್ತಿರುವ ವ್ಯಕ್ತಿಗಳು ಸಾಮಾನ್ಯರಂತೆ ಸಮಾಜದಲ್ಲಿ ಬದುಕು ನಡೆಸುವುದು ದುಸ್ತರ. ಆದ್ದರಿಂದ ಕಿವುಡರಿಗೆ ಸಹಕಾರಿಯಾಗುವಂಥ ವಾತಾವರಣ ಮೊದಲು ನಿರ್ಮಾಣ ಮಾಡಬೇಕು. ಜತೆಗೆ ಕಿವುಡುತನದಿಂದ ಬಳಲುತ್ತಿರುವವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರುವ ನಿಟ್ಟಿನಲ್ಲಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಇದಕ್ಕೆ ಪ್ರಮುಖವಾಗಿ ಅವರಿಗೆ ಸೂಕ್ತ ತರಬೇತಿ ನೀಡುವುದು ಅವಶ್ಯಕ. ಕೇವಲ ಶ್ರವಣ ಯಂತ್ರ ನೀಡಿದಾಕ್ಷಣ ಅದು ಕಿವುಡುತನ ಸಮಸ್ಯೆಗೆ ಪರಿಹಾರವಾಗದು.

ಕಿವುಡುತನ ಸಮಸ್ಯೆಯಿಂದ ಬಳಲುತ್ತಿರುವವರು ಈ ಯಂತ್ರದ ಸಹಾಯದಿಂದ ಶಬ್ಧವನ್ನು ಗ್ರಹಿಸಬಹುದು. ಆದರೆ ಭಾಷೆ ಬಳಕೆ ಬಗ್ಗೆ ಅವರಿಗೆ ಅರಿವಿರದು. ಶಬ್ಧ ತರಂಗಗಳು ಮಿದುಳು ತಲುಪಿ ಮಾತಿನ ಮೂಲಕ ಹೊರ ಬರಬೇಕು. ಆದ್ದರಿಂದ ಕಿವುಡತನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಾತು ಕಲಿಯಲು ಸಹಾಯ ಮಾಡಬೇಕು. ಇದಕ್ಕೆ ಅಗತ್ಯ ತರಬೇತಿ ನೀಡಬೇಕು.

ವಾಕ್ -ಶ್ರವಣ ದೋಷದಿಂದ ಬಳಲುತ್ತಿರುವ ಮಕ್ಕಳಲ್ಲಿ ಮಿದುಳಿನ ಬೆಳವಣಿಗೆ ಕುಂಠಿತವಾಗಿರುತ್ತದೆ. ಹಾಗಾಗಿ ಅಂಥ ಮಕ್ಕಳು ಸಾಮಾನ್ಯರಂತೆ ಶಾಲೆಗಳಲ್ಲಿ ವ್ಯಾಸಂಗ ಮಾಡಲಾಗದು. ಆದ್ದರಿಂದ ಅವರಿಗೆ ವಿಶೇಷ ತರಗತಿಗಳು ಅವಶ್ಯಕ. ಆದ್ದರಿಂದಲೇ ಈ ಮಕ್ಕಳಿಗಾಗಿಯೇ ` ಶಾಲಾ ಪೂರ್ವ ತರಬೇತಿ ‘ ನೀಡಬೇಕು. ವಿಶಿಷ್ಠ ಚೇತನ ಮಕ್ಕಳನ್ನು ಆರಂಭದಲ್ಲಿ ಗುರುತಿಸಲು ಮತ್ತು ತೀವ್ರ ತರಹದ ತರಬೇತಿಗಳನ್ನು ಒದಗಿಸುವುದರ ಮೂಲಕ ಅವರುಗಳನ್ನು ಮುಖ್ಯವಾಹಿನಿಗೆ ಸಿದ್ಧಪಡಿಸಲು ಈ ಕಾರ್ಯಕ್ರಮ ನೆರವಾಗುತ್ತದೆ. ಜತೆಗೆ ಮಕ್ಕಳಿಗೆ ಸ್ವಲೀನತೆ, ಕಿವುಡುತನ ಮತ್ತು ಬುದ್ದಿಮಾಂದ್ಯತೆ ಬಗೆಗೂ ‘ಶಾಲಾ ಪೂರ್ವ ತರಬೇತಿ’ ಯೋಜನೆಯಡಿ ಮಾಹಿತಿ ನೀಡಬಹುದಾಗಿದೆ.

