ಮೈಸೂರು,ಏಪ್ರಿಲ್,7,2021(www.justkannada.in): ಹೆಲಿಟೂರಿಸಂಗಾಗಿ ಹೆಲಿಪ್ಯಾಡನ್ನು ಲಲಿತ್ ಮಹಲ್ ಬಳಿ ಮಾಡುವ ಬದಲಾಗಿ ಮೈಸೂರಿನ ಹೊರವಲಯದಲ್ಲಿ ಹೆಲಿಪ್ಯಾಡ್ ಮಾಡುವಂತೆ ಮಾಡಲು ಪರಿಸರ ಬಳಗ ಮನವಿ ಮಾಡಿದೆ.
ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ಪರಿಸರ ಬಳಗದ ವತಿಯಿಂದ ಸುದ್ಧಿಗೋಷ್ಠಿ ನಡೆಸಿ ಮನವಿ ಮಾಡಲಾಯಿತು. ಮೈಸೂರು ನಗರಕ್ಕೆ ಹೆಲಿಟೂರಿಸಂ ಬರುತ್ತಿರುವುದಕ್ಕೆ ಯಾವುದೇ ವಿರೋಧವಿಲ್ಲ ಎಂದು ಪ್ರಾರಂಭದಲ್ಲಿಯೇ ಸ್ಪಷ್ಟಪಡಿಸುತ್ತೇವೆ. ನಮ್ಮ ಮನವಿ ಲಲಿತ್ ಮಹಲ್ ಬಳಿ ಬೇಡ , ಮೈಸೂರಿನ ಹೊರ ವಲಯದಲ್ಲಿ ಮಾಡಿ ಎಂಬುದು. ಮೈಸೂರು ನಗರದ ಹೆಮ್ಮೆಯ ಕಿರೀಟಕ್ಕೆ ಹೆಲಿಟೂರಿಸಂ ಮತ್ತೊಂದು ಗರಿಯಾಗಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿ ಎಂದು ಪರಿಸರ ಬಳಗ ಆಶಿಸಿದೆ.
ಈ ಸಂಬಂಧ ಪರಿಸರ ಬಳಗವೂ ಹಲವು ಪ್ರಶ್ನೆಗಳನ್ನ ಹಾಕಿದ್ದು ಅವು ಈ ಕೆಳಕಂಡಂತಿದೆ.
ಪ್ರವಾಸೀ ತಾಣವಾಗಿ ಮೈಸೂರು ಆಕರ್ಷಣೀಯವಾಗಲು ಚಾಮುಂಡಿಬೆಟ್ಟ, ಲಲಿತ್ ಮಹಲ್ ಬಳಿಯ ನೂರಾರು ಮರಗಳು, ಅವುಗಳಿಂದ ತಾನಾಗೇ ಸೃಷ್ಟಿಯಾಗುವ ತಂಪುವಾತಾವರಣ ಮತ್ತು ಜೀವವೈವಿಧ್ಯವೂ ಕಾರಣ. ಅದನ್ನು ನಾಶಮಾಡಿ, ನಗರದ ಬಿಸಿಯೇರಿಸಿ, ಪ್ರವಾಸಿಗರನ್ನು ಆಕರ್ಷಿಸಲು ಹೊರಡುವುದು ಸರಿಯೇ..?
ಜಾಗತಿಕ ತಾಪಮಾನದಿಂದ ಇಂದು ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಪರಿಸರ ನಾಶವಾಗದ ಹಾಗೆ ಅಭಿವೃದ್ಧಿ ಯೋಜನೆಗಳನ್ನು ಮಾಡುವುದು ನಾಗರಿಕರಾದ, ವಿದ್ಯಾವಂತರಾದ ನಮ್ಮೆಲ್ಲರ ಕರ್ತವ್ಯವಲ್ಲವೇ? ಎಂದು ಪರಿಸರ ಬಳಗ ಪ್ರಶ್ನಿಸಿದೆ.
