ದರ್ಶನ್ ಮಧ್ಯಂತರ ಜಾಮೀನು ತಡೆ ಕೋರಿ ಮೇಲ್ಮನವಿ ಸಲ್ಲಿಕೆಗೆ ವಿಳಂಬ ಆಗಿಲ್ಲ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು, ನವೆಂಬರ್ ,13,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  2ನೇ ಆರೋಪಿ ನಟ ದರ್ಶನ್ ​ಗೆ ಈಗಾಗಲೇ ಮಂಜೂರಾಗಿರುವ ಮಧ್ಯಂತರ ಜಾಮೀನು ತಡೆ ಕೋರಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಆಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಮೇಲ್ಮನವಿ ಯಾವಾಗ ಸಲ್ಲಿಸಬೇಕು ಎಂಬುದನ್ನು ಗೃಹ ಇಲಾಖೆ ಕಾರ್ಯದರ್ಶಿ ತೀರ್ಮಾನಿಸುತ್ತಾರೆ. ಮೇಲ್ಮನವಿ ಸಲ್ಲಿಸುವುದಾದರೆ ಸಲ್ಲಿಸಿ ಎಂದು ನಾನೂ ಸೂಚಿಸಿದ್ದೇನೆ. ಇಂಥ ಪ್ರಕರಣಗಳಲ್ಲಿ ಪ್ರಕ್ರಿಯೆಗಳನ್ನು ಅನುಸರಿಸಿ ಮುಂದುವರಿಯಬೇಕಾಗುತ್ತದೆ. ಮೇಲ್ಮನವಿ ಸಲ್ಲಿಕೆ ವಿಚಾರವಾಗಿ ಪೊಲೀಸ್​ ಇಲಾಖೆಯಿಂದಲೂ ಕೂಡ ಪ್ರಸ್ತಾವನೆ ಬರಬೇಕು. ಕಾನೂನು ಇಲಾಖೆಯಿಂದಲೂ ಮಾಹಿತಿ ತೆಗೆದುಕೊಳ್ಳಬೇಕು.  ಬಳಿಕ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ 2ನೇ ಆರೋಪಿ ನಟ ದರ್ಶನ್ ​ಗೆ  ಬೆನ್ನುನೋವು ಹಿನ್ನೆಲೆ, ಚಿಕಿತ್ಸೆಗಾಗಿ 6 ವಾರಗಳ ಕಾಲ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು  ಮಂಜೂರು ಮಾಡಿದೆ.

Key words: no delay, appeal, Darshan, interim bail, Minister, Parameshwar