ಬೆಂಗಳೂರು, ಸೆಪ್ಟೆಂಬರ್ 21, 2021 (www.justkannada.in): ಮುಂದಿನ ದಿನಗಳಲ್ಲಿ ವಿದ್ಯುತ್ ವಾಹನಗಳ ಬಳಕೆ ಅನಿವಾರ್ಯವಾಗುವ ಎಲ್ಲಾ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ವಿದ್ಯುತ್ ವಾಹನಗಳನ್ನು ಚಾರ್ಜ್ ಮಾಡುವ ನಿಲ್ದಾಣಗಳ ಸ್ಥಾಪನೆ ಹಾಗೂ ನಿರ್ವಹಣೆಯಲ್ಲಿ ಇರುವಂತಹ ಸವಾಲುಗಳನ್ನು ತಿಳಿದುಕೊಳ್ಳುವ ಸಂಬಂಧ ಕೈಗೊಳ್ಳಲಾಗಿದ್ದಂತಹ ಒಂದು ಅಧ್ಯಯನವು, ವಿದ್ಯುತ್ ವಾಹನಗಳ ಬಳಕೆದಾರರು ರಾತ್ರಿ ವೇಳೆ ತಮ್ಮ ವಾಹನಗಳನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಚಾರ್ಜ್ ಮಾಡಿಕೊಳ್ಳುವಂತೆ ಸೂಚಿಸುವುದು ಒಳಿತು ಎಂದು ಶಿಫಾರಸ್ಸು ಮಾಡಿದೆ.
ವಿದ್ಯುತ್ ವಾಹನ ನೀತಿ, 2018 ರ ಪ್ರಕಾರ 2030ರ ವೇಳೆಗೆ ಕರ್ನಾಟಕದಲ್ಲಿರುವ ಒಟ್ಟು 2.4 ಕೋಟಿ ವಾಹನಗಳ ಪೈಕಿ ಅರ್ಧದಷ್ಟು ವಾಹನಗಳನ್ನು ವಿದ್ಯುತ್ ವಾಹನಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಲಾಗಿದೆ.
ಈ ಹಿನ್ನೆಲೆಯಲ್ಲಿ, ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಸ್ಥಾಪನೆಗೊಂಡಿರುವಂತಹ ಇಂಡಿಯಾ ಸ್ಮಾರ್ಟ್ ಗ್ರಿಡ್ ಫೋರಂ (ಐಎಸ್‌ಜಿಎಫ್) ವತಿಯಿಂದ ಕೈಗೊಳ್ಳಲಾಗಿದ್ದಂತಹ ಬೆಸ್ಕಾಂನ ಮೂಲಭೂತಸೌಕರ್ಯಗಳ ಕುರಿತಾದ ಅಧ್ಯಯನವು ಕೆಲವು ಸವಾಲುಗಳನ್ನು ಗುರುತಿಸಿದೆ.