ಈ ತರಬೇತಿ ನೀಡಲು ವಾಕ್ -ಶ್ರವಣ ವಿಷಯದ ಪರಿಣತರ ಸಹಾಯ ಪಡೆದುಕೊಳ್ಳಬಹುದು. ಪ್ರತಿ ವರ್ಷ ರಾಜ್ಯದಲ್ಲಿ ಕನಿಷ್ಠ 500 ಮಂದಿ ವಿದ್ಯಾರ್ಥಿಗಳು ಸ್ಪೀಚ್ ಅಂಡ್ ಹಿಯರಿಂಗ್ ವಿಭಾಗದಿಂದ ಸ್ನಾತಕ ಪದವಿ ಪಡೆದು ಹೊರ ಬರುತ್ತಿದ್ದಾರೆ. ಅವರ ತರಬೇತಿಯನ್ನು ಸದುಪಯೋಗಪಡಿಸಿಕೊಂಡರೆ ಅವರಿಗೂ ಕೆಲಸ ಲಭಿಸಿದಂತಾಗುತ್ತದೆ ಜತೆಗೆ ಕಿವುಡುತನದಿಂದ ಬಳಲುತ್ತಿರುವವರ ಸಮಸ್ಯೆಯನ್ನು ಬಗೆಹರಿಸಿದಂತಾಗುತ್ತದೆ.

ಹೆಮ್ಮೆಯ ಕನ್ನಡಿಗ ಈ ಡಾ.ಜಯರಾಮ್ …

ಮೈಸೂರಿನ ಅಖಿಲ ಭಾರತ ವಾಕ್ -ಶ್ರವಣ ಸಂಸ್ಥೆಯಲ್ಲಿ 1974 ರಲ್ಲಿ ಸ್ನಾತಕೋತ್ತರ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ನಂತರ, 1980 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಭವನದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದರು. ವಿಶೇಷ ಅಂದ್ರೆ ಭಾರತದಲ್ಲೇ ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ಪಿ.ಎಚ್.ಡಿ ಪಡೆದ ಪ್ರಪ್ರಥಮ ಪದವೀಧರ ಎಂಬ ಹೆಗ್ಗಳಿಕೆ ಡಾ. ಜಯರಾಮ್ ಅವರದ್ದು.
ಭಾರತದಲ್ಲಿ ಪ್ರಥಮವಾಗಿ ಪ್ರಾರಂಭಿಸಿದ ಶೈಕ್ಷಣಿಕ ಕಾರ್ಯಕ್ರಮಗಳಾದ ಎಂ.ಎಸ್ಸಿ (ಆಡಿಯಾಲಜಿ), ಎಂ.ಎಸ್ಟಿ ( ವಾಕ್ ರೋಗ ಲಕ್ಷಣ ಶಾಸ್ತ್ರ ), ಬಿ.ಎಸ್. ಇಡಿ (ಕಿವುಡುತನ), ಎಂ.ಎಸ್. ಇಡಿ (ಕಿವುಡುತನ) ಮತ್ತು ಶ್ರವಣ ಉಪಕರಣ ಮತ್ತು ಕಿವಿಯಚ್ಚು ತಂತ್ರಜ್ಞಾನದ ಡಿಪ್ಲೋಮಾ ಕೋರ್ಸ್ ಗಳನ್ನು ಆರಂಭಿಸುವ ಮೂಲಕ ರಾಷ್ಟ್ರದ ವಾಕ್ -ಶ್ರವಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ ಕೀರ್ತಿ ಡಾ. ಜಯರಾಮ್ ಅವರದ್ದು.