ಬೆಂಗಳೂರು,ಫೆಬ್ರವರಿ,24,2023(www.justkannada.in): ನಾನು ಅರ್ಕಾವತಿ ಲೇಔಟ್ ನಲ್ಲಿ ಒಂದು ಗುಂಟೆ ಜಮೀನನ್ನು ಕೂಡ ಡಿ ನೋಟಿಫೈ ಮಾಡಿಲ್ಲ. ತಮ್ಮ ಅವಧಿಯ ಹಗರಣವನ್ನ ಮುಚ್ಚಿಕೊಳ್ಳಲು ಬಿಜೆಪಿಯವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಪ್ರಾಮಾಣಿಕರಾಗಿದ್ದರೆ ಎರಡೂ ಸರ್ಕಾರಗಳ ಮೇಲಿರುವ ಆರೋಪಗಳನ್ನು ನ್ಯಾಯಾಂಗ ತನಿಖೆಗೆ ಕೊಡಲಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸವಾಲು ಹಾಕಿದರು.
ಇಂದು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು.
ಬಸವರಾಜ ಬೊಮ್ಮಾಯಿ ಅವರು ಜವಾಬ್ದಾರಿಯುತ ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿತ್ತು ಎಂದು ಸುಳ್ಳು ಹೇಳಿರುವುದು ಖಂಡನೀಯ. ಬಿಜೆಪಿ ಸರ್ಕಾರ ಅಡ್ವೊಕೇಟ್ ಜನರಲ್ ಅವರ ಮೂಲಕ ಎಸಿಬಿ ರಚನೆ ಮಾಡಿರುವುದು ಸರಿಯಿದೆ, ಎಸಿಬಿಯು ಲೋಕಾಯುಕ್ತ ಕಾಯ್ದೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಕೋರ್ಟಿನಲ್ಲಿ ಹೇಳಿಸಿದ್ದಾರೆ. ಆದರೆ ಹೊರಗಡೆ ತಮ್ಮ ನಿಲುವಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಇಂಥಾ ದ್ವಂದ್ವ ಯಾಕೆ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ಎಸಿಬಿ ರಚನೆ ಆದ ನಂತರ ಲೋಕಾಯುಕ್ತವನ್ನು ಮುಚ್ಚಿರಲಿಲ್ಲ, ಲೋಕಾಯುಕ್ತ ರಚನೆಯಾದದ್ದು 1984ರ ಲೋಕಾಯುಕ್ತ ಕಾಯ್ದೆಯ ಪ್ರಕಾರ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿರುವಾಗ ಮಾಡಿದ್ದು, 14-3-2016ರಲ್ಲಿ ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ಅವರ ಮಗ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು, ಬೇರೆ ರಾಜ್ಯಗಳಲ್ಲಿ ಕೂಡ ಎಸಿಬಿ ರಚನೆ ಮಾಡಿದ್ದರಿಂದ ನಾವು ರಾಜ್ಯದಲ್ಲೂ ಪ್ರತ್ಯೇಕ ಸಂಸ್ಥೆಯನ್ನು ರಚನೆ ಮಾಡಿದ್ದೆವು. ನಾವು ಲೋಕಾಯುಕ್ತ ಮುಚ್ಚಲೂ ಇಲ್ಲ, ಲೋಕಾಯುಕ್ತರನ್ನು ತೆಗೆದುಹಾಕುವುದಾಗಲೀ ಮಾಡಿಲ್ಲ.
