ಮೈಸೂರು,ನವೆಂಬರ್,28,2020(www.justkannada.in): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಯಾವುದೇ ಆರೋಪಗಳಿಲ್ಲ, ರಾಜ್ಯ ಕಂಡ ದಕ್ಷ ಅಧಿಕಾರಿಗಳಲ್ಲಿ ಅವರು ಸಹ ಒಬ್ಬರು. ನಾವು ಕೇವಲ ಅವರನ್ನು ವಿರೋಧಕ್ಕಾಗಿ ವಿರೋಧ ಮಾಡುವುದು ಬೇಡ ಎಂದು ದೇವರಾಜ ಅರಸು ನಿಗಮದ ಅಧ್ಯಕ್ಷ ಕೌಟಿಲ್ಯ ರಘು ಸಲಹೆ ನೀಡಿದರು.
ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕರ ಆಕ್ರೋಶ ಕುರಿತು ಮಾತನಾಡಿರುವ ದೇವರಾಜ ಅರಸು ನಿಗಮದ ಅಧ್ಯಕ್ಷ ಕೌಟಿಲ್ಯ ರಘು, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಈಗಷ್ಟೇ ಕೆಲಸ ಪ್ರಾರಂಭ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಇಷ್ಟೊಂದು ಆತಂಕ, ದುಗುಡ, ಏಕೆ ಎಂದು ಅರ್ಥವಾಗುತ್ತಿಲ್ಲ. ವಿಶೇಷವಾಗಿ ಮೈಸೂರು ಜಿಲ್ಲೆ ಸಂಸ್ಕಾರ ಮತ್ತು ಸಂಸ್ಕೃತಿಯ ತವರೂರು, ಇಲ್ಲಿ ಪದ ಸಂಸ್ಕೃತಿಯ ಉಲ್ಲಂಘನೆ ಆಗದಿರಲಿ. ರೋಹಿಣಿ ಸಿಂಧೂರಿಯವರು ಜಿಲ್ಲಾಧಿಕಾರಿ ಎನ್ನುವುದಕ್ಕಿಂತ ಅವರು ಮೊದಲು ಒಬ್ಬ ಹೆಣ್ಣು ಮಗಳು ಎಂಬ ಗೌರವವಿರಲಿ, ಅಸಂಸ್ಕಾರ ಪದಗಳ ಮೇಲೆ ನಿಯಂತ್ರಣವಿರಲಿ, ಹಾಗೆಂದು ಅಧಿಕಾರಿಗಳನ್ನು ಸಮರ್ಥನೆ ಮಾಡಲು ನಾನು ಇಲ್ಲಿ ಕುಳಿತಿಲ್ಲ. ಶಿಷ್ಟಾಚಾರ ಉಲ್ಲಂಘನೆ ಹಾಗೂ ಭ್ರಷ್ಟಾಚಾರ ಕಂಡಾಗ ಜನಪ್ರತಿನಿಧಿಗಳು ಪ್ರಶ್ನೆ ಮಾಡುವುದು ಸಮಂಜಸ, ಆದರೆ ಅವರು ಜಿಲ್ಲಾಧಿಕಾರಿಯಾಗಿ ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ ಇನ್ನೂ ಕೆಲಸವನ್ನು ಪ್ರಾರಂಭ ಮಾಡಿಲ್ಲ. ಅವರು ಬಂದ ನಂತರ ಅಧಿಕಾರಿಗಳು ಕ್ಷಿಪ್ರಗತಿಯಲ್ಲಿ ಕೆಲಸ ಮಾಡಲು ಆರಂಭ ಮಾಡಿದ್ದಾರೆ. ಕೋವಿಡ್ ಸಹ ನಿಯಂತ್ರಣಕ್ಕೆ ಬಂದಿದೆ. ಬಹುಶಃ ಪ್ರಾಮಾಣಿಕ, ದಕ್ಷ, ಹಾಗೂ ಹೆಚ್ಚು ಕಾರ್ಯಕ್ಷಮತೆ, ತೋರುವವರ ಮೇಲೆಯೇ ಟೀಕೆಗಳು ಹೆಚ್ಚು ಬರುವಂತೆ ಕಾಣುತ್ತಿದೆ ಎಂದು ಹೇಳಿದರು.