ಈ ಅಧ್ಯಯನದಲ್ಲಿ ವಿದ್ಯುತ್ ವಾಹನಗಳ ಸಂಖ್ಯೆ ಹೆಚ್ಚಾಗಿ, ದಟ್ಟಣೆ ಹೆಚ್ಚಾಗಿರುವ ಸಮಯದಲ್ಲಿ ಅವುಗಳನ್ನು ಚಾರ್ಜ್ ಮಾಡಲಾರಂಭಿಸಿದರೆ ವಿದ್ಯುತ್ ಬೇಡಿಕೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಮೇಲಾಗಿ ವಿದ್ಯುತ್ ವಾಹನಗಳ ಪೈಕಿ ಒಂದೊಂದು ವಾಹನದ ವಿದ್ಯುತ್ ಚಾರ್ಜಿಂಗ್ ವಿಧಾನ ಹಾಗೂ ಅಗತ್ಯಗಳಲ್ಲಿಯೂ ವ್ಯತ್ಯಾಸವಿರುತ್ತದೆ. “ಈ ಪ್ರಕಾರವಾಗಿ ವಿದ್ಯುತ್ ವಾಹನಗಳನ್ನು ಚಾರ್ಜ್ ಮಾಡುವ ಲೋಡ್ ನಿಂದಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗಿ ಸಬ್ ಸ್ಟೇಷನ್ ಹಾಗೂ ವಿತರಣಾ ಟ್ರಾನ್ಸ್ ಫಾರ್ಮರ್ ಗಳ ಮೇಲಿನ ಲೋಡ್ ಹೆಚ್ಚಾಗುತ್ತದೆ. ಆ ಮೂಲಕ ಟ್ರಾನ್ಸ್ ಫಾರ್ಮರ್‌ಗಳ ಬಾಳಿಕೆ ಇಳಿಕೆಯಾಗುತ್ತದೆ. ಜೊತೆಗೆ, ವಿದ್ಯುತ್ ವಾಹನಗಳ ಚಾರ್ಜಿಂಗ್‌ನಿಂದಾಗಿ ವೋಲ್ಟೇಜ್‌ನಲ್ಲಿ ವ್ಯತ್ಯಯ, ವಿದ್ಯುತ್ ಸರರಬರಾಜು ಹಾಗೂ ವೋಲ್ಟೇಜ್‌ನಲ್ಲಿ ಅಸಮತೋಲನದಂತಹ ಸಮಸ್ಯೆಗಳು ಎದುರಾಗಿ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ,” ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.
ಬೆಸ್ಕಾಂನೊಂದಿಗೆ ಸಮಾಲೋಚನೆ ನಡೆಸಿದ ಐಎಸ್‌ಜಿಎಫ್ ವಿತರಣಾ ಸಂಪರ್ಕಜಾಲದ ಲಭ್ಯತೆ, ದೊರೆಯುವಿಕೆ ಹಾಗೂ ಸ್ಥಳ ಮತ್ತು ಇತರೆ ಮಾನದಂಡಗಳನ್ನು ಆಧರಿಸಿ ದೇಶದ ೯೦ ನಗರ ಪ್ರದೇಶಗಳಲ್ಲಿ ೩೦೦ ಸ್ಥಳಗಳನ್ನು ಗುರುತಿಸಿದೆ. ಈ ರೀತಿ ಗುರುತಿಸಿರುವ ಸ್ಥಳಗಳಲ್ಲಿ, ಅನುಕೂಲ ಹಾಗೂ ಸ್ಥಳಾವಕಾಶ ಲಭ್ಯತೆಯ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಧಾರ್ಮಿಕ ಸ್ಥಳಗಳು ಹಾಗೂ ಶಾಪಿಂಗ್ ಮಾಲ್ ಗಳು ಸೇರಿವೆ.
ವಿದ್ಯುತ್ ವಾಹನಗಳು ಮೊದಲು ಬರುತ್ತವೋ ಅಥವಾ ಚಾರ್ಜಿಂಗ್ ನಿಲ್ದಾಣಗಳು ಮೊದಲೋ ಎಂಬ ಗೊಂದಲದ ಪ್ರಶ್ನೆಗೆ ಉತ್ತರಿಸಿರುವ ಐಎಸ್‌ಜಿಎಫ್, ಸರ್ಕಾರದ ಅನುದಾನ ಹಾಗೂ ಬೆಂಬಲದೊಂದಿಗೆ ವಿದ್ಯುತ್ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸಿರುವ ಉತ್ತರ ಅಮೇರಿಕಾ, ಯೂರೋಪ್ ಹಾಗೂ ಜಪಾನ್ ರಾಷ್ಟ್ರಗಳ ಉದಾಹರಣೆಯನ್ನು ನೀಡಿದೆ. ಅದರ ಪ್ರಕಾರ ಬೆಸ್ಕಾಂ ವತಿಯಿಂದ ಸ್ಥಾಪಿಸಲ್ಪಡುವ ಚಾರ್ಜಿಂಗ್ ನಿಲ್ದಾಣಗಳಿಂದಾಗಿ ಹಣಕಾಸಿನ ಮುಗ್ಗಟ್ಟು ಎದುರಾಗುವ ಸಾಧ್ಯತೆಗಳಿವೆ, ಏಕೆಂದರೆ ಕಾರ್ಯಾಚರಣೆ ವೆಚ್ಚಗಳ ಎದುರಿನಲ್ಲಿ ವ್ಯಾಪಾರ ಲಾಭದ ಪ್ರಮಾಣ ತುಂಬಾ ಕಡಿಮೆ ಇದೆ. ವಿದ್ಯುತ್ ಚಾರ್ಜ್ ಮಾಡುವ ವಿಧಾನದ ಅಳವಡಿಕೆಯಿಂದ ವ್ಯಾಪಾರದಲ್ಲಿ ವೃದ್ಧಿಯಾದರೂ, ಅಳವಡಿಕೆಯ ಗತಿ ನಿಧಾನವಾಗಿರಲಿದೆಯಂತೆ.
