ಬೆಂಗಳೂರು,ನವೆಂಬರ್,4,2021(www.justkannada.in): ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮೂಲಕ ಕೇಂದ್ರ ಸರ್ಕಾರ ಜನರಿಗೆ ದೀಪಾವಳಿ ಗಿಫ್ಟ್ ನೀಡಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಟಾಂಗ್ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇದು ಜನರಿಗೆ ಕೊಟ್ಟ ಗಿಫ್ಟ್ ಅಲ್ಲ. ಇಷ್ಟು ದಿನ ಪಿಕ್ ಪಾಕೆಟ್ ಮಾಡ್ತಿದ್ರು, ಪಿಕ್ ಪಾಕೆಟ್ ನಿಲ್ಸಿದಾರೆ ಅಷ್ಟೇ. ಪಿಕ್ ಪಾಕೆಟ್ ಗೆ ಬ್ರೇಕ್ ಬಿತ್ತು ಅಷ್ಟೇ ಎಂದು ಟೀಕಿಸಿದ್ದಾರೆ.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಗ್ಯಾಸ್ ಬೆಲೆ ಕಡಿಮೆ ಆಗಿಲ್ಲ. ಗ್ಯಾಸ್ ಬೆಲೆ ಕಡಿಮೆ ಆಗುವವರೆಗೂ ಕೂಡ ಹೋರಾಟ ಮುಂದುವರಿಯಬೇಕು. ಆಹಾರ ಪದಾರ್ಥ, ಸಿಮೆಂಟ್, ಕಬ್ಬಿಣ ಎಲ್ಲ ಬೆಲೆಯೂ ಕಡಿಮೆ ಆಗಬೇಕು. ನವೆಂಬರ್ 14 ರಿಂದ ಬೆಲೆ ಏರಿಕೆ ವಿರುದ್ದ ಹೋರಾಟ ಮಾಡುವ ಕೆಲಸ ಮಾಡ್ತೇವೆ. ಉದ್ಯೋಗ ಸೃಷ್ಟಿ ಮಾಡಬೇಕು. ಯುವಕರು, ಶ್ರೀಸಾಮಾನ್ಯ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡ್ತೇವೆ. ಸರ್ಕಾರದ ತೀರ್ಮಾನ ಸ್ವಾಗತ ಮಾಡ್ತೇವೆ, ಆದ್ರೆ ಇದೇ ಮಾನದಂಡ ಸಿಮೆಂಟ್, ಕಬ್ಬಿಣ, ಗ್ಯಾಸ್ನಲ್ಲೂ ಆಗಬೇಕು. ಸರ್ಕಾರದವರು ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿದ್ದಾರೆ. ಆ ಹಣ ಜನರಿಗೆ ವಾಪಸ್ ನೀಡುವುದಕ್ಕೆ ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಎರಡೂ ಸೇರಿ ಈ ರೀತಿ ಪೆಟ್ರೋಲ್ ಡೀಸೆಲ್ ಕಡಿಮೆ ಆಗಿರುವುದು ಉಪಚುನಾವಣೆಯ ಫಲಿತಾಂಶದ ಪರಿಣಾಮ ಆಗಿದೆ. ರಾಜ್ಯದ ಉದ್ದಗಲಕ್ಕೂ ಚುನಾವಣೆ ನಡೆದಿಲ್ಲ, ಕೇವಲ ಉಪಚುನಾವಣೆಯಲ್ಲಿಯೇ ಜನ ಸಂದೇಶ ಕೊಟ್ಟಿದ್ದಾರೆ. ಇದು ಕೇಂದ್ರಕ್ಕೆ ಎಚ್ಚರಿಕೆ ಗಂಟೆ ಆಗಬೇಕು. ನಾವು ಹೇಳಿದ್ರೆ ಕೇಳಲ್ಲ, ಮತದಾರರೇ ಹಸ್ತದ ಮೂಲಕ ಉತ್ತರ ಕೊಡಬೇಕು ಅಂತ ಹೇಳಿದ್ದೆವು. ಪ್ರಬುದ್ದ ಮತದಾರರೇ ಸರ್ಕಾರಕ್ಕೆ ಮಾಲೀಕರು ಎನ್ನುವುದನ್ನ ತೋರಿಸಿದ್ದಾರೆ. ಮತದಾರರಿಗೆ ಫಲ ಸಿಕ್ಕಿದೆ ಎಂದರು.
Key words: not – Diwali gift – Break –pick pocket-kpcc-president-DK Sivakumar