ಮಹಾರಾಣಿ ವ್ಯಂಗ್ಯನುಡಿ ರಾಜಮನೆತನದ ಹಾಗೂ ಸ್ತ್ರೀ ಕುಲಕ್ಕೆ ಮಾಡಿರುವ ಬಹುದೊಡ್ಡ ಅವಮಾನ…
ಮಹಾರಾಣಿಯರು ಎಂಬ ಪದ ಬಳಕೆ ಮಾಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಮೈಸೂರು ಮಹಾರಾಣಿಯರ ಪಾತ್ರ ಎಂಥದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಮೈಸೂರು ರಾಜಮನೆತನ ಹಾಗೂ ಸಂಪದ್ಭರಿತವಾದ ಮೈಸೂರು ಉಳಿದಿದೆ ಎಂದರೆ ಅದು ಮಹಾರಾಣಿಯರ ಕೊಡುಗೆ. ಟಿಪ್ಪು ಕಾಲದ ರಾಜಮಾತೆಯರಾದ ಲಕ್ಷ್ಮಮ್ಮಣ್ಣಿ , ವಾಣಿವಿಲಾಸ ಸನ್ನಿಧಾರವರಿಂದು ಹಿಡಿದು ಈಗಿನ ರಾಜಮಾತೆ ಪ್ರಮೋದಾದೇವಿಯವರೆಗೂ ಅವರ ಸೇವೆ ನಾಡಿಗೆ ಅನನ್ಯವಾದದು. ಮಹಾರಾಣಿ ಎಂಬ ಪದ ಬಳಸಿ ವ್ಯಂಗ್ಯವಾಗಿ ನುಡಿದಿರುವುದು ರಾಜಮನೆತನದ ಹಾಗೂ ಸ್ತ್ರೀ ಕುಲಕ್ಕೆ ಮಾಡಿರುವ ಬಹುದೊಡ್ಡ ಅವಮಾನ ಎಂದು ಕೌಟಿಲ್ಯ ರಘು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು ಜನ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಬೊಬ್ಬೆ ಹೊಡೆಯುವ ನಾವು ಅದೇ ಜಿಲ್ಲಾಧಿಕಾರಿಗಳು “ಜನಸಂಪರ್ಕ” ಎಂಬ ಕಾರ್ಯಕ್ರಮ ಮಾಡಿದರೆ ಅದನ್ನು ಸರ್ವಾಧಿಕಾರ ಎನ್ನುವಿರಿ. ಅವರ ತಪ್ಪುಗಳಿದ್ದರೆ ಅದನ್ನು ತಿಳಿ ಹೇಳಬಹುದಿತ್ತು ಅಥವಾ ಸಲಹೆ-ಸೂಚನೆಗಳನ್ನು ನೀಡಬಹುದಿತ್ತು. ಇನ್ನೂ ಹೆಚ್ಚಾಗಿ ಶಿಷ್ಟಾಚಾರ ಉಲ್ಲಂಘನೆ ಆಗಿದ್ದರೆ ಅದನ್ನು ರಚನಾತ್ಮಕವಾಗಿ ಟೀಕೆ ಮಾಡಬಹುದಿತ್ತು ಅದನ್ನು ಯಾರೂ ತಪ್ಪು ಎಂದು ಹೇಳಲು ಸಾಧ್ಯವಿರಲಿಲ್ಲ ಎಂದರು.
ಈ ಹಿಂದೆ ಮೈಸೂರಿನ ಜಿಲ್ಲಾಧಿಕಾರಿಗಳಾದ ಶಿಖಾರವರಿಗೆ ಯಾವ ರೀತಿಯ ದೌರ್ಜನ್ಯ ಆಗಿತ್ತು ಎಂಬ ಇತಿಹಾಸವಿದೆ. ಹರ್ಷ ಗುಪ್ತ ಎಂಬ ಖಡಕ್ ಅಧಿಕಾರಿಯನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ತಿಳಿದಿದೆ. ಮೈಸೂರಿಗೆ ಕ್ರಿಯಾಶೀಲ ಹಾಗೂ ದಕ್ಷ ಅಧಿಕಾರಿಯ ಅವಶ್ಯಕತೆ ಇತ್ತು. ರೋಹಿಣಿ ಸಿಂಧೂರಿ ರವರು ಬೇರೆ ಬೇರೆ ಜಿಲ್ಲೆಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಹಾಗೂ ಸಾರ್ವಜನಿಕ ವಲಯದಲ್ಲಿ ಉತ್ತಮ ಜನಾಭಿಪ್ರಾಯವಿದೆ. ಅವರ ಮೇಲೆ ಯಾವುದೇ ಆರೋಪಗಳಿಲ್ಲ, ರಾಜ್ಯ ಕಂಡ ದಕ್ಷ ಅಧಿಕಾರಿಗಳಲ್ಲಿ ಅವರು ಸಹ ಒಬ್ಬರು. ನಾವು ಕೇವಲ ಅವರನ್ನು ವಿರೋಧಕ್ಕಾಗಿ ವಿರೋಧ ಮಾಡುವುದು ಬೇಡ ಎಂದು ಕೌಟಿಲ್ಯ ರಘು ತಿಳಿಸಿದರು.
Key words: No need – opposition-only –against- dc-rohini sinduri- Devaraja Raju Corporation – President -Kautilya Raghu