ಗುಜರಾತ್ ನಲ್ಲಿ ಎಸಿಬಿ ಇದೆ, ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ? ಅಲ್ಲಿ ಯಾಕೆ ಎಸಿಬಿಯನ್ನು ಇನ್ನೂ ಮುಚ್ಚಿಲ್ಲ? ಗೋವಾ, ಅಸ್ಸಾಂ, ಮಧ್ಯಪ್ರದೇಶಗಳಲ್ಲಿ ಯಾಕಿನ್ನು ಎಸಿಬಿ ಮುಚ್ಚಿಲ್ಲ? ದೇಶದ 16 ರಾಜ್ಯಗಳು ಲೋಕಾಯುಕ್ತದ ಜೊತೆಗೆ ಎಸಿಬಿಯನ್ನು ಹೊಂದಿದೆ. ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಳ್ಳುವವರು ಯಾಕೆ ಇನ್ನು ಲೋಕಪಾಲ್ ಅನ್ನು ಮಾಡಿಲ್ಲ? ಭ್ರಷ್ಟಾಚಾರದ ವ್ಯವಸ್ಥೆಗೆ ಹೆಚ್ಚು ಶಕ್ತಿ ಬಂದಿದ್ದರೆ ಅದು ಬಿಜೆಪಿ ಅವರಿಂದ. 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದ ಕೂಡಲೇ ಎಸಿಬಿ ರದ್ದು ಮಾಡುವುದಾಗಿ ಹೇಳಿದ್ದರು, ರದ್ದು ಮಾಡಿದ್ರಾ? ಕೋರ್ಟ್ ನವರು ಮಾಡಿದ್ದು. ಮೂರು ವರ್ಷಗಳ ಬಿಜೆಪಿ ಸರ್ಕಾರ ಎಸಿಬಿ ಮುಚ್ಚದೆ ಸುಮ್ಮನಿದ್ದದ್ದು ಯಾಕೆ? ಅಡ್ವೋಕೇಟ್ ಜನರಲ್ ಮೂಲಕ ಎಸಿಬಿ ರಚನೆಯನ್ನು ಸಮರ್ಥನೆ ಮಾಡಿಸಿರುವುದು ಯಾಕೆ? ಕೋರ್ಟಿನಲ್ಲಿ ಹಿಂದಿನ ಸರ್ಕಾರ ತಪ್ಪು ಮಾಡಿದೆ, ಎಸಿಬಿ ರದ್ದು ಮಾಡಿ ಎಂದು ಹೇಳಿಸಬೇಕಿತ್ತು. ಎಸಿಬಿ ಪರವಾಗಿರುವವರು ಬಿಜೆಪಿಯವರೇ. ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಎಸಿಬಿ ಇಟ್ಟುಕೊಂಡಿದ್ದಾರೆ, ಇಲ್ಲಿ ಮಾತ್ರ ಹರಿಶ್ಚಂದ್ರನ ಮೊಮ್ಮಕ್ಕಳ ಹಾಗೆ ಮಾತನಾಡುತ್ತಾರೆ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.
2003ರಲ್ಲಿ ಅರ್ಕಾವತಿ ಲೇಔಟ್ ಆದದ್ದು. ನಾವು ಅಧಿಕಾರಕ್ಕೆ ಬರುವ ಮೊದಲೇ ಇವೆಲ್ಲ ನಡೆದು ನೋಟಿಫಿಕೇಷನ್ ಆಗಿತ್ತು, 2750 ಎಕರೆಗೆ ನೋಟಿಫಿಕೇಷನ್ ಆಯ್ತು. ನಂತರ 1919 ಎಕರೆ 13 ಗುಂಟೆಗೆ ಅಂತಿಮವಾಗಿ ನೋಟಿಫಿಕೇಷನ್ ಆಯ್ತು. ಇದನ್ನು ಹೈಕೋರ್ಟ್ ನಲ್ಲಿ ಚಾಲೆಂಜ್ ಮಾಡಿದ್ರು. ಹೈಕೋರ್ಟ್ ನ ಏಕಸದಸ್ಯ ಪೀಠ ಈ ಮನವಿಯನ್ನು ತಿರಸ್ಕಾರ ಮಾಡಿತು. ನಂತರ ವಿಭಾಗೀಯ ಪೀಠಕ್ಕೆ ಹೋದರು, ಅಲ್ಲಿ ಬಿಡಿಎ ಅವರ ಮಾಡಿದ್ದ ನೋಟಿಫಿಕೇಷನ್ ಅನ್ನು ಎತ್ತಿಹಿಡಿಯಲಾಯಿತು. ಅದರ ವಿರುದ್ಧ ಸೊಂಡೂರು ರಾಮಸ್ವಾಮಿ ಮತ್ತು ಇನ್ನಿತರರು ಸುಪ್ರೀಂ ಕೋರ್ಟ್ ಗೆ ಹೋದರು, ಅಲ್ಲಿ ಕೂಡ ವಿಭಾಗೀಯ ಪೀಠ ಹೇಳಿದ್ದನ್ನು