ಮೈಸೂರು,ಅಕ್ಟೋಬರ್,27,2022(www.justkannada.in): ರಾಜ್ಯದಲ್ಲಿ ಸರ್ಕಾರವೇ ಇಲ್ಲ. 34 ಸಚಿವರಲ್ಲಿ 26 ಸಚಿವರಿದ್ದಾರೆ. ಬೊಮ್ಮಾಯಿಯವರೇ 8 ಖಾತೆಗಳನ್ನು ಇಟ್ಟುಕೊಂಡಿದ್ದು, ಯಾವುದಕ್ಕೂ ಸರಿಯಾಗಿ ನ್ಯಾಯ ಒಗದಿಸುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ಸಚಿವಾಲಯಗಳು ಖಾಲಿ ಇವೆ. ಬೊಮ್ಮಾಯಿ ಸಿಎಂ ಆದ ಮೇಲೆ 12 ಖಾತೆಗಳು ಅವರ ಬಳಿಯೇ ಇವೆ. 37 ಇಲಾಖೆಗಳನ್ನು ಸಿಎಂ ಸೇರಿ 5 ಮಂದಿ ಸಚಿವರು ಮಾತ್ರ ನಿರ್ವಹಿಸುತ್ತಿದ್ದಾರೆ. ಯಾವ ಇಲಾಖೆಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದು ಕರ್ನಾಟಕದ ದುರಂತ ಎಂದು ಕಿಡಿ ಕಾರಿದರು.
ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಬೆಂಗಳೂರಿನಲ್ಲಿ 2ಸಾವಿರ ಕಿ.ಮೀ ರಸ್ತೆಯಿದೆ. ಇದರಲ್ಲಿ ೩೩ ಸಾವಿರ ಗುಂಡಿಗಳಿವೆ, ೧೦ ಸಾವಿರ ಮುಚ್ಚಿದ್ದೇವೆ. ಇದಕ್ಕೆ ೮೦೦ ಕೋಟಿ ಖರ್ಚಾಗಿದೆ ಎಂದು ತಿಳಿಸಿದೆ. ಹೊಸ ರಸ್ತೆ ನಿರ್ಮಿಸಲು ೧.೨ ಕೋಟಿ ವೆಚ್ಚವಾದರೆ ಗುಂಡಿ ಮುಚ್ಚಲು ೧.೫ ಕೋಟಿ ಖರ್ಚು ಮಾಡಿದ್ದಾರೆ. ಮೈಸೂರಿನಲ್ಲಿ ೧೪೦೦ ಕಿ.ಮೀ ರಸ್ತೆಯಿದ್ದು, ೫೦೦೦ ಸಾವಿರ ಗುಂಡಿಗಳಿವೆ. ೧೫೦ ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ದುಡ್ಡು ಹೊಡೆಯುವುದು ಬಿಟ್ಟರೆ ಬೇರೆ ಏನೂ ಮಾಡುತ್ತಿಲ್ಲ. ನಂ.೧ ಆಗಿದ್ದ ಬೆಂಗಳೂರು ಅದೋಗತಿಗಿಳಿದಿದೆ. ಹೂಡಿಕೆದಾರರು ನೆರೆಯ ರಾಜ್ಯಗಳಿಗೆ ಹೋಗುತ್ತಿದ್ದಾರೆ ಎಂದು ದೂರಿದರು.
ದಸರಾ ಲೆಕ್ಕೆ ಕೊಡಿ..
