1-2ನೇ ತರಗತಿ ಮಕ್ಕಳಿಗೆ ಹೋಮ್‌ ವರ್ಕ್‌ ನಿಷಿದ್ಧ

ಬೆಂಗಳೂರು:ಜೂನ್-1: 1 ಮತ್ತು 2ನೇ ತರಗತಿ ಮಕ್ಕಳಿಗೆ ಮನೆಗೆಲಸ (ಹೋಮ್‌ ವರ್ಕ್‌) ನೀಡುವುದನ್ನು ಶಿಕ್ಷಣ ಇಲಾಖೆ ರದ್ದುಪಡಿಸಿದೆ. ಹಾಗೆಯೇ, 1ರಿಂದ 5ನೇ ತರಗತಿವರೆಗೆ ಎನ್‌ಸಿಇಆರ್‌ಟಿ ನಿಗದಿಪಡಿಸಿರುವ ಪಠ್ಯಕ್ರಮ ಹೊರತುಪಡಿಸಿ ಇನ್ನಾವುದೇ ಪಠ್ಯಕ್ರಮ ಬೋಧಿಸಿದರೆ ಅಂತಹ ಶಾಲೆಗಳ ಮಾನ್ಯತೆ ರದ್ದುಪಡಿಸುವುದಾಗಿ ಇಲಾಖೆ ಎಚ್ಚರಿಸಿದೆ.

1 ಮತ್ತು 2ನೇ ತರಗತಿಯ ಮಕ್ಕಳಿಗೆ ಎನ್‌ಸಿಇಆರ್‌ಟಿ ನಿಗದಿಪಡಿಸಿರುವ ಭಾಷೆ ಮತ್ತು ಗಣಿತ ವಿಷಯ ಹಾಗೂ 3ರಿಂದ 5ನೇ ತರಗತಿ ಮಕ್ಕಳಿಗೆ ಭಾಷೆ, ಪರಿಸರ ವಿಜ್ಞಾನ ಮತ್ತು ಗಣಿತ ಹೊರತುಪಡಿಸಿ ಇನ್ನಾವುದೇ ಪಠ್ಯಕ್ರಮ ನಿಗದಿಪಡಿಸಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ (ಯೋಜನೆ) ಎಸ್‌.ಆರ್‌.ಎಸ್‌. ನಾಧನ್‌ ಹೊರಡಿಸಿರುವ ಪರಿಷ್ಕೃತ ಆದೇಶದಲ್ಲಿ ತಿಳಿಸಿದ್ದಾರೆ.

ಇನ್ನು, ಎನ್‌ಸಿಇಆರ್‌ಟಿ ಪಠ್ಯ ವಿಷಯ ಹೊರತುಪಡಿಸಿ ಇನ್ನಾವುದೇ ಪಠ್ಯಕ್ರಮ ನಿಗದಿಪಡಿಸಿ ಬೋಧಿಸುವ ಶಾಲೆಗಳ ಬಗ್ಗೆ ನಿಗಾ ವಹಿಸಲು ಹಾಗೂ ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲು ವಿಶೇಷ ತಂಡ ರಚಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉಳಿದಂತೆ, ಶಾಲಾ ಬ್ಯಾಗ್‌ ಹೊರೆ ಇಳಿಕೆ ಸಂಬಂಧ ಮೇ 3ರಂದು ಹೊರಡಿಸಿರುವ ಆದೇಶದಲ್ಲಿನ ಎಲ್ಲಾ ಅಂಶಗಳು ಯಥಾವತ್ತು ಮುಂದುವರಿಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೃಪೆ:ವಿಜಯಕರ್ನಾಟಕ

1-2ನೇ ತರಗತಿ ಮಕ್ಕಳಿಗೆ ಹೋಮ್‌ ವರ್ಕ್‌ ನಿಷಿದ್ಧ
no-homework-1-to-2-student