ಮೈಸೂರು ಜನವರಿ,21,2025 (www.justkannada.in): ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಿಸಾರ್ ಅಹಮ್ಮದ್ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರ ಅಭಿವೃದ್ಧಿಯ ಸಂಬಂಧ 2024-25 ನೇ ಸಾಲಿನ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಿ. ಸರ್ಕಾರಿ ಉರ್ದು ಶಾಲೆಗಳಲ್ಲಿ ಅಲ್ಪಸಂಖ್ಯಾತರ ಮಕ್ಕಳು ಎಷ್ಟು ಜನ ಶಾಲೆ ಬಿಟ್ಟಿದ್ದಾರೆ. ಶಾಲೆ ಬಿಡಲು ಕಾರಣಗಳು ಏನು ಎಂಬುದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಬೇಕು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ತರಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲಾ ನಗರಾಭಿವೃದ್ಧಿ ಕೋಶದ ವತಿಯಿಂದ ವಾಜಪೇಯಿ ನಗರ ವಸತಿ ಯೋಜನೆಯಡಿ ವಸತಿ ವ್ಯವಸ್ಥೆ ಕಲ್ಪಿಸಲು ಯೋಜನೆಯಿದ್ದು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಕೇಂದ್ರದ ವತಿಯಿಂದ ವಿವಿಧ ಕಂಪನಿ ಹಾಗೂ ಕಾರ್ಖಾನೆಗಳಿಗೆ ಅಗತ್ಯವಿರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು. ತೋಟಗಾರಿಗೆ ಇಲಾಖೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗಳಡಿ ಅಲ್ಪಸಂಖ್ಯಾತರಿಗೆ ಇರುವ ಸೌಲಭ್ಯಗಳನ್ನು ಅರ್ಹರಿಗೆ ನೀಡಬೇಕು. ಅಲ್ಪಸಂಖ್ಯಾತರು ಕೃಷಿ ಮಾಡುತ್ತಿರುವ ಸಂಖ್ಯೆಯ ಮಾಹಿತಿಯನ್ನು ಪಡೆದುಕೊಳ್ಳಿ. ಆಗ ಅವರಿಗೆ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಲ್ಪ ಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಕಾಲದಲ್ಲಿ ದೊರೆಯಬೇಕು. ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು. ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಬ್ಯಾಂಕ್ ಗಳು ಸರಳವಾಗಿ ಸಾಲ ಮಂಜೂರಾತಿ ಮಾಡಬೇಕು ಈ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಕ್ರಮವಹಿಸಬೇಕು ಎಂದು ನಿಸಾರ್ ಅಹಮದ್ ಸೂಚಿಸಿದರು.
ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿಗಳಾದ ಮುಜಿಬುಲ್ಲಾ ಜಫಾರಿ ಅವರು ಮಾತನಾಡಿ ಈ ಹಿಂದೆ 12 ಅಂಶಗಳ ಕಾರ್ಯಕ್ರಮ ಇತ್ತು. ಈಗ 15 ಅಂಶಗಳ ಕಾರ್ಯಕ್ರಮ ಇದೆ. ಅಲ್ಪಸಂಖ್ಯಾತರ ಆಯೋಗ ಅಭಿವೃದ್ದಿ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತದೆ. ಆಯೋಗಕ್ಕೆ ಸಿವಿಲ್ ಕೋರ್ಟ್ ನ ಅಧಿಕಾರ ನೀಡಲಾಗಿದೆ. ಯಾವುದೇ ಅಧಿಕಾರಿಯಿಂದ ಮಾಹಿತಿಯನ್ನು ಪಡೆಯಬಹುದು. ಮಾಹಿತಿ ನೀಡದೆ ಇದ್ದರೆ ನೋಟಿಸ್ ನೀಡಿ ಮಾಹಿತಿ ಪಡೆಯಬಹುದಾಗಿದೆ ಇಂತಹ ಅಧಿಕಾರ ಆಯೋಗಕ್ಕೆ ಇದೆ. ಆಯೋಗವು ಕೋಮು ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Key words: facilities, welfare, minorities, Nisar Ahmed, mysore