ಬೆಂಗಳೂರು, ಜೂನ್ 05, 2022 (www.justkannada.in): ರಾಜ್ಯಸಭೆ ಚುನಾವಣೆ ಸಂಬಂಧ ನಮ್ಮ ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಯಾರೊಂದಿಗೂ ಯಾವುದೇ ಸಂಧಾನ ಮಾತುಕತೆ ನಡೆಸಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಖರ್ಗೆ ಅವರು ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಒಂದು ದಿನ ದೆಹಲಿಗೆ ಹೋಗಿ ಬಂದರು. ಚಿಂತನ ಶಿಬಿರದಂತೆ ಅಲ್ಲಿಯೂ ಸಭೆ ಇತ್ತು. ಅದನ್ನು ಬಿಟ್ಟು ಅವರು ಯಾರೊಂದಿಗೂ ಸಮಾಲೋಚನೆ ನಡೆಸಿಲ್ಲ, ಸಂಧಾನ ಮಾತುಕತೆ ಯನ್ನೂ ನಡೆಸಿಲ್ಲ” ಎಂದು ತಿಳಿಸಿದ್ದಾರೆ.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಜಯರಾಂ ರಮೇಶ್ ಹಾಗೂ ಮನ್ಸೂರ್ ಅಲಿ ಖಾನ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಎರಡನೇ ಅಭ್ಯರ್ಥಿ ನಾಮಪತ್ರವನ್ನು ವಾಪಸ್ ಪಡೆಯುವಂತೆ ಜೆಡಿಎಸ್ ಮಲ್ಲಿಕಾರ್ಜುನ ಖರ್ಗೆ ಮೂಲಕ ಒತ್ತಡ ಹಾಕಿದೆ ಎಂಬುದು ಆರೋಪವಾಗಿದೆ. ಆದರೆ ಇದರಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.
ಎರಡನೇ ಅಭ್ಯರ್ಥಿಯನ್ನು ರಾಜ್ಯಸಭೆ ಚುನಾವಣೆ ಕಣಕ್ಕೆ ಇಳಿಸಿರುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ತೀರ್ಮಾನ. ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರ ಮುಖಂಡರು ಚರ್ಚೆ ಮಾಡಿ, ಪಕ್ಷದ ಹಿತದೃಷ್ಟಿಯಿಂದ ಎರಡನೇ ಅಭ್ಯರ್ಥಿ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿ ಕೊಟ್ಟಿದ್ದೆವು. ಅದನ್ನು ಹೈಕಮಾಂಡ್ ಅಂತಿಮಗೊಳಿಸಿದೆ ಎಂದು ಡಿಕೆಶಿ ತಿಳಿಸಿದ್ದಾರೆ.