ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಮೈಸೂರು,ಅಕ್ಟೋಬರ್,8,2024 (www.justkannada.in): ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು  ಅರಮನೆಯಲ್ಲಿ ನಡೆಯುವ ಪೊಲೀಸ್ ಬ್ಯಾಂಡ್ ‌ನಲ್ಲಿ‌ ಭಾಗಿಯಾಗಲು ಗೃಹ ಸಚಿವ ಪರಮೇಶ್ವರ್ ಮೈಸೂರಿಗೆ ಆಗಮಿಸಿದ್ದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಕಮೀಷನರ್ ಸೀಮಾ ಲಾಟ್ಕರ್ ಜೊತೆ ಮಾತುಕತೆ ನಡೆಸಿದರು.

ನಂತರ ಮಾತನಾಡಿದ ಪರಮೇಶ್ವರ್, ಪೋಲಿಸ್ ಬ್ಯಾಂಡ್ ಎನ್ನುವುದು ಮಹಾರಾಜರು,ಬ್ರಿಟಿಷ್‌ ಕಾಲದಿಂದಲೂ ಬಹಳ  ಪ್ರಮುಖವಾದ ಒಂದು ಸಂಗೀತ ವಾದ್ಯ. ಅದನ್ನ ಈಗಲೂ ಕೂಡ ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಬ್ರಿಟಿಷ್ ಕಾಲದ ಸಂಗೀತ ಉಪಕರಣಗಳು ಈಗಲೂ ಚಾಲ್ತಿಯಲ್ಲಿರುವುದು ಬಹಳ ಅಚ್ಚರಿ. ಅರಮನೆ ಆವರಣದಲ್ಲಿ ನಡೆವ ಪೋಲಿಸ್ ಬ್ಯಾಂಡ್ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ್ದೇನೆ ಎಂದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ. ಇದರ ಬಗ್ಗೆ ಹೈಕಮಾಂಡ್ ಸ್ಪಷ್ಟವಾದ ನಿಲುವು ಪ್ರಕಟಿಸಿದೆ. ಮುಡಾ ಹಗರಣ ಪ್ರಕರಣದಲ್ಲೂ ಕೂಡ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ.  ಈ ಕಾರಣ ಆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.

ಸತೀಶ್ ಜಾರಕಿಹೊಳಿ ಸಚಿವರ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ನಾನೂ ಕೂಡ ಹಲವು ಸಚಿವರ ಭೇಟಿ ಆಗ್ತೀನಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಜೊತೆಗೆ ಕಾಫಿ ಕುಡಿಯುತ್ತೇವೆ. ಅಷ್ಟಕ್ಕೇ ಬೇರೆ ಅರ್ಥ ಕಲ್ಪಿಸುವುದು ಬೇಡ. ಸಿಎಂ ಬದಲಾವಣೆ ಊಹಾಪೋಹಗಳಿಗೆ ನಾನು ಹೆಚ್ಚು ಮಾತನಾಡಲ್ಲ ಎಂದರು.

ಹರಿಯಾಣ ಸೋಲಿಗೆ ಮುಡಾ ಹಗರಣ ಕಾರಣ ಎಂಬ ಕೋಳಿವಾಡ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಸೋಲಿಗೆ ಕಾರಣ ಏನು ಎಂದು ಹೈಕಮಾಂಡ್ ಪರಾಮರ್ಶೆ ಮಾಡುತ್ತೆ. ಮೋದಿ ಪ್ರಚಾರದ ವೇಳೆ ಮುಡಾ ಹಗರಣ ಸಂಬಂಧ ಮಾತನಾಡಿದ್ದಾರೆ. ಅದು ಅಲ್ಲಿ ವರ್ಕೌಟ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಅದೇ ಸೋಲಿಗೆ ಕಾರಣ ಅಂತ ಹೇಳಲಿಕ್ಕೆ ಆಗಲ್ಲ ಎಂದರು.

Key words: no change, CM , Home Minister, Dr. G. Parameshwar