ಶಿವಮೊಗ್ಗ,ಜುಲೈ,29,2022(www.justkannada.in): ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಆರೋಪಿಗಳಿಗೆ ಬುದ್ಧಿ ಕಲಿಸುವ ತನಕ ನನಗೆ ಸಮಾಧಾನವಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಈ ಕುರಿತು ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, , ಹಿಂದಿನಿಂದ ಬಂದು ಚಾಕು ಹಾಕುವವರು ಹೇಡಿಗಳು. ಒಬ್ಬಂಟಿಯ ಮೇಲೆ ಹಲ್ಲೆ ಮಾಡುವವವರಿಗೆ ತಕ್ಕ ಪಾಠ ಕಲಿಸುತ್ತೇವೆ. ಕೊಲೆಗೆ ಕೊಲೆ ಮಾಡುವುದು ನಮ್ಮ ಸಿದ್ಧಾಂತವಲ್ಲ. ಹಿಂದೂ ಸಮಾಜ ಎಚ್ಚೆತ್ತುಕೊಂಡಿದೆ. ಸಮಾಜದಲ್ಲಿ ಜಾಗೃತಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಪ್ರಮುಖರು ಚರ್ಚಿಸಿ ಮತಾಂಧರಿಗೆ ಬುದ್ದಿ ಕಲಿಸಲು ಸರಿಯಾದ ಕಾನೂನು ತಿದ್ದುಪಡಿ ಮಾಡುತ್ತೇವೆ ಎಂದರು.
ಕೊಲೆ ಮಾಡಿದವರನ್ನು ಈಗಾಗಲೇ ಬಂಧಿಸಲಾಗಿದೆ. ನಿನ್ನೆಯ ಸುರತ್ಕಲ್ ಕೊಲೆಗೂ ಇದಕ್ಕೂ ಸಂಬಂಧವಿಲ್ಲ. ಸಹಜವಾಗಿ ಹಿಂದೂ ಸಮಾಜದಲ್ಲಿ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ಹಿರಿಯರು ಎಲ್ಲವನ್ನು ತ್ಯಾಗ ಮಾಡಿ ಪಕ್ಷ ಕಟ್ಟಿದ್ದಾರೆ. ರಾಜೀನಾಮೆ ಕೊಡುವುದು ಹೇಡಿಗಳ ಲಕ್ಷಣ. ರಾಜೀನಾಮೆ ಎಲ್ಲದಕ್ಕೂ ಉತ್ತರವಲ್ಲ, ಆಕ್ರೋಶದಿಂದ ಕೊಟ್ಟಿರಬಹುದು ಅದನ್ನು ವಾಪಸ್ ತೆಗೆದುಕೊಳ್ಳಿ ಎಂದು ವಿನಂತಿಸುತ್ತೇನೆ.
ಈ ಪಕ್ಷವನ್ನು ಯಾರು ಬಿಟ್ಟರೂ ಇನ್ನೊಬ್ಬರು ಸೇರ್ಪಡೆಗೊಳ್ಳುತ್ತಾರೆ. ರಾಜೀನಾಮೆ ಕೊಟ್ಟವರು ಕೂಡ ಬಿಜೆಪಿಯನ್ನು ಬಿಡುವುದಿಲ್ಲ. ಏಕೆಂದರೆ ಈ ಪಕ್ಷದ ಸಿದ್ಧಾಂತವೇ ದೇಶ ಕಟ್ಟುವುದಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದಿಟ್ಟ ಹೆಜ್ಜೆಯನ್ನು ಕರ್ನಾಟಕದಲ್ಲೂ ಅವಶ್ಯವಿದ್ದರೆ ಜಾರಿಗೆ ತರುತ್ತೇವೆ ಎಂದರು.
ಸಂಪುಟ ವಿಸ್ತರಣೆ ಹಾಗೂ ಗೃಹ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನೇನು ದೆಹಲಿಗೆ ಹೋಗಿ ಲಾಬಿ ಮಾಡಿಲ್ಲ. ಯಾವಾಗ ವಿಸ್ತರಣೆ ಎಂಬುದು ಗೊತ್ತಿಲ್ಲ. ದೇವರ ದಯೆ ಇದ್ದರೆ ಆಗುತ್ತದೆ ಎಂದರು.
Key words: no peace -until – Praveen Nettaru-murder – accused – KS Eshwarappa.