ಪುನರುಚ್ಚಾರ ಮಾಡಿ ಕೆಲವು ನಿರ್ದೇಶನಗಳನ್ನು ನೀಡಿದರು. ಇನ್ನು ಕೆಲವು ಅರ್ಜಿಗಳು ಇದ್ದಾವೆ, ನಮ್ಮ ಜಮೀನನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಭೂಮಾಲೀಕರು ಹೇಳುತ್ತಿದ್ದಾರೆ, ಇವುಗಳನ್ನು ಪರಿಶೀಲನೆ ಮಾಡಿ ಎಂದು ಕೆಲವು ಮಾನದಂಡಗಳನ್ನು ನಿಗದಿ ಮಾಡಿದರು. ಆ ಮಾನದಂಡಗಳ ಪ್ರಕಾರ 5 ಟೀಮ್ ಗಳನ್ನು ಮಾಡಿದ್ದರು, 5 ಟೀಮ್ ಗಳಿಗೆ ಕೆಎಎಸ್ ಅಧಿಕಾರಿಗಳನ್ನು ಮುಖ್ಯಸ್ಥರನ್ನಾಗಿ ಮಾಡಿದ್ರು. ಇದು ಆದದ್ದು ಯಡಿಯೂರಪ್ಪ ಅವರ ಕಾಲದಲ್ಲಿ. ಇದಾದ ನಂತರ ಈ ಟೀಮ್ ಗಳು ಪರೀಕ್ಷೆ ಮಾಡಿ ಕೆಲವೆಲ್ಲ ಭೂಮಿಗಳನ್ನು ಡಿಲೀಟ್ ಮಾಡಿ ಬಿಡಿಎ ಗೆ ಒಂದು ವರದಿ ನೀಡಿದ್ರು. ಬಿಡಿಎ ನವ್ರು ಈ ವರದಿಯಲ್ಲಿ ಪರೀಕ್ಷಿಸಿ ಅನುಮೋದನೆ ನೀಡಿದ್ರು. ಇವೆಲ್ಲ ನಡೆದದ್ದು ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ. ಈ ಫೈಲ್ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿರುವಾಗ ಅವರ ಬಳಿ ಹೋಗಿತ್ತು, ಚುನಾವಣಾ ನೀತಿಸಂಹಿತೆ ಇದೆ ಎಂದು ಫೈಲ್ ಅನ್ನು ಅವರು ವಾಪಸು ಕಳಿಸಿದ್ದರು.
ನಮ್ಮ ಸರ್ಕಾರ ಬಂದ ಮೇಲೆ ಹೈಕೋರ್ಟ್ ನಲ್ಲಿ ಒಂದು ಮನವಿ ಇತ್ತು, ಇದರಿಂದಾಗಿ ಸ್ವಲ್ಪ ಒತ್ತಡ ಇತ್ತು. ನಾವು ಅದನ್ನೆಲ್ಲ ನೋಡಿ, ಸುಪ್ರೀಂ ಕೋರ್ಟ್ ನ ಮಾನದಂಡಗಳ ಪ್ರಕಾರ ಮಾಡಿದ್ದಾರೆ ಎಂದು ನಮ್ಮ ಅಧಿಕಾರಿಗಳು ಹೇಳಿದ ಮೇಲೆ ನಾನು ಅನುಮೋದನೆ ಕೊಟ್ಟಿದ್ದೆ. ಇದು ರೀಡೂ ಅಲ್ಲ, ರಿ ಮೊಡಿಫೈ ಸ್ಕೀಮ್ ಎಂದು. ಇದಾದ ಮೇಲೆ ಜಗದೀಶ್ ಶೆಟ್ಟರ್ ಅವರು ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸದನದಲ್ಲಿ ಪ್ರಸ್ತಾಪ ಮಾಡಿದ್ರು, ನಾನು ಕೂಡಲೇ ಒಂದು ನ್ಯಾಯಾಂಗ ಸಮಿತಿ ರಚನೆ ಮಾಡಿ ತನಿಖೆ ಮಾಡಿಸೋಣ ಎಂದು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಕೆಂಪಣ್ಣನವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದೆ. ಅವರು 2 ವರ್ಷಗಳ ಕಾಲ ವಿಚಾರಣೆ ಮಾಡಿ ವರದಿ ನೀಡಿದ್ದಾರೆ. ಈ ವರದಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಯಾವುದೇ ಭೂಮಿಯನ್ನು ಡಿನೋಟಿಫೈ ಮಾಡಿಲ್ಲ ಎಂದಿದ್ದಾರೆ.
