ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ  ಕಿಡಿ: ಎಪಿಎಂಸಿ ಕಾಯ್ದೆಯ ತಿದ್ದುಪಡಿ ನೀತಿ ಬದಲಾವಣೆ ಇಲ್ಲ ಎಂದ ಸಚಿವ ಎಸ್.ಟಿ ಸೋಮಶೇಖರ್ …

ಮೈಸೂರು,ಡಿಸೆಂಬರ್, 14,2020(www.justkannada.in): ಎಪಿಎಂಸಿ ಕಾಯ್ದೆಯ ತಿದ್ದುಪಡಿ ನೀತಿಯನ್ನು ಬದಲಾಯಿಸುವುದಿಲ್ಲ. ರೈತರಿಗೆ ಅನುಕೂಲವನ್ನುಂಟು ಮಾಡುವ ಈ ಕಾಯ್ದೆಯಿಂದ ಲಾಭವೇ ವಿನಹ ಹಾನಿಯಿಲ್ಲ. ರೈತ ತಾನು ಬೆಳೆದ ಬೆಳೆಯನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದು, ತನ್ನ ಬೆಳೆಗೆ ರೈತನೇ ದರ ನಿಗದಿ ಮಾಡಿಕೊಳ್ಳಬಹುದು, ಅಲ್ಲದೆ, ಕನಿಷ್ಠ ಬೆಂಬಲ ಬೆಲೆ ಈಗಲೂ ಇದೆ, ಮುಂದೂ ಇರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ.  ಇಂತಹ ಒಂದು ಸತ್ವಯುತ ಕಾಯ್ದೆಯನ್ನು ಏಕೆ ಬದಲಿಸಬೇಕು? ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಪ್ರಶ್ನಿಸಿದರು.logo-justkannada-mysore

ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಮೈಸೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದರು.

ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಮಾತನಾಡಲು ಸಿದ್ಧರಿದ್ದರೂ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದು ಸರಿಯಲ್ಲ. ಈಗಾಗಲೇ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಯಾರದ್ದೋ ಮಾತು ಕೇಳಿಕೊಂಡು ಪಟ್ಟು ಸಾಧಿಸುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತಪರ ಹೋರಾಟವನ್ನು ಮಾಡಿಕೊಂಡಿರಲಿ. ಅದುಬಿಟ್ಟು ಎಲ್ಲ ಕಡೆ ಮೂಗುತೂರಿಸಬಾರದು. ಅವರು ಯಾವ ನಾಟಕವಾಡಿದರೂ ಜನಕ್ಕೆ ಅರ್ಥವಾಗುತ್ತದೆ. ಅವರು ತಮ್ಮ ಡ್ರಾಮಾಗಳನ್ನು ಬಿಟ್ಟು 9 ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿರುವುದಕ್ಕೆ ಅಭಿನಂದನೆ ಸೂಚಿಸಬೇಕಿತ್ತು. ಅದು ಬಿಟ್ಟು ಸಾರಿಗೆ ನೌಕರರನ್ನು ಎತ್ತಿಕಟ್ಟಿ ಹೋರಾಟ ಮಾಡುವಂತೆ ಮಾಡುವುದು ಸರಿಯೇ? ಎಲ್ಲ ಕಡೆಯೂ ಕೋಡಿಹಳ್ಳಿ ಚಂದ್ರಶೇಖರ್ ಅವರು ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದಾರೆಯೇ? ಅವರು ರೈತರ ಪರ ಹೋರಾಟ ಮಾಡಲಿ, ಇಂತಹ ರಾಜಕೀಯ ಬೇಡ ಎಂದು ಸಚಿವ ಎಸ್.ಟಿ ಸೋಮಶೇಖರ್ ಕಿಡಿ ಕಾರಿದರು.

ಇನ್ನು ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಹೇಗೆ ರೈತರಿಗೆ ಪ್ರಯೋಜನಕಾರಿ ಎಂಬ ಬಗ್ಗೆ  4 ಕಂದಾಯ ವಿಭಾಗದಲ್ಲಿಯೂ ಸಹ ಸಭೆಗಳನ್ನು ನಡೆಸಿ ರೈತರಿಗೆ ಮತ್ತೊಮ್ಮೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.no-amendment-change-apmc-act-mysore-minister-st-somashekhar

ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಸುಸೂತ್ರ ಚಾಲನೆ

ಪಂಚಲಿಂಗ ದರ್ಶನವು ಸುಸೂತ್ರ ಹಾಗೂ ಸರಾಗವಾಗಿ ಆಯಿತು. ಮುಂಜಾನೆ 4.30ರಿಂದ 5.45ರ ವರೆಗೆ ನಿರ್ವಿಘ್ನವಾಗಿ ನೆರವೇರಿದೆ. 7 ವರ್ಷಕ್ಕೊಮ್ಮೆ ಮಹೋತ್ಸವ ನಡೆಯುತ್ತಿರುವುದರಿಂದ ಭಕ್ತರಿಗೂ ಸಹ ದರ್ಶನಕ್ಕೆ ಅವಕಾಶ ಸಿಗಬೇಕು. ಈಗ ಜಿಲ್ಲಾಡಳಿತ ಹೇರಿರುವ 1500 ಜನರ ನಿರ್ಬಂಧವನ್ನು ಸಡಿಲಿಸಿ ಹಂತ ಹಂತವಾಗಿ ಅನುಮತಿ ನೀಡಿ ಹೆಚ್ಚಿನವರಿಗೆ  ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಸುಸೂತ್ರ ಪಂಚಲಿಂಗ ಮಹೋತ್ಸವ ಕಾರ್ಯಕ್ರಮಕ್ಕೆ ಸೂಚಿಸಿರುವ ಸಿಎಂ

ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವ ಕಾರಣಕ್ಕೆ ಮುಖ್ಯಮಂತ್ರಿಗಳು ಪಂಚಲಿಂಗ ದರ್ಶನಕ್ಕೆ ಭಾಗವಹಿಸಲಿಲ್ಲ. ಮೊದಲು ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಿ, ಸಾರ್ವಜನಿಕರಿಗೆ ಸ್ಪಂದಿಸಬೇಕೆಂಬ ನಿಟ್ಟಿನಲ್ಲಿ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ. ಆದರೆ, ಪಂಚಲಿಂಗ ದರ್ಶನ ಮಹೋತ್ಸವದ ಯಶಸ್ಸಿಗಾಗಿ ಅವರು 2 ಬಾರಿ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದರು. ಇಂದೂ ಸಹ ಕರೆ ಮಾಡಿ ಪೂಜೆ, ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಉಸ್ತುವಾರಿ ಸಚಿವನಾಗಿರುವ ನನಗೆ ಸುಸೂತ್ರವಾಗಿ ನಡೆಸಿಕೊಡಬೇಕೆಂದು ಸಲಹೆ- ಸೂಚನೆ ನೀಡಿದ್ದಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಲ್.ನಾಗೇಂದ್ರ , ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಇದ್ದರು.

Key words: no amendment  change – APMC Act-mysore- Minister -ST Somashekhar.