ಬೆಂಗಳೂರು,ನವೆಂಬರ್,24,2022(www.justkannada.in): ಚಿಲುಮೆ ಸಂಸ್ಥೆಯ ಅಕ್ರಮಗಳ ಹಿಂದಿನ ರೂವಾರಿಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ಇಷ್ಟು ದಿನವಾದರೂ ಈ ಅಕ್ರಮ ಸಂಸ್ಥೆಯ ಹಣಕಾಸಿನ ವಹಿವಾಟಿನ ಮೇಲೆ ಈ ಸಂಸ್ಥೆಗೆ ಹಣ ನೀಡಿದವರ ಮೇಲೆ ಯಾಕೆ ಸಿಬಿಐ, ಐಟಿ, ಇಡಿ ದಾಳಿ ನಡೆಸಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು…
ಖಾಸಗಿ ಸಂಸ್ಥೆ ಚಿಲುಮೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೆ ವಹಿಸಿದ್ದರ ಹಿಂದೆ ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳೂ ಇದ್ದಾರೆ. ಚುನಾವಣಾ ಆಯೋಗಕ್ಕೆ ಈ ಕುರಿತು ಮೊದಲೇ ಮಾಹಿತಿ ಇತ್ತು. ಚುನಾವಣಾ ಆಯೋಗದವರು ಬಿಬಿಎಂಪಿಗೆ ಈ ಕುರಿತು ಪತ್ರಗಳನ್ನೂ ಬರೆದಿದ್ದರು. ಆದರೂ ಆಯೋಗಕ್ಕೂ ಕೇರ್ ಮಾಡದೆ ಚಿಲುಮೆ ಸಂಸ್ಥೆಯ ಅಕ್ರಮ ಹೆಚ್ಚಾಗುತ್ತಾ ಹೋಗಿದೆ. ಹಾಗಾಗಿ ಚುನಾವಣಾ ಆಯೋಗ ಈ ಅಕ್ರಮಕ್ಕೆ ಮೌನ ಸಮ್ಮತಿ ನೀಡಿದೆಯೆ? ಸುಪ್ರೀಂ ಕೋರ್ಟು ಚುನಾವಣಾ ಆಯೋಗದ ಮೇಲೆ ಮಾಡಿರುವ ವಿಮರ್ಶೆಗಳು ಸರಿಯಾಗಿವೆ ಅಲ್ಲವೆ? ಎಂದು ಪ್ರಶ್ನಿಸಿದರು.
ಹೊಂಗಸಂದ್ರದ ಬಿಜೆಪಿಯ ಕಛೇರಿಯಲ್ಲಿ ಹಾಲಿ ಶಾಸಕರು ಹಾಗೂ ವಿಧಾನಸಭೆಯ ಮುಖ್ಯ ಸಚೇತಕರಾದ ಸತೀಶ್‍ರೆಡ್ಡಿಯವರ ನೇತೃತ್ವದಲ್ಲಿಯೇ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವ ಕುರಿತು ತರಬೇತಿ ನೀಡಲಾಗಿದೆ.
ಪರಿಷ್ಕರಣೆ ಕಾರ್ಯಕ್ಕಾಗಿಯೆ 25000 ದಿಂದ 30000 ರೂಪಾಯಿಗಳನ್ನು ನೀಡಿ ನೇಮಕಾತಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕು.
ನೂರಾರು ಸಂಖ್ಯೆಯ ನೌಕರರಿಗೆ ಸಂಬಳ ಕೊಡಲು ಖರ್ಚು ಮಾಡಿದ ಕೋಟ್ಯಾಂತರ ರೂಪಾಯಿಗಳನ್ನು ಈ ಸಂಸ್ಥೆಗೆ ನೀಡಿದವರು ಯಾರು? ಇಷ್ಟು ದೊಡ್ಡ ಮೊತ್ತವನ್ನು ವಿನಿಯೋಗಿಸುತ್ತಿದ್ದವರ ಉದ್ದೇಶವಾದರೂ ಏನು? ಅಕ್ರಮವಾಗಿ ವಿನಿಯೋಗಿಸಿದ ಹಣದ ಕುರಿತು ಇನ್ನೂ ದಾಳಿಗಳನ್ನು ನಡೆಸದೆ ಐಟಿ, ಇಡಿಗಳು ಯಾಕೆ ಇನ್ನೂ ಕಣ್ಣು ಮುಚ್ಚಿಕೊಂಡಿವೆ ? ಎಂದು ಸಿದ್ಧರಾಮಯ್ಯ ಚಾಟಿ ಬೀಸಿದ್ದಾರೆ.