ಲಲಿತ್ ಮಹಲ್ ಹೋಟೆಲ್ ಸುತ್ತಮುತ್ತಲಿನ ಜೈವಿಕ ವೈವಿಧ್ಯತೆಯನ್ನು ಪರಿಸರ ಕಾರ್ಯಕರ್ತರು ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ, ಇಲ್ಲಿನ ಸಸ್ಯವರ್ಗ ನೂರು ವರ್ಷ ಹಳೆಯ ಮರಗಳನ್ನು ಒಳಗೊಂಡಿರುವುದಿಲ್ಲ ಎಂಬುದು ನಿಜ. ಆದರೆ, ಅದು 180 ಜಾತಿಯ ಚಿಟ್ಟೆಗಳಿಗೆ ನೆಲೆಯಾಗಿದೆ. ಅವುಗಳಲ್ಲಿ ವಿಭಿನ್ನವಾದವೂ ಸೇರಿದೆ. ಸುಮಾರು 40 ಜಾತಿಯ ಚಿಟ್ಟೆಗಳ ಸಂತಾನೋತ್ಪತ್ತಿಗೆ ಈ ಪ್ರದೇಶ ಸೂಕ್ತವೆಂದು ಪರಿಗಣಿಸಲಾಗಿದೆ. ಹಲವು ರೀತಿಯ ಪಕ್ಷಿಗಳಿಗೂ ಆವಾಸಸ್ಥಾನ . ಅಂದಾಜಿನ ಪ್ರಕಾರ 77 ಪ್ರಭೇದಗಳು ಇಲ್ಲಿ ವಾಸಿಸುತ್ತಿವೆ. ಇದರೊಂದಿಗೆ ವರ್ಷಪೂರ್ತಿ ನಾನಾ ರೀತಿಯ ಪಕ್ಷಿಗಳು ಇಲ್ಲಿಗೆ ಬಂದು ಹೋಗುತ್ತವೆ. ವಿಶೇಷವಾದ ಜಾತಿಯ ಹಾವುಗಳು ಇಲ್ಲಿವೆ. ಹಾಗಾಗಿ ಈ ಜಾಗವನ್ನು ನೈಸರ್ಗಿಕ ವಸ್ತುಸಂಗ್ರಹಾಲಯವಾಗಿ ಸಂರಕ್ಷಿಸಬಹುದು. ದುಬೈನಂತಹ ಬರಡು ಪ್ರದೇಶದಲ್ಲಿ ಚಿಟ್ಟೆ, ಪಕ್ಷಿಗಳ ನೈಸರ್ಗಿಕ ವಸ್ತು ಸಂಗ್ರಹಾಲಯ (ಒಳಾವರಣ) ನಿರ್ಮಿಸಲು ಕೋಟ್ಯಂತರ ರೂ.ವ್ಯಯ ಮಾಡಿ ಜತನದಿಂದ ಕಾಪಾಡುತ್ತಾರೆ. ಆದರೆ, ನಮ್ಮಲ್ಲಿ ನೈಸರ್ಗಿಕವಾಗಿಯೇ ದೊರೆತಿರುವುದು ನಮ್ಮ ಅದೃಷ್ಟ. ಇದನ್ನು ಹಾಳುಮಾಡಬಾರದು. ಅಲ್ಲಿರುವ ಜೀವ ಸಂಕುಲವನ್ನೂ ಉಳಿಸಿ, ಇದನ್ನು ಇನ್ನಷ್ಟು ಸಮೃದ್ಧಗೊಳಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ ಪರಿಸರ ಬಳಗದ ಕಾರ್ಯಕರ್ತರು.
ಹಾಗೆಯೇ ಜಗತ್ತಿನ ಕೆಲವು ದೇಶಗಳಲ್ಲಿ ಒಬ್ಬ ಮನುಷ್ಯನಿಗೆ ಇರುವ ಮರಗಳ ಸಂಖ್ಯೆ ನೋಡೋಣ .ಅವು ಹೀಗಿವೆ : ಕೆನಡಾ: 8953, ಬ್ರೆಜಿಲ್: 1494, ಅಮೆರಿಕ: 716, ಚೈನಾ: 102 , ಭಾರತ : ಕೇವಲ 28 ಈ ಸಂಖ್ಯೆ ನಮಗೆಲ್ಲ ಗಾಬರಿ ಹುಟ್ಟಿಸಬೇಕಲ್ಲವೇ ?
