ಮೈಸೂರು,ಮಾ,12,2020(www.justkannada.in): ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಮೃಗಾಲಯದ ಪಕ್ಷಿಗಳಲ್ಲಿ ಹಕ್ಕಿಜ್ವರದ ವೈರಾಣುಗಳು ಪತ್ತೆಯಾಗಿಲ್ಲ. ಹೀಗಾಗಿ ಪ್ರವಾಸಿಗರು ಆತಂಕಪಡುವುದು ಬೇಡ ಎಂದು ಮೃಗಾಲಯದ ಕಾರ್ಯಕಾರಿ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದ್ದಾರೆ.
ನೆರೆ ರಾಜ್ಯದ ಕೇರಳದಲ್ಲಿ ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಹಾಗೂ ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆ ಮತ್ತು ಮೈಸೂರಿನಲ್ಲಿ ಕೊಕ್ಕರೆಗಳ ಸಾವಿನ ಹಿನ್ನೆಲೆಯಲ್ಲಿ ಮೃಗಾಲಯದ ಪಕ್ಷಿಗಳಲ್ಲೂ ಹಕ್ಕಿಜ್ವರದ ವೈರಾಣು ಹರಡಿರಬಹುದು ಎನ್ನುವ ಭೀತಿ ಎಲ್ಲರಲ್ಲೂ ಎದುರಾಗಿತ್ತು. ಆದರೆ ಯಾರೂ ಭಯಪಡುವುದು ಬೇಡ. ಪರೀಕ್ಷಾ ವರದಿಯಲ್ಲಿ ಮೃಗಾಲಯದ ಪಕ್ಷಿಗಳಲ್ಲಿ ಹಕ್ಕಿಜ್ವರದ ವೈರಾಣುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಮೃಗಾಲಯದ ಎಲ್ಲ ಪ್ರಾಣಿಗಳ ಮಲ ಹಾಗೂ ಪಕ್ಷಿಗಳ ಹಿಕ್ಕೆಯನ್ನು ಸಂಗ್ರಹಿಸಿ 15 ದಿನಕ್ಕೊಮ್ಮೆ ಮಧ್ಯ ಪ್ರದೇಶದ ಭೂಪಾಲ್ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಪರೀಕ್ಷೆ ಮಾಡಿ ವರದಿ ನೀಡುತ್ತಾರೆ. ವರದಿ ಕೈಸೇರಿದ್ದು ಹಕ್ಕಿಜ್ವರದ ಸೋಂಕು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯ ಆಗಿರುವುದರಿಂದ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಏಪ್ರಿಲ್ ಹಾಗೂ ಮೇನಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತದೆ. ಮೃಗಾಲಯದಲ್ಲಿ ಹಕ್ಕಿಜ್ವರದ ಬಗ್ಗೆ ಪಶು ವೈದ್ಯ ಇಲಾಖೆ ಸಿಬ್ಬಂದಿ ಅರಿವು ಮೂಡಿಸುತ್ತಿದ್ದಾರೆ ಎಂದು ಅಜಿತ್ ಕುಲಕರ್ಣಿ ಅವರು ಹೇಳಿದ್ದಾರೆ.
Key words: No- bird viruses- found – Mysore Zoo -clearify