ಬಿಬಿಎಂಪಿಯಲ್ಲಿ ನಡೆದಿರುವ ಮತದಾರರ ಪಟ್ಟಿಯ ಅಕ್ರಮಕ್ಕೆ ಸರ್ಕಾರ, ಚುನಾವಣಾ ಆಯೋಗ ಮತ್ತು ಬಿಬಿಎಂಪಿಯ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸಂಪೂರ್ಣ ಜವಾಬ್ಧಾರರಾಗಿರುತ್ತಾರೆ. ಆದರೂ ಇಷ್ಟು ಬೃಹತ್ ಮಟ್ಟದ ಹಗರಣ ನಡೆದಿದ್ದರೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಯಾಕೆ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ? ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿಯ ಎಂಎಲ್ ಎಗಳು, ಸಚಿವರುಗಳ ಮೇಲೆ ಮತ್ತು ಬೆಂಗಳೂರು ಅಭಿವೃದ್ಧಿಯ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿಗಳ ಮೇಲೆ ಏಕೆ ಯಾವುದೇ ಕ್ರಮ ವಹಿಸಿಲ್ಲ?
ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ/ಅರೆ ಸರ್ಕಾರಿ ನೌಕರರನ್ನು ನೇಮಿಸುವುದರ ಬದಲಿಗೆ ಖಾಸಗಿ ವ್ಯಕ್ತಿಗಳನ್ನು ಬಿಎಲ್‍ಓ ಗಳಾಗಿ ನೇಮಕ ಮಾಡಲಾಗಿದೆ. ಖಾಸಗಿ ವ್ಯಕ್ತಿಗಳನ್ನು ಯಾವ ಕಾರಣಕ್ಕೂ ನೇಮಕ ಮಾಡಬಾರದೆಂದು ಕಾನೂನು ಹೇಳುತ್ತದೆ. ಇವರು ಒಂದು ಪಕ್ಷದ ಕಾರ್ಯಕರ್ತರಂತೆ ಕಾಣಿಸುತ್ತಾರೆ. ಚಿಲುಮೆ ಸಂಸ್ಥೆಯ ಕಛೇರಿಗಳಲ್ಲಿ ಸಚಿವರ ಚೆಕ್ಕುಗಳು ಮತ್ತು ಲೆಟರ್ ಹೆಡ್‍ಗಳು ದೊರೆತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಿದ್ದರೆ ಸದರಿ ಸಚಿವರ ಮೇಲೆ ಯಾಕೆ ಯಾವುದೇ ಪ್ರಕರಣ ದಾಖಲಿಸಿಲ್ಲ? ಎಂದು ಸಿದ್ಧರಾಮಯ್ಯ ಟೀಕಿಸಿದರು.
ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು, ಸೇರಿಸಲು ಯಾವುದೇ ಅರ್ಜಿ ನಮೂನೆಗಳನ್ನು ಪಡೆಯದೆ ಈ ಕೃತ್ಯ ಎಸಗಿರುವುದು ಘೋರವಾದ ಅಪರಾಧವಾಗಿದ್ದು ಇದನ್ನು ಪ್ರತಿ ದಿನ ಸಾಕ್ಷಿಗಳ ಸಮೇತ ಜನರು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಆದ್ದರಿಂದ ಈ ಕೂಡಲೆ ಜನರು ನೀಡಿರುವ ನಮೂನೆ 6, 7, 8, ಮತ್ತು 8ಎ ಗಳ ಅರ್ಜಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಯಾವುದೆ ಅರ್ಜಿಗಳಿಲ್ಲದೆ ಮತದಾರರ ಪಟ್ಟಿಗೆ ಸೇರಿಸಿರುವ, ಕೈಬಿಟ್ಟಿರುವ, ತಿದ್ದುಪಡಿ ಮಾಡಿರುವ, ವರ್ಗಾವಣೆ ಮಾಡಿರುವ ಪ್ರಕರಣಗಳೆಷ್ಟು ಎಂಬುದನ್ನು ಚುನಾವಣಾ ಆಯೋಗ ಈ ಕೂಡಲೆ ಎಲ್ಲ ರಾಜಕೀಯ ಪಕ್ಷಗಳಿಗೆ, ಸಾರ್ವಜನಿಕರಿಗೆ ತಿಳಿಸಬೇಕು. ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸದೆ, ನೋಟೀಸು ನೀಡದೆ ಮಾಡಿರುವ ಎಲ್ಲ ಬದಲಾವಣೆಗಳನ್ನು ಈ ಕೂಡಲೆ ರದ್ದು ಮಾಡಬೇಕು.
