ಮೈಸೂರು,ಸೆಪ್ಟಂಬರ್,22,2023(www.justkannada.in): ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದ್ದು ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಉಂಟಾಗಿಲ್ಲ. ಮುಂದೆ ಯಾವುದೇ ಪರಿಸ್ಥಿತಿ ಬಂದ್ರೂ ನಿಭಾಯಿಸಲು ಸಿದ್ಧ ಎಂದು ಪಶುಸಂಗೋಪನಾ ಇಲಾಖೆ ಸಚಿವ ವೆಂಕಟೇಶ್ ತಿಳಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ ವೆಂಕಟೇಶ್, ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸೆಪ್ಟೆಂಬರ್ 26ರಂದು ಪಶುಸಖಿಯರಿಗೆ A-HELP ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟನೆ, NADCP ಯೋಜನೆಯಡಿ 4ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ, ಸರ್ಕಾರಿ ಉತ್ತನಹಳ್ಳಿ ಗ್ರಾಮದಲ್ಲಿ ನೂತನ ಪಶುಚಿಕಿತ್ಸಾಲಯ ಪ್ರಾರಂಭೋತ್ಸವ, ಈ ಎಲ್ಲಾ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮುಯ್ಯ ಉದ್ಘಾಟನೆ ಮಾಡಲಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣ ಹಿನ್ನೆಲೆ, ಹೊರ ರಾಜ್ಯಗಳಿಗೆ ಮೇವು ಸಾಗಾಟವನ್ನು ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಹೊರ ರಾಜ್ಯಗಳಿಗೆ ಮೇವು ಸಾಗಾಣಿಕೆ ಮಾಡದಂತೆ ನಿಷೇಧ ಹೇರುತ್ತೇವೆ. ಈ ಸಂಬಂಧ ಚಾಮರಾಜನಗರ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿಗೂ ಸೂಚಿಸಲಾಗುವುದು ಎಂದು ಸಚಿವ ಕೆ ವೆಂಕಟೇಶ್ ಹೇಳಿದರು.
ರಾಜ್ಯದಲ್ಲಿ ಕಾಲುಬಾಯಿ ಜ್ವರ ನಿಯಂತ್ರಣದಲ್ಲಿದೆ. ಆದರೆ ಚರ್ಮಗಂಟು ರೋಗ ಮತ್ತೆ ಕಾಣಿಸಿಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಲಸಿಕಾ ಕಾರ್ಯಕ್ರಮ ಸರಿಯಾಗಿ ನಡೆದಿಲ್ಲ. ಹಾಗಾಗಿ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಚರ್ಮಗಂಟು ರೋಗದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೆ ವೆಂಕಟೇಶ್ ತಿಳಿಸಿದರು.
ಕಾವೇರಿ ಜಲವಿವಾದ: ಸರ್ಕಾರ ಸಮರ್ಥವಾಗಿ ವಾದ ಮಂಡಿಸಿದೆ.
ಕಾವೇರಿ ಜಲವಿವಾದ ವಿಚಾರದಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡನೆ ಮಾಡಿಲ್ಲ ಎಂಬ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ವೆಂಕಟೇಶ್, ಸರ್ಕಾರ ಸಮರ್ಥವಾಗಿ ವಾದ ಮಂಡಿಸಿದೆ. ಆದರೆ ನೀರು ನಿರ್ವಹಣಾ ಪ್ರಾಧಿಕಾರ ನೀರು ಬಿಡುವಂತೆ ಆದೇಶಿಸಿದೆ. ಈ ವಿಚಾರದಲ್ಲಿ ನಮ್ಮಲ್ಲಿ ಒಗ್ಗಟ್ಟು ಇದೆ. ಆದರೂ ಕೆಲವರು ಈ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ, ಬಿಸಿ ಕಾಣಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಬಿಜೆಪಿ- ಜೆಡಿಎಸ್ ಮೈತ್ರಿ ಹೊಸ ವಿಚಾರವೇನಲ್ಲ. ಇದು ಮೊದಲೇ ಗೊತ್ತಿತ್ತು. ಈ ಮೊದಲೆಲ್ಲಾ ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಈಗ ಬಹಿರಂಗವಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಇಬ್ಬರಿಗೂ ಅನಿವಾರ್ಯ ಆಗಿತ್ತು. ಈ ಬಗ್ಗೆ ರಾಜ್ಯದ ಜನರು ತೀರ್ಮಾನ ಮಾಡುತ್ತಾರೆ ಎಂದರು.
ಡಿ.ಕೆ ಶಿವಕುಮಾರ್ ಗೂ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಳ ಜಗಳವಿಲ್ಲ. ಎಲ್ಲರೂ ಅವರವರ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ. ಡಿ.ಕೆ ಶಿವಕುಮಾರ್ ಗೂ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ ಎಂದರು.
Key words: no shortage -drinking water – Minister –Venkatesh-mysore