ಮೈಸೂರು,ಏಪ್ರಿಲ್,22,2023(www.justkannada.in): ವರುಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ-ಸಿದ್ಧರಾಮಯ್ಯ ನಡುವೆ ಯಾವುದೇ ರೀತಿಯ ಒಳ ಒಪ್ಪಂದವಾಗಿಲ್ಲ ಎಂದು ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ವರುಣ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ಧಾರೆ. ವರುಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ-ಸಿದ್ಧರಾಮಯ್ಯ ನಡುವೆ ಯಾವುದೇ ರೀತಿಯ ಒಳ ಒಪ್ಪಂದವಾಗಿಲ್ಲ. ಯಡಿಯೂರಪ್ಪ ನವರು ಎಂದೂ ಕೂಡ ಒಳ ಒಪ್ಪಂದದ ರಾಜಕೀಯ ಮಾಡಿಲ್ಲ.ವರುಣದಿಂದಲೇ ರಾಜ್ಯದ ಜನರು ನನ್ನನ್ನು ಗುರ್ತಿಸಿದರು. ಹೀಗಾಗಿ ವರುಣ ಮೇಲೆ ನನಗೆ ಅಪಾರ ಪ್ರೀತಿಯಿದೆ. ಆದರೆ ಯಡಿಯೂರಪ್ಪ ಅವರು ಸತತವಾಗಿ ಪ್ರತಿನಿಧಿಸುತ್ತಾ ಬಂದಿದ್ಧ ಶಿಕಾರಿಪುರದಲ್ಲಿ ಪ್ರತಿನಿಧಿಸಬೇಕಾಗಿದ್ಧರಿಂದ ವರುಣದಿಂದ ಸ್ಪರ್ಧಿಸಲಾಗಿಲ್ಲ. ನಾನು ಮತ್ತೊಮ್ಮೆ ವರುಣಕ್ಕೆ ಬಂದು ಸೋಮಣ್ಣನವರ ಪರ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಬಗ್ಗೆ ನಾನು ಕೀಳಾಗಿ ಟೀಕಿಸುವುದಿಲ್ಲ. ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಬಹುದಿತ್ತು. ಆದರೆ ಕಾಂಗ್ರೆಸ್ ಗೆ ಹೋಗಿದ್ದು ದೊಡ್ಡ ದುರಂತ. ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದ ಕಾಂಗ್ರೆಸ್ ಪಕ್ಷ ಸೇರಿದ್ದು ಬೇಸರ ತರಿಸಿದೆ. ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿತು. ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಸೋಲಲಿದ್ದು, ಅವರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿ. ವೈ ವಿಜಯೇಂದ್ರ ತಿಳಿಸಿದರು.
Key words: no internal -agreement –between- BS Yeddyurappa-Siddaramaiah – Varuna -BY Vijayendra.