ಬೆಂಗಳೂರು,ಮಾರ್ಚ್ ,10,2023(www.justkannada.in): ದೂರದರ್ಶನ ಚಂದನದ ಸಹಾಯಕ ನಿರ್ದೇಶಕಿ ನಿರ್ಮಲಾ ಸಿ. ಯಲಿಗಾರ್ʼ ಅವರನ್ನು ಪರಿಷತ್ತಿನ ಸದಸ್ಯತ್ವದಿಂದ ಅಮಾನತು ಮಾಡಲಾಗಿದ್ದು, ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರ ಈ ನಡೆಗೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹಾಗೂ ಶಿವಮೊಗ್ಗದ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪದ್ಮರಾಜ ದಂಡಾವತಿ, ಆ ಕಾಲ ಒಂದಿತ್ತು. ಅದು ಮನು ಬಳಿಗಾರ್ ಅವರು ಅಧ್ಯಕ್ಷರಾಗಿದ್ದ ಕಾಲ. ರೂಪ ಹಾಸನ ಅವರಿಗೆ ಪರಿಷತ್ತಿನ ಜತೆಗೆ ಭಿನ್ನಾಭಿಪ್ರಾಯ ಇತ್ತು. ಅದಕ್ಕೆ ಅವರು ರಾಜೀನಾಮೆ ನೀಡಿದ್ದರು. ಅದರೆ, ಬಳಿಗಾರ್ ಅವರು ಅದನ್ನು ದಿಢೀರ್ ಎಂದು ಒಪ್ಪಲಿಲ್ಲ. ರೂಪ ಅವರಿಗೆ ಪತ್ರ ಬರೆದರು. ಅವರು ರಾಜೀನಾಮೆ ವಾಪಸು ತೆಗೆದುಕೊಳ್ಳದೇ ಇದ್ದಾಗ ಅದನ್ನು ಕಾರ್ಯಕಾರಿ ಸಮಿತಿ ಗಮನಕ್ಕೆ ತಂದು ಸ್ವೀಕರಿಸಿದರು. ಅದು ಪ್ರಜಾಸತ್ತಾತ್ಮಕವಾದ ದಾರಿ.
ಪರಿಷತ್ತು ಮಾತೃ ಸಂಸ್ಥೆ. ಅದು ಭುವನೇಶ್ವರಿಯ ತಾಣ. ಪರಿಷತ್ತಿನ ಜತೆಗೆ ವಾದ, ವಾಗ್ವಾದ, ಜಗಳ, ಅಸಮಾಧಾನ ಇಂದು ನಿನ್ನೆಯದಲ್ಲ. ಮುಂದೆಯೂ ಇದೆಲ್ಲ ಇರುತ್ತದೆ. ಪರಿಷತ್ತಿನ ಅಧ್ಯಕ್ಷರಿಗೆ ಅಪಾರವಾದ ಅಧಿಕಾರ ಇದೆ. ಆದರೆ, ಯಾವ ಅಧಿಕಾರವೂ ನಿರಂಕುಶವಾದುದು ಅಲ್ಲ. ಇದನ್ನು ಅಧ್ಯಕ್ಷರಾದವರೇ ಅರ್ಥ ಮಾಡಿಕೊಳ್ಳಬೇಕು. ನಿರ್ಮಲಾ ಯಲಿಗಾರ ಅವರ ಸದಸ್ಯತ್ವ ರದ್ದುಗೊಳಿಸಿದ ಜೋಶಿಯವರ ಕ್ರಮ ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ.
‘ಯಲಿಗಾರ ಅವರು ಹೆಣ್ಣು ಮಗಳು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದಿತ್ತು’ ಎಂಬ ಮಾತೂ ಸರಿಯಲ್ಲ. ಅದು ಕೂಡ ಗಂಡು ಮನಸ್ಥಿತಿಯ ಮಾತೇ ಆಗುತ್ತದೆ. ನಿರ್ಮಲಾ ಅವರ ವಿರುದ್ಧ ಕ್ರಮ ಕೈಗೊಂಡಿರುವ ಜೋಶಿಯವರು ತಾವು ಇನ್ನೂ ದೂರದರ್ಶನದ ಮಹಾ ನಿರ್ದೇಶಕರು ಎಂದು ಅಂದುಕೊಂಡಂತೆ ಕಾಣುತ್ತದೆ. ಬಹುಶಃ ಅದಕ್ಕಾಗಿಯೇ ಅವರು ಈ ಅಧಿಕಾರ ಚಲಾಯಿಸಿದ್ದಾರೆ. ನಿರ್ಮಲಾ ಅವರು ಜೋಶಿಯವರ ಮಾಜಿ ಸಹೋದ್ಯೋಗಿ ಯಾಗಿದ್ದುದು ಕಾಕತಾಳೀಯ ಇರಲಾರದು.
ಇವೆಲ್ಲಾ ಸಾಹಿತ್ಯದ ಓದುಗರಲ್ಲಿ, ಪರಿಷತ್ತಿನ ನಿಕಟ ಒಡನಾಡಿಗಳಲ್ಲಿ ವಿಷಾದ ಮೂಡಿಸುವ ಸಂಗತಿಗಳು. ಬೇಸರ ಹುಟ್ಟಿಸುವ ವಿದ್ಯಮಾನಗಳು. ಸಬ್ ಕೊ ಸನ್ಮತಿ ದೇ ಭಗವಾನ್ ಎಂದು ಪ್ರಾರ್ಥಿಸಬಹುದು ಅಷ್ಟೇ ಎಂದಿದ್ದಾರೆ.