ವರದಿಯ ಪ್ರಕಾರ, “ಸದ್ಯಕ್ಕೆ ಕೇವಲ ವಿದ್ಯುತ್ ವಾಹನಗಳನ್ನು ಚಾರ್ಜ್ ಮಾಡುವುದನ್ನೇ ಪ್ರಮುಖ ವ್ಯಾಪಾರವನ್ನಾಗಿ ಪರಿಗಣಿಸಿ ನಿಲ್ದಾಣವನ್ನು ಸ್ಥಾಪಿಸುವುದರಿಂದ ದೊಡ್ಡ ಮಟ್ಟದ ಲಾಭ ಹಾಗೂ ಸುಸ್ಥಿರತೆ ಕಾಣುವಂತಿಲ್ಲ, ಇದರಿಂದ ಖಾಸಗಿ ಹೂಡಿಕೆಗಾರರನ್ನು ಆಕರ್ಷಿಸುವುದು ಕಷ್ಟ.” ಇದನ್ನು ಕಾರ್ಯಸಾಧ್ಯವಾಗಿರುವಂತಹ ಮಾದರಿಯನ್ನಾಗಿ ಮಾಡಲು ದೊಡ್ಡ ವ್ಯಾಪಾರ ಸಂಸ್ಥೆಗಳಿಂದ ಹಣಕಾಸಿನ ಬೆಂಬಲ ಹಾಗೂ ಸರ್ಕಾರದಿಂದ ಸಹಾಯಧನ ಒದಗಿಸುವಂತಹ ಹಲವು ಆಯ್ಕೆಗಳನ್ನು ಪರಿಗಣಿಸುವ ಅಗತ್ಯವಿದೆ.
ವಿದ್ಯುತ್ ವಾಹನಗಳನ್ನು ಚಾರ್ಜ್ ಮಾಡುವ ಕೆಲಸ ಪ್ರಮುಖವಾಗಿ ವಿದ್ಯುತ್ ಸರಬರಾಜಿನ ಲೋಡ್ ಕಡಿಮೆ ಇರುವ ಸಮಯದಲ್ಲಿ, ಅಂದರೆ ರಾತ್ರಿ ವೇಳೆಯಲ್ಲಿ ನಡೆಯುತ್ತದೆ. ಹಾಗಾಗಿ ರಾತ್ರಿ ೧೧.೦೦ ಗಂಟೆಯಿAದ ಬೆಳಿಗ್ಗೆ ೫ ಗಂಟೆಯ ನಡುವಿನ ವಿದ್ಯುತ್ ಸರಬರಾಜಿಗೆ ದರ ಕಡಿತ ಮಾಡುವಂತೆಯೂ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
ಜೊತೆಗೆ, ಹೆಚ್ಚಳವಾಗುವ ವಿದ್ಯುತ್ ಸರಬರಾಜಿನ ಬೇಡಿಕೆಯನ್ನು ಪೂರೈಸಲು ಬೆಸ್ಕಾಂನ ಮೂಲಭೂತಸೌಕರ್ಯ, ವಿಶೇಷವಾಗಿ ಫೀಡರ್‌ಗಳನ್ನು ಉನ್ನತೀಕರಿಸುವಂತೆಯೂ ಶಿಫಾರಸ್ಸು ಮಾಡಲಾಗಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: no advantage -handling – overload- charging electric- vehicles -Bescom.