ಇದು ಕುಮಾರಸ್ವಾಮಿ, ರಾಜ್ಯಪಾಲರು, ಯಡಿಯೂರಪ್ಪ, ಸದಾನಂದ ಗೌಡರು, ಜಗದೀಶ್ ಶೆಟ್ಟರ್ ಅವರ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಕೊನೆಗೆ ನಮ್ಮ ಬಳಿ ಬಂದಿತ್ತು. ಜಗದೀಶ್ ಶೆಟ್ಟರ್ ಕಾಲದಲ್ಲಿ ಡಿನೋಟಿಫೈ ಆಗಿಲ್ಲ, ಕುಮಾರಸ್ವಾಮಿ, ಯಡಿಯೂರಪ್ಪನವರ ಕಾಲದಲ್ಲಿ ಡಿನೋಟಿಫೈ ಆಗಿದೆ, ರಾಜ್ಯಪಾಲರ ಕಾಲದಲ್ಲೂ ಡಿನೋಟಿಫೈ ಆಗಿದೆ ಎಂದು ಹೇಳಿದ್ದಾರೆ. ಈ ವರದಿ ಬಂದ ಮೇಲೆ ವಿಜಯಾಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಮಾಡಿದ್ದೆ, ಮಹೇಂದ್ರ ಜೈನ್ ಎಂಬ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದವರು, ರಮಣ ರೆಡ್ಡಿ ಅವರು ಹೀಗೆ ಸದಸ್ಯರಿದ್ದರು. ಈ ಸಮಿತಿಗೆ ನ್ಯಾ. ಕೆಂಪಣ್ಣನವರ ಸಮಿತಿಯ ವರದಿ ಆಧರಿಸಿ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿ ಎಂದು ಕೊಟ್ಟಿದ್ದೆವು, ಅವರು ವರದಿ ನೀಡುವ ವೇಳೆಗೆ ಚುನಾವಣಾ ನೀತಿ ಸಂಹಿತೆ ಬಂದುಬಿಡ್ತು.
ಭೂಮಿ ಕಳೆದುಕೊಂಡವರು ಮತ್ತೆ ಹೈಕೋರ್ಟ್ ಗೆ ಹೋದರು. 27-9-2021ರಲ್ಲಿ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿದ್ದರು, ಹೈಕೋರ್ಟ್ ನವರು ಮತ್ತೆ ಒಂದು ಸಮಿತಿ ರಚನೆ ಮಾಡಿದರು. ಕೇಶವ ನಾರಾಯಣ ಎಂಬ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಮಾಡಿದರು. ಸಂದೀಪ್ ಧವೆ ನಿವೃತ್ತ ಐಎಎಸ್ ಅಧಿಕಾರಿ, ಮೇಘರಿಕ್ ಎಂಬ ನಿವೃತ್ತ ಐಪಿಎಸ್ ಅಧಿಕಾರಿಗಳು ಈ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ. ಇದು ಇನ್ನು ಪೂರ್ಣವಾಗಿಲ್ಲ.
ಇದೇ ವೇಳೆ ಒಬ್ಬರು ಹೈಕೋರ್ಟ್ ನಲ್ಲಿ ಪಿಎಎಲ್ ಹಾಕಿದ್ರು, ನ್ಯಾ. ಕೆಂಪಣ್ಣನವರ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕು ಎಂದು ಮನವಿ ಮಾಡಿದ್ದರು. ಈಗಾಗಲೇ ಕೇಶವ ನಾರಾಯಣ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಅದು ಕಾರ್ಯನಿರ್ವಹಿಸುತ್ತಾ ಇರುವುದರಿಂದ ಈ ವರದಿಯನ್ನು ಪರಿಗಣಿಸಲು ಬರಲ್ಲ ಎಂದು ಅವರ ಪಿಎಎಲ್ ಅನ್ನು ಹೈಕೋರ್ಟ್ ತಿರಸ್ಕಾರ ಮಾಡಿತು ಎಂದು ಸಿದ್ಧರಾಮಯ್ಯ ವಿವರಿಸಿದರು.