ನಿರ್ಮಲಾ ಯಲಿಗಾರ್ ಸದಸ್ಯತ್ವ ಅಮಾನತುಗೊಳಿಸುವುದು ಅವೈಜ್ಞಾನಿಕ-ಪದ್ಮಾ
ಈ ಕುರಿತು ಪತ್ರ ಬರೆದಿರುವ ಶಿವಮೊಗ್ಗದ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ, ನಿರ್ಮಲಾ ಯಲಿಗಾರ್ ಅವರ ಸದಸ್ಯತ್ವ ಅಮಾನತುಗೊಳಿಸುವುದು ಅವೈಜ್ಞಾನಿಕವಾಗಿದ್ದು, ತಕ್ಷಣವೇ ಈ ನಿರ್ಧಾರ ಕೈ ಬಿಡುವಂತೆ ಒತ್ತಾಯಿಸುತ್ತೇವೆ ಎಂದಿದ್ದಾರೆ
ಹಾವೇರಿಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೂರದರ್ಶನ ಚಂದನದ ಮುಖ್ಯಸ್ಥರಾಗಿ ಕಾರ್ಯಕ್ರಮದ ನೇರ ಪ್ರಸಾರ ಹಾಗೂ ವರದಿಗಾಗಿ ಬಂದಿದ್ದ ನಿರ್ಮಲಾ ಯಲಿಗಾರ ಅವರಿಗೆ ಹಾಗೂ ಅವರ ತಂಡಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಬೇಕಾದ ಜವಾಬ್ದಾರಿ ಸಂಘಟಕರದ್ದಾಗಿತ್ತು. ಆದರೆ ಸಮರ್ಪಕ ವ್ಯವಸ್ಥೆಯನ್ನು ಮಾಡಿಕೊಡುವಲ್ಲಿ ಅವರು ಎಡವಿದ್ದಾರೆ ಎಂಬುದು ನಿರ್ವಿವಾದ.
ಸ್ವತಃ ದೂರದರ್ಶನ ಚಂದನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ಕಸಾಪದ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ಮಾಧ್ಯಮ ವರದಿಗೆ ಬರುವವರಿಗೆ ಯಾವ ರೀತಿ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ತಿಳಿಯದೆ ಇರುವ ವಿಚಾರವೇನಲ್ಲ. ಸಮರ್ಪಕ ವ್ಯವಸ್ಥೆ ಇಲ್ಲದಿರುವಾಗ, ಸಂಬಂಧಪಟ್ಟವರು ಸರಿಯಾಗಿ ಸ್ಪಂದಿಸದೆ ಇದ್ದಾಗ ಅನಿವಾರ್ಯವಾಗಿ ನಿರ್ಮಲಾ ಅವರು ಕಸಾಪ ರಾಜ್ಯ ಅಧ್ಯಕ್ಷ ಮಹೇಶ ಜೋಶಿಯವರ ಗಮನಕ್ಕೆ ಇದನ್ನು ತಂದಿದ್ದಾರೆ.
ಸದ್ಯ ವಿಷಯ ಅಷ್ಟಕ್ಕೇ ನಿಂತಿದ್ದರೆ ಈ ಪತ್ರ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ. ಮಾಧ್ಯಮದ ಉನ್ನತ ಅಧಿಕಾರಿಯೊಬ್ಬರ ಜತೆಯಲ್ಲಿ ಅಧ್ಯಕ್ಷರು ನಡೆದುಕೊಂಡ ರೀತಿಯ ಬಗ್ಗೆ ನಮ್ಮ ಸಂಘಕ್ಕೆ ಅಂದೇ ನೋವಾಗಿತ್ತು. ಆದರೆ ಸ್ವತಃ ನಿರ್ಮಲ ಅವರೇ ಈ ವಿಚಾರ ಬೆಳೆಸುವುದು ಬೇಡ ಎಂದ ಕಾರಣಕ್ಕೆ ಸಂಘ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಪರಿಷತ್ತಿನ ನಿಯಮ೭(೮)ರ ಅನ್ವಯ ಅಜೀವ ಸದಸ್ಯತ್ವ ಹೊಂದಿರುವ ನಿರ್ಮಲಾ ಯಲಿಗಾರ ಅವರ ಸದಸ್ಯತ್ವವನ್ನು ಅಮಾನತುಪಡಿಸುವ ನಿರ್ಧಾರವನ್ನು ಪರಿಷತ್ತು ಕೈಗೊಂಡಿರುವುದಕ್ಕೆ ಕರ್ನಾಟಕ ಪತ್ರಕರ್ತೆಯರ ಸಂಘ ಕಟುವಾಗಿ ಖಂಡಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಿರ್ಮಲಾ ಅವರ ಕಸಾಪ ಅಜೀವ ಸದಸ್ಯತ್ವ ಅವರ ವೈಯಕ್ತಿಕ ವಿಚಾರವಾಗಿದ್ದು, ಸಮ್ಮೇಳನದಲ್ಲಿ ನಡೆದ ಮಾತಿನ ಚಕಮಕಿ ಅವರ ವೃತ್ತಿ ಬದುಕಿಗೆ ಸಂಬಂಧಿಸಿದ್ದಾಗಿದ್ದು, ಅಂದು ವ್ಯವಸ್ಥೆ ಸರಿ ಇರದಿರುವುದರ ಬಗ್ಗೆ ನಿರ್ಮಲಾ ದನಿ ಎತ್ತಿದ್ದಾರೆ. ಅದಕ್ಕಾಗಿ ಅವರ ಸದಸ್ಯತ್ವ ಅಮಾನತುಗೊಳಿಸುವುದು ಅವೈಜ್ಞಾನಿಕವಾಗಿದ್ದು, ತಕ್ಷಣವೇ ಈ ನಿರ್ಧಾರ ಕೈ ಬಿಡುವಂತೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
Key words: Nirmala Yaligara- suspended – Kasapa- membership-senior -journalists