ಗೋಕಾಕ,ಅಕ್ಟೋಬರ್,27,2020(www.justkannada.in): ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ದಿ. ಸುರೇಶ್ ಅಂಗಡಿ ಅವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಿದರೇ ಅವರಿಗೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಮುಖಂಡ ಪ್ರಕಾಶ್ ಹುಕ್ಕೇರಿ ಹೇಳಿರುವ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಒಂದು ಪಕ್ಷದಲ್ಲಿ ಇದ್ದುಕೊಂಡು ಮತ್ತೊಂದು ಪಕ್ಷಕ್ಕೆ ಸಪೋರ್ಟ್ ಮಾಡುವುದು ಸರಿಯಲ್ಲ. ಹಿರಿಯ ಮುಖಂಡರಾಗಿರುವ ಪ್ರಕಾಶ್ ಹುಕ್ಕೇರಿ ಅವರು, ಜಿಲ್ಲಾ ಪಂಚಾಯಿತಿಯಿಂದ ಹಿಡಿದು ಎಲ್ಲ ಹುದ್ದೆಗಳನ್ನು ಅನುಭವಿಸಿದ್ದಾರೆ. ಇನ್ನೊಂದು ಪಕ್ಷಕ್ಕೆ ಸಪೋರ್ಟ್ ಮಾಡುವುದಾಗಿ ಹೇಳಿರುವುದು ನಿಜಕ್ಕೂ ಆಶ್ಚರ್ಯವಾಗಿದೆ. ಹೈಕಮಾಂಡ್ ಕೂಡ ಇದನ್ನು ಗಮನಿಸಿರುತ್ತದೆ. ನಿರ್ಧಾರ ತೆಗೆದುಕೊಳ್ಳುವುರು ಅವರಿಗೆ ಬಿಟ್ಟದ್ದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಪ್ರಕಾಶ ಹುಕ್ಕೇರಿ ಬೆಳಗಾವಿ ಲೋಕಸಭಾ ಟಿಕೆಟ್ ಆಕಾಂಕ್ಷಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಬೇಕಾದಷ್ಟು ಅಭ್ಯರ್ಥಿಗಳಿದ್ದಾರೆ, ಪ್ರಕಾಶ್ ಹುಕ್ಕೇರಿಯವರು ಮುಂದಿನ ಬಾರಿ ಬೇಕಿದ್ದರೆ ಚಿಕ್ಕೋಡಿ ಕ್ಷೇತ್ರದಲ್ಲಿಯೇ ಸ್ಪರ್ಧಿಸಲಿ, ಚಿಕ್ಕೋಡಿ ಕ್ಷೇತ್ರ ಅವರಿಗೆ ಯಾವಾಗಲೂ ಓಪನ್ ಇದೆ. ಅಲ್ಲಿ ಹಿಡಿತ ಸಾಧಿಸಲು ಇನ್ನು ಮೂರು ವರ್ಷ ಸಮಯವಿದೆ. ಅದಷ್ಟರಲ್ಲಿ ಗಟ್ಟಿ ಮಾಡಿಕೊಂಡು ಸ್ಪರ್ಧಿಸಲಿ ಎಂದರು.
ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ…
ಬೆಳಗಾವಿ ಲೋಕಸಭಾ ಟಿಕೆಟ್ ಹಂಚಿಕೆ ವಿಚಾರವಾಗಿ ಇನ್ನು ಸಭೆ ನಡೆಸಬೇಕಿದೆ. ಶಿರಾ, ಆರ್ ಆರ್ ನಗರ ಬೈ ಎಲೆಕ್ಷನ್ ಬಳಿಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಸಿಸಿ ಬ್ಯಾಂಕ್ ಸ್ಥಳೀಯ ಚುನಾವಣೆ. ಅಭ್ಯರ್ಥಿಗಳು ಆಯ್ಕೆಯಾದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಬಂದಾಗ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿದೆ ಎಂದರು.
ಲಖನ್ ಜಾರಕಿಹೊಳಿ ಸ್ಪರ್ಧೆ ಉಹಾಪೋಹಗಳಿಗೆ ಸ್ಪಷ್ಟನೆ…
ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಉದ್ಯಮಿ ಲಖನ್ ಜಾರಕಿಹೊಳಿ ಸ್ಪರ್ಧಿಸಲಿದ್ದಾರೆ ಎಂಬ ಉಹಾಪೋಹಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಲಖನ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲ. ಸ್ಪರ್ಧೆ ಮಾಡುವುದಾಗಿಯೂ ಇಂಟ್ರೆಸ್ಟ್ ತೋರಿಲ್ಲ. ಅವರು ಸ್ಪರ್ಧೆ ಮಾಡಲ್ಲ ಅಂತಾ ಹೇಳಿದರು.
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಮೊದಲು ಕಾಂಗ್ರೆಸ್ ಪಕ್ಷದಿಂದ 113 ಶಾಸಕರು ಆಯ್ಕೆಯಾಗಬೇಕು. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈ ಕಮಾಂಡಗೆ ಸಿಎಂ ಆಯ್ಕೆ ಮಾಡುತ್ತದೆ. ಇದು ಪಕ್ಷದ ನಿಯಮ. ಮುಂದಿನ ಮುಖ್ಯಮಂತ್ರಿ ಎಂಬ ಪ್ರಶ್ನೆಯೇ ಮಹತ್ವದಲ್ಲ. ಯಾರಿದ್ದರೂ ಪಕ್ಷ ಸಂಘಟನೆ ಮಾಡಬೇಕು. ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಹೇಳಿದರು.
Key words: not okay –support- another party- Satish Jarakiholi- y Prakash Hookery- statement.