ಕೇಶವ ನಾರಾಯಣ ಅಧ್ಯಕ್ಷತೆಯ ಸಮಿತಿಯು ಹಿಂದೆ ಕೆಂಪಣ್ಣನವರ ಸಮಿತಿ ನೀಡಿದ್ದ ವರದಿಯನ್ನು ಸೀಜ್ ಮಾಡಿದೆ. ಈಗ ಈ ಸಮಿತಿ ವರದಿ ನೀಡಬೇಕು. ಹೀಗಿರುವಾಗ ಮುಖ್ಯಮಂತ್ರಿ ಸ್ಥಾನದಲ್ಲಿರುವ ಬೊಮ್ಮಾಯಿ ಅವರು ಜವಾಬ್ದಾರಿಯಿಂದ ಉತ್ತರ ನೀಡುವುದು ಬಿಟ್ಟು ಸಿದ್ದರಾಮಯ್ಯ ನವರ ಕಾಲದಲ್ಲಿ 852 ಎಕರೆ ಡಿನೋಟಿಫೈ ಆಗಿದೆ ಎಂದು ಸದನಕ್ಕೆ ಸುಳ್ಳು ಹೇಳುವುದು ಸರಿಯಲ್ಲ. ನ್ಯಾ. ಕೆಂಪಣ್ಣನವರ ಸಮಿತಿ ಸಿದ್ದರಾಮಯ್ಯನವರ ಕಾಲದಲ್ಲಿ ಒಂದೇ ಒಂದು ಎಕರೆ ಜಾಗ ಕೂಡ ಡಿನೋಟಿಫೈ ಆಗಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಈ ಸರ್ಕಾರ ಬಂದು 4 ವರ್ಷ ಆಯಿತು, ಈ ವೇಳೆ ವರದಿಯನ್ನು ಸದನದ ಮುಂದಿಟ್ಟು ಕ್ರಮ ಕೈಗೊಳ್ಳಬೇಕಿತ್ತು. ನಾವು ಯಾವಾಗ ಈ ಸರ್ಕಾರದ ಮೇಲೆ 40% ಕಮಿಷನ್ ಆರೋಪವನ್ನು ಆಂದೋಲನದ ರೀತಿ ಮಾಡಿ, ಇವರ ಹಗರಣಗಳನ್ನು ಹೊರ ತರಲು ಶುರು ಮಾಡಿದೆವೋ ತಮ್ಮ ಮೇಲೆ ಇರುವ ಆರೋಪ ಮಾಡಿ ಮುಚ್ಚಿಕೊಳ್ಳಲು ನಮ್ಮನ್ನು ದೂರುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
ನಾನು ಈ ಹಿಂದೆಯೇ ಬಿಜೆಪಿಯವರಿಗೆ ಹೇಳಿದ್ದೇನೆ, ನೀವು ನಿಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಂದ ತಪ್ಪಿಸಿಕೊಳ್ಳಲು ನಮ್ಮ ವಿರುದ್ಧ ಈಗ ಆರೋಪ ಮಾಡುತ್ತಿದ್ದೀರಿ, ನಾವು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷವಾಗಿದ್ದ ನೀವು ಯಾಕೆ ಅಂದು ಈ ಎಲ್ಲಾ ವಿಚಾರಗಳನ್ನು ಮಾತನಾಡಿರಲಿಲ್ಲ? ಎಂದಿದ್ದೆ.
