ಬೆಂಗಳೂರು,ಜೂ,26,2020(www.justkannada.in): ಕೊರೋನಾ ಹಬ್ಬುತ್ತಿರುವ ಹಿನ್ನೆಲೆ ಲಾಕ್ ಡೌನ್ ವಿಚಾರ ಕುರಿತು ಸ್ಪಷ್ಟನೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್ ಎಂತಹ ಪರಿಸ್ಥಿತಿ ಬಂದರೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲ್ಲ ಎಂದು ತಿಳಿಸಿದ್ದಾರೆ.
ಕೊರೋನಾ ನಿಯಂತ್ರಣದ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದ ಬಳಿಕ ಕಂದಾಯ ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ. ಸಭೆಯಲ್ಲಿ ಸರ್ವಪಕ್ಷಗಳ ಶಾಸಕರು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸಹಕಾರ ನೀಡುವುದಾಗಿ ಎಲ್ಲ ಶಾಸಕರ ಭರವಸೆ ನೀಡಿದ್ದಾರೆ. ಶಾಸಕರು ಯಾವಾಗ ಬೇಕಾದರೂ ತಮ್ಮ ಕ್ಷೇತ್ರಗಳ ವ್ಯಾಪ್ತಿಯ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು. ಖಾಸಗಿ ಆಸ್ಪತ್ರೆಗಳ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ತರಬಹುದು. ಸರ್ವಪಕ್ಷ ಸಭೆಯಲ್ಲಿ ಶಾಸಕರು ನೀಡಿರುವ ಸಲಹೆಗಳನ್ನ ಪರಿಗಣಿಸಲಾಗುತ್ತದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ಬೇರೆ ನಗರಗಳಿಗೆ ಹೋಲಿಸಿದರೇ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಶೇ.95 ರಷ್ಟು ಶಾಸಕರು ಸೀಲ್ ಡೌನ್ ಮಾಡಿ ಲಾಕ್ ಡೌನ್ ಬೇಡ ಎಂದಿದ್ದಾರೆ. ಬಡವರಿಗೆ ಕಷ್ಟವಾಗುತ್ತೆ ಎಂದಿದ್ದಾರೆ. ಹೀಗಾಗಿ ಎಂತಹ ಪರಿಸ್ಥಿತಿಯಲ್ಲೂ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡಲ್ಲ. ಸೋಂಕಿತರು ಹೆಚ್ಚಾಗಿರುವ ಸ್ಥಳಗಳಲ್ಲಿ ಸೀಲ್ ಡೌನ್ ಮಾಡ್ತೀವಿ. ಸೀಲ್ ಡೌನ್ ವ್ಯಾಪ್ತಿ ಹೆಚ್ಚಿಸುವ ಬಗ್ಗೆ ಚಿಂತನೆ ಮಾಡುತ್ತೇವೆ. ಕೊರೋನಾ ಜತೆಗೆ ಅಭಿವೃದ್ಧಿ ಕಾರ್ಯಗಳು ಆಗಬೇಕು. ಕೊರೋನಾ ಜತೆ ನಮ್ಮ ಜೀವನ ನಡೆಯಬೇಕಾಗುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೇ ಕೊರೋನಾ ಸೋಂಕಿತರ ಪ್ರಮಾಣ ನಮ್ಮ ರಾಜ್ಯದಲ್ಲಿ ಕಡಿಮೆ. ಕೊರೊನಾ ಸೋಂಕಿತರು ಕಂಡು ಬಂದ ಏರಿಯಾ ಸೀಲ್ ಡೌನ್ ಮಾಡಲ್ಲ. ಅವರ ಮನೆಯನ್ನ ಮಾತ್ರ ಸೀಲ್ ಡೌನ್ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಬೇರೆ ರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್ ಮಾಡುತ್ತೇವೆ. ಬಿಬಿಎಂಪಿ ಪ್ರತಿವಾರ್ಡ್ ಗೆ ಕೊರೋನಾ ನಿಯಂತ್ರಿಸಲು 25 ಲಕ್ಷ ಮೀಸಲು ಇಡಲಾಗುತ್ತದೆ. ವಿಪಕ್ಷ ನಾಯಕರು ಸಲಹೆ ಸೂಚನೆ ಪರಿಗಣಿಸುತ್ತೇವೆ. ‘ಬೆಂಗಳೂರಿನಲ್ಲಿ ಪ್ರತಿದಿನ 4 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಇನ್ಮುಂದೆ ಬೆಂಗಳೂರಿನಲ್ಲಿ 7 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧ ಬಳಕೆಗೆ ಕೆಲ ಶಾಸಕರು ಸಲಹೆ ನೀಡಿದ್ದಾರೆ. ಕೇರಳಾದಲ್ಲೂ ಇದನ್ನ ಬಳಸಲಾಗುತ್ತಿದೆ. ಸೈಡ್ ಎಫೆಕ್ಟ್ ಇಲ್ಲದಿರುವುದರಿಂದ ಆಯುರ್ವೇದ ಔಷಧ ಬಳಸಬಹುದು ಎಂದು ಸಚಿವ ಆರ್ ಅಶೋಕ್ ಹೇಳಿದರು.
ಹಾಗೆಯೇ ಕೊರೋನಾ ಸೋಂಕಿತರನ್ನ ವಿಲನ್ ರೀತಿ ನೋಡಬೇಡಿ. ಕೊರೋನಾಗೆ ಯಾರೂ ಭಯಪಡುವ ಅಗತ್ಯವಿಲ್ಲ. ವೈದ್ಯರ ಸಲಹೆ ಚಿಕಿತ್ಸೆ ಪಡೆದರೇ ಗುಣಮುಖವಾಗುತ್ತದೆ ಎಂದು ಸಚಿವ ಆರ್.ಅಶೋಕ್ ಸಲಹೆ ನೀಡಿದರು.
Key words: no lock down – State-Minister –R.Ashok- clarified