ದಸರಾ ಮುಗಿದು 23 ದಿನಗಳಾಗಿದೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಲೆಕ್ಕ ಕೊಟ್ಟಿಲ್ಲ. ಪ್ರಾಯೋಜಕತ್ವದಿಂದಲೇ ಕೋಂಟ್ಯತರ ರೂ ಬಂದಿದೆ. ಅದೆಲ್ಲಾ ಎಲ್ಲೋಯ್ತು? ಯುವ ಸಂಭ್ರಮಕ್ಕೆ ಬಂದ ನಟ ನಟಿಯರು ತಮ್ಮ ಸಿನಿಮಾ ಪ್ರಮೋಷನ್ ಮಾಡಿದರು. ಆದರೂ ಅವರಿಗೆ ಲಕ್ಷ ಲಕ್ಷ ನೀಡಲಾಗಿದೆ. ೨೫ ಸಾವಿರ ಪಾಸ್ ಗಳಲ್ಲಿ ೧೫ ಸಾವಿರ ಪಾಸ್ ಗಳನ್ನು ತಮ್ಮ ಕ್ಷೇತ್ರದವರಿಗೆ ನೀಡಿದ್ದಾರೆ. ಮನೆ ಮನೆ ದಸರಾಗೆ ವಾರ್ಡ್ ಗೆ ೨ ಲಕ್ಷ ಕೊಟ್ಟಿದ್ದೀರಿ. ಎಷ್ಟು ವಾರ್ಡ್ಗಳಲ್ಲಿ ದಸರಾ ಮಾಡಿದ್ದಾರೆ ಲೆಕ್ಕ ಕೊಡಿ? ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಮಾಡುತ್ತಿದ್ದೀರಿ ಎಂದು ದೂರಿದರು.
ಗುಜರಾತ್ ಗೆ ಸೆಮಿಕಂಡಕ್ಟರ್…
ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ೨೫ ಸಾವಿರ ಕೋಟಿ ವೆಚ್ಚದ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆ ಮಾಡಲಾಗುತ್ತದೆ ಎಂದು ಹೇಳಿ ೬ ತಿಂಗಳಾಯಿತು. ಆದರೆ, ನನಗಿರುವ ಮಾಹಿತಿಯಂತೆ ಗುಜರಾತ್ ನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಈಗಾಗಲೇ ಭೂಮಿಪೂಜೆ ಮಾಡಲಾಗಿದೆ. ಮೈಸೂರಿನಲ್ಲಿ ಘಟಕ ಸ್ಥಾಪನೆಯಾಗುತ್ತದೋ ಇಲ್ಲವೋ ಎಂಬುದನ್ನು ಸಂಸದ ಪ್ರತಾಪ್ ಸಿಂಹ, ಸಚಿವರಾದ ಅಶ್ವತ್ಥನಾರಾಯಣ್, ಎಸ್.ಟಿ.ಸೋಮಶೇಖರ್ ತಿಳಿಸಬೇಕು ಎಂದು ಒತ್ತಾಯಿಸಿದರು.
ಮಾರ್ಚ್ಗೆ ಟರ್ಮಿನಲ್ ಸಿದ್ದವಾಗುತ್ತದೆ. ದಸರಾ ವೇಳೆಗೆ ದಶಪಥ ಸಂಚಾರಕ್ಕೆ ಮುಕ್ತವಾಗುತ್ತದೆ ಎಂದು ಪ್ರತಾಪಸಿಂಹ ಹೇಳಿದ್ದರು. ಆದರೆ, ಮಳೆಯಿಂದ ಹಾನಿಯಾದ ರಸ್ತೆಯನ್ನೇ ಇನ್ನೂ ಸರಿಪಡಿಸಿಲ್ಲ. ದುರಸ್ತಿಗೆ ೧ ಸಾವಿರ ಕೋಟಿ ಹೆಚ್ಚು ಅನುದಾನ ಕೇಳಿದ್ದಾರೆ. ಇದರಲ್ಲಿ ೧೦೦ ಕೋಟಿ ಕಮಿಷನ್ ಪಡೆದಿದ್ದಾರೆ ಎಂದು ಸಂಸದೆ ಸುಮಲತಾ ಆಪ್ತರೊಬ್ಬರು ಆರೋಪಿಸುತ್ತಿದ್ದಾರೆ. ಆದರೂ ಸುಮ್ಮನಿರುವದೇಕೆ? ನಿಮ್ಮ ವ್ಯಾಪ್ತಿಗೆ ಬರುವ ಹೆದ್ದಾರಿ ೬ ಕಿ.ಮೀ ಮಾತ್ರ. ಆದರೂ ಹೆಚ್ಚು ಕಾಳಜಿ ತೋರಿಸುವುದೇಕೆ ಎಂದು ಪ್ರಶ್ನಿಸಿದರು.
ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಆರ್ಥಿಕ ವ್ಯವಸ್ಥೆ ಸರಿಪಡಿಸಲು ಆಗದಿದ್ದಕ್ಕೆ ರಾಜೀನಾಮೆ ನೀಡಿದರು. ಆದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬರೀ ಸುಳ್ಳುಗಳನ್ನೇ ಹೇಳುತ್ತಾರೆ. ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ವಾರ್ಷಿಕವಾಗಿ ೩.೩೨ ಲಕ್ಷ ಕೋಟಿ ಆದಾಯ ಹೋಗುತ್ತದೆ. ಆದರೆ, ರಾಜ್ಯಕ್ಕೆ ವಾಪಸ್ ಕೊಟ್ಟಿರುವುದು ೪೨ ಸಾವಿರ ಕೋಟಿ ಮಾತ್ರ. ಇದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಪ್ರಶ್ನಿಸಿದರು.
ಬ್ಯಾಂಕ್ ಮೂಲಕ ಲೂಟಿ..
ಬ್ಯಾಂಕ್ ಗಳು ದೇಶದ ಜನರನ್ನು ಲೂಟಿ ಮಾಡುತ್ತಿವೆ. ಕೇಂದ್ರ ಸರ್ಕಾರ ಎಲ್ಲರಿಗೂ ಖಾತೆ ಮಾಡಿಸಿದೆ. ನಿರ್ವಹಣೆ ವೆಚ್ಚವೆಂದು ವಾರ್ಷಿಕವಾಗಿ ಸಾವಿರಾರು ರೂ ಖಾತೆಯಲ್ಲಿ ಕಟ್ ಆಗುತ್ತದೆ. ವಾರ್ಷಿಕವಾಗಿ ಲಕ್ಷಾಂತರ ಕೋಟಿ ಬ್ಯಾಂಕ್ ಗಳಿಗೆ ಹೋಗುತ್ತಿದೆ ಎಂದು ದೂರಿದರು.
ಹುಚ್ಚುನಾಯಿ ಎಂದು ಕರೆಯುತ್ತೇವೆ…
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಿಮೋಟ್ ಕಂಟ್ರೋಲ್ ಆಗಲಿದ್ದಾರೆ ಎಂದು ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಮ್ಮ ತಟ್ಟೆಯಲ್ಲೇ ಎಗ್ಗಣ ಬಿದ್ದಿದೆ. ಕಾಂಗ್ರೆಸ್ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ. ನಿಮ್ಮ ಪಕ್ಷದ ಅಧ್ಯಕ್ಷ ಚುನಾವಣೆ ಎಷ್ಟು ಬಾರಿ ಪಾರದರ್ಶಕಾಗಿ ನಡೆದಿದೆ? ಚುನಾವಣೆ ಮೂಲಕ ಎಷ್ಟು ಬಾರಿ ಆಯ್ಕೆ ಮಾಡಿದ್ದೀರಿ? ಜೆಪಿ ನಡ್ಡಾ ರಿಮೋಟ್ ಕಂಟ್ರೋಲ್ ಅಲ್ಲದೆ ಮತ್ತೇನು? ನಿಮಗೆ ಮಾನ ಮರ್ಯಾದೆ ಇದ್ದರೆ ಇದಕ್ಕೆಲ್ಲಾ ಉತ್ತರ ಕೊಡಿ. ಬೀದಿ ಬೀದಿಯಲ್ಲಿ ಹುಚ್ಚುನಾಯಿಯಂತೆ ಮಾತನಾಡುವ ಲೂಟಿ ರವಿಯನ್ನು ಇನ್ಮುಂದೆ ಹುಚ್ಚುನಾಯಿ ಎಂದು ಕರೆಯುತ್ತೇವೆ ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಣ್ಣ, ಈಶ್ವರಚಕ್ಕಡಿ, ಮಾಜಿ ಜಿ.ಪಂ ಅಧ್ಯಕ್ಷ ರಾಮು, ಮಾಧ್ಯಮ ವಕ್ತಾರ ಎಂ.ಮಹೇಶ್ ಇದ್ದರು.
Key words: no government – state: CM bommai-kpcc- M. Laxman