ಬಿಟ್ ಕಾಯಿನ್ ಹಗರಣ ಮುಚ್ಚಿಹಾಕಿದ್ರು, ಪಿಎಸ್‌ಐ ನೇಮಕಾತಿ ಹಗರಣ ಮುಚ್ಚಿ ಹಾಕಿದ್ರು, 40% ಕಮಿಷನ್ ಹಗರಣ ಮುಚ್ಚಿಹಾಕಲು ಹೊರಟಿದ್ದಾರೆ, ಕೊರೊನಾ ಕಾಲದಲ್ಲಿ ವೈದ್ಯಕೀಯ ಉಪರಕಣಗಳ ಖರೀದಿಯಲ್ಲಿ ನಡೆದಿದ್ದ ಅವ್ಯವಹಾರವನ್ನು ಮುಚ್ಚಿ ಹಾಕಲಾಗಿದೆ. ಹೀಗೆ ಅನೇಕ ಹಗರಣಗಳನ್ನು ಮುಚ್ಚಿಹಾಕಲಾಗಿದೆ. ನಾನು ಮುಖ್ಯಮಂತ್ರಿಯಾಗಿರುವಾಗ ನಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತನಿಖೆಗೆ ವಹಿಸಿದ್ದೆ. 8 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆ, ಬಹುತೇಕ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಬಂದಿದೆ. ಈ ಸರ್ಕಾರ ಒಂದು ಪ್ರಕರಣವನ್ನಾದ್ರೂ ತನಿಖೆಗೆ ನೀಡಿದ್ಯಾ? ಈ ಪಿಎಎಸ್ ಐ ನೇಮಕಾತಿ ಹಗರಣದಲ್ಲಿ ನಿತ್ಯ ಪತ್ರಿಕೆಗಳಲ್ಲಿ ವರದಿ ಬರಲು ಆರಂಭವಾಗಿ, ತನಿಖೆ ಅದಾಗಿ ಅದೇ ಆರಂಭವಾಯಿತು, ಸರ್ಕಾರ ತನಿಖೆ ಮಾಡಿಸಿದ್ದಲ್ಲ. ಡಿ.ಸಿ ಮತ್ತು ಐ.ಜಿ.ಪಿ ಅಧಿಕಾರಿಗಳ ಬಂಧನವಾಯಿತು. ಈ ಸರ್ಕಾರ ಎಲ್ಲದಕ್ಕೂ ದಾಖಲಾತಿ ಕೇಳುತ್ತೆ. ಅದಕ್ಕೆ ನಾನು ಹೇಳುವುದು, ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಿ ನಮ್ಮ ಸರ್ಕಾರದ ವಿರುದ್ಧ ಹಾಗೂ ಈ ಬಿಜೆಪಿ ಸರ್ಕಾರದ ವಿರುದ್ಧ ಬಂದಿರುವ ಎಲ್ಲಾ ಆರೋಪಗಳ ತನಿಖೆಯನ್ನು ಮಾಡಿಸಲಿ. ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಶಿಕ್ಷೆಯಾಗಲಿ. ಇದಕ್ಕೆ ಬೊಮ್ಮಾಯಿ ಮಾತನಾಡಲ್ಲ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ನಾನು ಸದನದಲ್ಲಿ ಇಲ್ಲದಿರುವಾಗ ವೀರಾವೇಶದಿಂದ ಕೂಗಾಡಿದ್ದು ನೋಡಿದ್ರೆ ಏನೋ ದೊಡ್ಡ ಹಗರಣ ನಡೆದಿದೆ, ಎಕರೆಗೆ 10 ಕೋಟಿ ಯಂತೆ 8000 ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನುವ ರೀತಿಯಲ್ಲಿ ಜನರ ಮುಂದೆ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನ ಪಟ್ಟಿದ್ದಾರೆ. 59 ಪ್ರಕರಣಗಳು ಎಸಿಬಿ ಗೆ ಹೋಗಿದ್ದವು, ಅವೆಲ್ಲವಕ್ಕೂ ಬಿ ರಿಪೋರ್ಟ್ ಬಂದಿದೆ. ಇದರ ವಿರುದ್ಧ ಮೇಲ್ಮನವಿ ಹಾಕಿ ನೀವು. ಮೇಲ್ಮನವಿ ಹಾಕಬಾರದು ಎಂದು ಕಾನೂನಿನಲ್ಲಿ ಇದೆಯಾ? ಎಫ್,ಐ, ಆರ್ ಮಾಡೇ ಇಲ್ಲ. ಈ ಬಿಜೆಪಿಯವರದ್ದು ಬರೀ ಸುಳ್ಳು, ಒಂದೇ ಒಂದು ಕೇಸ್ ನಲ್ಲಿ ಎಫ್,ಐ, ಆರ್ ಆಗಿದ್ದು. ಉಳಿದವು ಎಫ್,ಐ,ಆರ್ ಆಗದೆಯೇ ತಿರಸ್ಕೃತಗೊಂಡಿದ್ದವು. ನಿಮಗೆ ಎಸಿಬಿ ಆದೇಶದ ಬಗ್ಗೆ ತಕರಾರು ಇದ್ದರೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬೇಕಿತ್ತು, ಅದನ್ನು ಮಾಡದೆ ಈಗ ಎಲ್ಲರನ್ನು ಜೈಲಿಗೆ ಕಳಿಸ್ತೀವಿ ಎಂದು ಬಡಾಯಿ ಬಿಡುವುದನ್ನು ಜನ ನಂಬಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.