ಅರ್ಜಿ ಸ್ವೀಕರಿಸದೆ, ನೋಟೀಸು ನೀಡದೆ, ಅರ್ಜಿಗಳ ಮೇಲೆ ಆದೇಶ ಮಾಡದೆ ಮತದಾರರ ಪಟ್ಟಿಗೆ ಸೇರಿಸಿರುವ, ತೆಗೆದಿರುವ, ವರ್ಗಾವಣೆ ಮಾಡಿರುವ ಎಲ್ಲ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಅಟ್ಟಬೇಕು. ನಿಷ್ಪಕ್ಷಪಾತವಾಗಿ ವರ್ತಿಸದ ಅಧಿಕಾರಿಗಳನ್ನು ಈ ಕೂಡಲೆ ಚುನಾವಣಾ ಕರ್ತವ್ಯಗಳಿಂದ ಬಿಡುಗಡೆ ಗೊಳಿಸಬೇಕು ಎಂದು ಸಿದ‍್ಧರಾಮಯ್ಯ ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ವ್ಯವಸ್ಥೆಯ ಪಾವಿತ್ರ್ಯವನ್ನು ಉಳಿಸಲು ಕಾಂಗ್ರೆಸ್ ಹೋರಾಟ ಪ್ರಾರಂಭಿಸಿದ ಕೂಡಲೆ ಬಿಜೆಪಿಯ ಕೆಲವರು 2017ರ ದಾಖಲೆಯನ್ನು ಬಿಡುಗಡೆ ಮಾಡುತ್ತಿದ್ದೇವೆ, ಚಿಲುಮೆ ಸಂಸ್ಥೆಯನ್ನು ಬೆಳೆಸಿದ್ದೆ ಕಾಂಗ್ರೆಸ್ ಎಂದು ಸುಳ್ಳು ಹೇಳಲಾರಂಭಿಸಿದ್ದಾರೆ. ಇದಕ್ಕಾಗಿ ಮಹದೇವಪುರದ ಸಹ ಕಂದಾಯಾಧಿಕಾರಿ ಆದೇಶ ನೀಡಿದ್ದಾರೆಂಬ ಆದೇಶ ಪ್ರತಿಯನ್ನು ತೋರಿಸುತ್ತಿದ್ದಾರೆ.
ಮಹದೇವಪುರದಲ್ಲಿರುವುದು ಬಿಜೆಪಿ ಪಕ್ಷದ ಎಂಎಲ್ ಎ. ಬಿಜೆಪಿ ಪಕ್ಷದವರು ಇರುವ ಕಡೆಯೆ ಇದನ್ನು ಪ್ರಾರಂಭಿಸಿದ್ದಾರೆ. ಚಿಲುಮೆ ಸಂಸ್ಥೆಗೆ ಆದೇಶ ನೀಡಿದ್ದಾರೆ ಎಂದು ಬಿಜೆಪಿಯವರು ತೋರಿಸುತ್ತಿರುವುದರಲ್ಲಿ ಸಹ ಕಂದಾಯಾಧಿಕಾರಿ ಸಹಿ ಮಾಡಿದ್ದಾರೆ. ಅದರಲ್ಲಿ ಉಲ್ಲೇಖ 9-7-2017 ರಂದು ಚಿಲುಮೆ ಸಂಸ್ಥೆ ನೀಡಿರುವ ಮನವಿ ಎಂದಿದೆ. ಈ ಅರ್ಜಿ ಸಾಚಾ ಆಗಿದೆಯೆ? ಆಗಿದ್ದರೆ ಬಿಜೆಪಿ ಎಂಎಲ್‍ಎ ಇರುವ ಕಡೆಯೆ ಇದು ಯಾಕೆ ಸಂಭವಿಸಿದೆ? ಆ ಅಧಿಕಾರಿಯ ಮೇಲೆ ಯಾರ ಒತ್ತಡವಿತ್ತು?
ಬೂತು ಮಟ್ಟದ ಅಧಿಕಾರಿಯನ್ನು ನೇಮಿಸಲು ಸಹ ಕಂದಾಯಾಧಿಕಾರಿಗೆ ಯಾವುದೇ ಅಧಿಕಾರವಿಲ್ಲವೆಂದು ಪ್ರಜಾಪ್ರತಿನಿಧಿ ಕಾಯ್ದೆ-1950 ಹೇಳುತ್ತದೆ. ಹಾಗಾಗಿ ಬಿಜೆಪಿಯವರು ಒಬ್ಬ ಸಣ್ಣ ಅಧಿಕಾರಿ ಮೇಲೆ ಪ್ರಭಾವ ಬೀರಿ ಅಕ್ರಮವಾಗಿ ಆದೇಶ ಕೊಡಿಸಿದ್ದಾರೆಯೆ ಎಂಬುದನ್ನೂ ಪರಿಶೀಲಿಸಬೇಕಲ್ಲವೆ?