ಮುಖ್ಯವಾಗಿ ಈ ಜಾಗದ ಸುತ್ತಲೂ ಜನವಸತಿ ಪ್ರದೇಶ ಇದೆ. ಮಕ್ಕಳು ಮತ್ತು ಹಿರಿಯ ನಾಗರಿಕರಿದ್ದಾರೆ. ಹೆಲಿಪ್ಯಾಡ್ ಸೃಷ್ಟಿಸಬಹುದಾದ ಶಬ್ದ ಮತ್ತು ವಾಯುಮಾಲಿನ್ಯಗಳು ಅವರ ಮೇಲೆ ಗಂಭೀರ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಉಂಟುಮಾಡುತ್ತವೆ. ದಸರಾ ಸಂದರ್ಭದಲ್ಲಿ ನಡೆಯುವ ಕೆಲವು ದಿನಗಳ ಹೆಲಿ ಟೂರಿಸಂನಿಂದ ಆಗುವ ಶಬ್ದ ಮಾಲಿನ್ಯ , ವಾಯು ಮಾಲಿನ್ಯದಿಂದ ತುಂಬಾ ಕಿರಿಕಿರಿ , ತೊಂದರೆ ಅನುಭವಿಸಿರುವ ಉದಾಹರಣೆಗಳಿವೆ.
ಪ್ರವಾಸೋದ್ಯಮ ಇಲಾಖೆ ಈಗಾಗಲೆ 624 ಮರಗಳನ್ನು ಗುರುತಿಸಿ ಕಡಿಯಲು ತಯಾರಾಗಿದ್ದಾರೆ. ಇಷ್ಟೊಂದು ತರಾತುರಿ ಏಕೆ ? ಸುತ್ತಲೂ ಜನ ವಸತಿ ಇರುವ ಜಾಗದಲ್ಲಿ ಇಷ್ಟೊಂದು ಸಂಖ್ಯೆಯ ಮರಗಳನ್ನು ಕಡಿಯುವುದರಿಂದ ಆಗುವ ಪರಿಣಾಮಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದು ಅಗತ್ಯವಿಲ್ಲವೇ ?
ಲಲಿತ್ ಮಹಲ್ ಜಾಗ ಬಿಟ್ಟು ಹೊರ ವಲಯದಲ್ಲಿ ಮಾಡಲು ಯಾವುದೇ ಗಂಭೀರ ಪ್ರಯತ್ನಗಳನ್ನು ಮಾಡದೆ ಏಕಾಏಕಿ ಲಲಿತ್ ಮಹಲ್ ಜಾಗವೇ ಸೂಕ್ತ ಎಂದು ಪ್ರವಾಸೋದ್ಯಮ ಇಲಾಖೆ ತೀರ್ಮಾನ ಮಾಡಲು ಕಾರಣಗಳೇನು ?
ಹೊರ ವಲಯದಲ್ಲಿ ನಾಲ್ಕಾರು ಎಕರೆ ಭೂಮಿಯನ್ನು ರೈತರಿಂದ ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಿಲು ಬಹಳ ಹಣವೇನು ಬೇಕಾಗುವುದಿಲ್ಲ.
ಜೀವವೈವಿಧ್ಯಕ್ಕೂ ಕುತ್ತುಂಟಾದ ಹಾಗೆ, ನಾಗರಿಕರಿಗೂ ತೊಂದರೆ ಆಗದ ಹಾಗೆ, ಹೆಲಿಟೂರಿಸಂ ಉದ್ದೇಶಕ್ಕೂ ಧಕ್ಕೆಯಾಗದ ಹಾಗೆ ಮೈಸೂರಿನ ಜನವಸತಿ ಪ್ರದೇಶದಿಂದ ತುಸುದೂರದಲ್ಲಿ ಎಲ್ಲಿಯಾದರೂ ಈ ಯೋಜನೆ ಮಾಡಬಹುದಲ್ಲವೇ?
ಮೇಲಿನ ಎಲ್ಲಾ ಕಾರಣಗಳನ್ನು ಪ್ರವಾಸೋದ್ಯಮ ಇಲಾಖೆ ತುಂಬಾ ಗಂಭೀರವಾಗಿ ಪರಿಗಣಿಸಿ ಹೆಲಿಪ್ಯಾಡ್ ನಿರ್ಮಿಸಲು ಪರ್ಯಾಯ ಮಾರ್ಗಗಳನ್ನು ಹುಡಕಲಿ ಎಂದು ಪರಿಸರ ಬಳಗ ಮನವಿ ಮಾಡಿದೆ.
Key words: No helipad –near- Lalit Mahal-outer zone –Mysore-Environmental -appeal.