ಕೆಂಪಣ್ಣ ಆಯೋಗದ ವರದಿಯನ್ನು ಸದನದ ಮುಂದೆ ಮಂಡಿಸದೆ, ತಮಗೆ ಅನುಕೂಲವಾಗುವ ಯಾವುದೋ ಒಂದೆರಡು ಸಾಲುಗಳನ್ನು ಓದುವುದು ಇದೆಯಲ್ಲ ಅದನ್ನು ನಾವು ಒಪ್ಪುವುದಿಲ್ಲ. ಬಸವರಾಜ ಬೊಮ್ಮಾಯಿ ಅವರು ಪ್ರಾಮಾಣಿಕರಾಗಿದ್ದರೆ ಎರಡೂ ಸರ್ಕಾರಗಳ ಮೇಲಿರುವ ಆರೋಪಗಳನ್ನು ನ್ಯಾಯಾಂಗ ತನಿಖೆಗೆ ಕೊಡಲಿ. ಈ ಸರ್ಕಾರ ಒಂದು ಪ್ರಕರಣವನ್ನಾದ್ರು ತನಿಖೆ ಮಾಡಿದಿದೆಯಾ?
ನಾನು ಅರ್ಕಾವತಿ ಲೇಔಟ್ ನಲ್ಲಿ ಒಂದು ಗುಂಟೆ ಜಮೀನನ್ನು ಕೂಡ ಡಿ ನೋಟಿಫೈ ಮಾಡಿಲ್ಲ, ಇದನ್ನೇ ಕೆಂಪಣ್ಣನವರ ಸಮಿತಿ ಹೇಳಿದೆ. ಬೊಮ್ಮಾಯಿ ಹೇಳುತ್ತಿರುವುದು ಶುದ್ಧ ಸುಳ್ಳು. ನೋಡೋಣ ಕೇಶವ ನಾರಾಯಣ ಅವರ ಸಮಿತಿಯ ವರದಿ ಬರಲಿ. ಟೇಬಲ್ ಮಾಡದೆ ಸದನದಲ್ಲಿ ಈ ವಿಚಾರ ಮಾತಾಡಿದ್ದಾರೆ, ಆ ಮೂಲಕ ಬಿಜೆಪಿ ಪಕ್ಷ, ಮುಖ್ಯಮಂತ್ರಿಗಳು ಸದನಕ್ಕೆ ಅಗೌರವ ತೋರಿದ್ದಾರೆ. ಈ ರೀತಿ ಜನರಿಗೆ ತಪ್ಪು ಮಾಹಿತಿ ಕೊಡುವ ಪ್ರಯತ್ನ ಮಾಡಬಾರದು. ಈಗ ಸುಳ್ಳು ಹೇಳಿಕೆಗಳು ಸದನದ ಪುಸ್ತಕದಲ್ಲಿ ದಾಖಲಾಗಿ ಆಗಿದೆ, ಅದನ್ನು ತೆಗೆಸಲು ಈಗ ಅವಕಾಶ ಇಲ್ಲ, ಇಂದು ಸದನವನ್ನು ಮುಕ್ತಾಯ ಮಾಡುತ್ತಾರೆ. ಮುಂದೆ ಅವಕಾಶ ಸಿಕ್ಕಾಗ ಈ ಕೆಲಸ ಮಾಡುತ್ತೇವೆ. ರೀ ಡೂ ಎಂಬ ಪದ ಬಳಸಿದ್ದು ನಾವಲ್ಲ, ಹೈಕೋರ್ಟ್ ಹೇಳಿದ್ದು ಎಂದು ಸಿದ್ಧರಾಮಯ್ಯ ತಿಳಿಸಿದರು.
Key words: not de-notified – land-BJP -trying – scam-former- Siddaramaiah