ಯಾವ ವರ್ಷದಿಂದ ಅಕ್ರಮಗಳಾಗಿವೆಯೊ ಆ ವರ್ಷದಿಂದ ಪ್ರತಿಯೊಂದು ಸೇರ್ಪಡೆ, ಪ್ರತಿಯೊಂದು ತೆಗೆಯುವಿಕೆಯನ್ನು ಚುನಾವಣಾ ಆಯೋಗವು ಖುದ್ದು ಪರಿಶೀಲಿಸಿ ಖಾತ್ರಪಡಿಸಿಕೊಳ್ಳಬೇಕು. ಅದುವರೆಗೂ ಈಗ ಸಿದ್ಧಪಡಿಸಿರುವ ಮತದಾರರ ಪಟ್ಟಿಯನ್ನು ಪ್ರಕಟ ಮಾಡದೆ ತಡೆಹಿಡಿಯಬೇಕು. ಭಾಗಿಯಾದ ಎಲ್ಲರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚಿಲುಮೆ ಸಂಸ್ಥೆಗೆ ಹಣ ನೀಡಿರುವವರು ಯಾರು? ಯಾಕಾಗಿ ಅವರಿಗೆ ಹಣ ನೀಡುತ್ತಿದ್ದರು? ಚಿಲುಮೆ ಸಂಸ್ಥೆಯ ಹಿನ್ನೆಲೆ ಏನು? ಅವರ ಹಿಂದೆ ಯಾರ್ಯಾರು ಇದ್ದಾರೆ? ಸಂಸ್ಥೆಯವರು ಯಾರೊಂದಿಗೆ ಸಂಪರ್ಕದಲ್ಲಿದ್ದರು? ಅವರ ನಡುವೆ ನಡೆದ ಸಂವಹನಗಳೇನು? ಸಂವಾದಗಳೇನು? ಇವೆಲ್ಲ ಅಂಶಗಳನ್ನು ತನಿಖೆ ಮಾಡಿ ಸಾರ್ವಜನಿಕರ ಮುಂದೆ ಇಡಬೇಕಾಗಿದೆ. ಹಾಗೆಯೆ ರಾಜ್ಯದಲ್ಲಿ ಎಲ್ಲೆಲ್ಲಿ ಹೀಗಾಗಿದೆ ಎಂಬ ಮಾಹಿತಿಯನ್ನೂ ಆಯೋಗವು ಸ್ಪಷ್ಟಪಡಿಸಬೇಕು.
ಮತದಾರರ ಪಟ್ಟಿಗಳ ಪರಿಷ್ಕರಣೆಯ ಮೇಲೆ ನಿಗಾವಹಿಸಬೇಕಾದ ಎಲೆಕ್ಟೋರಲ್ ರೋಲ್ ಅಬ್ಸರ್ವರ್ ಗಳು ಏನು ಮಾಡಿದ್ದಾರೆ ? ಅವರು ನಿರ್ಲಕ್ಷ್ಯ ವಹಿಸಿದ್ದರೆ, ಪಕ್ಷಪಾತ ಮಾಡಿದ್ದರೆ ಅವರ ಮೇಲೆಯೂ ನಿರ್ದಾಕ್ಷಿಣ್ಯವಾದ ಕ್ರಮ ತೆಗೆದುಕೊಳ್ಳಬೇಕು.
ಬಿಬಿಎಂಪಿಯ ಡಿ ಲಿಮಿಟೇಷನ್ ಪ್ರಕ್ರಿಯೆಯಲ್ಲಿಯೂ ಈ ಸಂಸ್ಥೆ ಭಾಗವಹಿಸಿದೆಯೆಂದು ಹೇಳಲಾಗುತ್ತಿದೆ. ಈ ಕೆಲಸವು ವೈಜ್ಞಾನಿಕವಾಗಿ ನಡೆದಿದೆಯೆ? ಎಂಬುದರ ಕುರಿತು ರಾಜ್ಯ ಚುನಾವಣಾ ಆಯೋಗವು ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಅವೈಜ್ಞಾನಿಕವಾಗಿದ್ದರೆ, ಪಕ್ಷಪಾತದಿಂದ ಕೂಡಿದ್ದರೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ತನಿಖೆಯನ್ನು ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು ಮಾಡಿದರೆ ಅದು ಪಕ್ಷಪಾತದಿಂದ ಕೂಡಿರುತ್ತದೆ. ಆದ್ದರಿಂದ ಕೂಡಲೆ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.
Key words: no action -against – Chilume organization-Former CM -Siddaramaiah – government.