ಬೆಂಗಳೂರು, ಜೂನ್ 8, 2022(www.justkannada.in): ಹಸಿರು ಸಂಚಾರವನ್ನು ಪ್ರೋತ್ಸಾಹಿಸಲು ನಮ್ಮ ಮೆಟ್ರೊ, ಮೆಟ್ರೋ ರೈಲುಗಳಲ್ಲಿ ಮಡಚಿಡುವ ಬೈಸಿಕಲ್ ಗಳನ್ನು ತೆಗೆದುಕೊಂಡು ಹೋಗಲು ಅಧಿಕೃತವಾಗಿ ಅನುಮತಿಸಿದೆ. ಈ ಹಿಂದೆಯೂ ಸಹ ಇದಕ್ಕೆ ಅನುಮತಿ ಇತ್ತು, ಆದರೆ ಈ ಕುರಿತು ಸೈಕಲ್ ಸವಾರರಲ್ಲಿ ಹೆಚ್ಚು ಅರಿವಿರಲಿಲ್ಲ.
ಈ ಮಡಚಿಡುವ ಸೈಕಲ್ ಗಳನ್ನು ಕೊನೆಯ ಬೋಗಿಯಲ್ಲಿ ಇಡಬಹುದು. ಈ ಬೆಳವಣಿಗೆಯಿಂದ ಇನ್ನು ಮುಂದೆ ದೂರ ಪ್ರಯಾಣಿಸುವವರು, ಮೆಟ್ರೋ ರೈಲು ಹಿಡಿಯಲು ಸ್ವಲ್ಪ ದೂರ ಕ್ರಮಿಸಬೇಕಾದಂತಹವರು ತಮ್ಮ ಜೊತೆಗೆ ಸೈಕಲ್ ಅನ್ನು ಕೊಂಡೊಯ್ಯುವ ಮೂಲಕ ಮೆಟ್ರೊ ರೈಲಿನಿಂದ ಇಳಿದ ಮೇಲೆ ಪುನಃ ಅವರ ಸೈಕಲ್ ನಲ್ಲಿ ಅವರು ತಲುಪಬೇಕಾದಂತಹ ಸ್ಥಳವನ್ನು ತಲುಪಬಹುದಾಗಿದೆ.
“ಈ ಮಡಚುವ ಸೈಕಲ್ ಗಳ ಗಾತ್ರ ೬೦ ಸೆಂ.ಮೀ x ೪೫ ಸೆಂ.ಮೀ x ೨೫ ಸೆಂ.ಮೀ.ಗಿಂತ ಹೆಚ್ಚಾಗಿರಬಾರದು ಹಾಗೂ ೧೫ ಕೆಜಿಗಿಂತ ಹೆಚ್ಚು ತೂಕವಿರಬಾರದು. ಪ್ರವೇಶದ್ವಾರದಲ್ಲಿ ಸೈಕಲ್ ಗಳನ್ನು ಬ್ಯಾಗೇಜ್ ಸ್ಕ್ಯಾನ್ನರ್ ಮೂಲಕ ತಪಾಸಣೆ ಮಾಡಲಾಗುವುದು. ಮೆಟ್ರೋ ಕೋಚ್ ಗಳ ಒಳಭಾಗ ಹಾನಿಯಾಗದಿರುವ ಹಾಗೆ ಸೈಕಲ್ ಗಳನ್ನು ಸರಿಯಾದ ರೀತಿಯಲ್ಲಿ ಪ್ಯಾಕ್ ಮಾಡಲಾಗುವುದು. ಜೊತೆಗೆ, ಇದರಿಂದಾಗಿ ಸಹಪ್ರಯಾಣಿಕರಿಗೂ ಯಾವುದೇ ರೀತಿ ತೊಂದರೆಯಾಗುವುದಿಲ್ಲ,” ಎಂದು ಬಿಎಂಆರ್‌ಸಿಎಲ್ ಹೇಳಿಕೆಯೊಂದರಲ್ಲಿ ಮಾಹಿತಿ ನೀಡಿದೆ.
ಬಿಎಂಆರ್‌ಸಿಎಲ್ ನ ಎಂಡಿ ಅಂಜುಮ್ ಪರ್ವೇಜ್ ಅವರು ಈ ಸಂಬಂಧ ಮಾತನಾಡಿ ಮೆಟ್ರೊ ರೈಲಿನ ಕೊನೆಯ ಬೋಗಿಯಲ್ಲಿ ಸೈಕಲ್ ಗಳನ್ನು ಇಡಲು ಅನುಮತಿಸಿರುವುದನ್ನು ದೃಢಪಡಿಸಿದರು. ಆದರೆ, ಮುಂಬೈ ಮೆಟ್ರೊ ಮಾದರಿಯಂತೆ ಬೋಗಿಗಳ ಒಳಭಾಗದಲ್ಲಿರುವಂತೆ ಸೈಕಲ್ ರ್ಯಾಮಕ್ ಗಳಿರುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
ಸೈಕಲ್ ಸವಾರರಿಗೆ ಅನುಕೂಲ ಮಾಡಿಕೊಟ್ಟಿರುವುದಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಬಿಎಂಆರ್‌ಸಿಎಲ್ ಸಿಪಿಆರ್ ಒ ಯಶವಂತ್ ಚವ್ಹಾಣ್ ಅವರು, “ಸೈಕಲ್ ಸವಾರರು ತಮ್ಮ ಮಡಚುವ ಸೈಕಲ್ ಗಳನ್ನು ಗಾಲಿಖುರ್ಚಿಗಳನ್ನು ಇಟ್ಟುಕೊಳ್ಳಲು ವಿಕಲಚೇತನರಿಗಾಗಿ ಒದಗಿಸಿರುವ ಸ್ಥಳದಲ್ಲಿ ಇಟ್ಟುಕೊಳ್ಳಬಹುದು. ಇದಕ್ಕೆ ಮೆಟ್ರೋ ರೈಲು ಚಾಲಕರ ಕ್ಯಾಬಿನ್ ನ ಹಿಂಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೊನೆಯ ಬೋಗಿಯನ್ನು ಸೈಕಲ್ ಸವಾರರು ಹಾಗೂ ಇತರೆ ಪ್ರಯಾಣಿಕರಿಗಾಗಿ ಒದಗಿಸಲು ನಿರ್ಧರಿಸಿದ್ದೇವೆ,” ಎಂದು ತಿಳಿಸಿದರು.
ಬೆಂಗಳೂರು ಬೈಸಿಕಲ್ ಮೇಯರ್ ಸತ್ಯ ಶಂಕರನ್ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. “ಈ ಉಪಕ್ರಮದಿಂದಾಗಿ ಸೈಕಲ್ ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಲಿದೆ. ಬಿಎಂಆರ್‌ಸಿಎಲ್ ನಿಲ್ದಾಣಗಳಲ್ಲಿಯೂ ಸೈಕಲ್ ಪಾರ್ಕಿಂಗ್ ಗೆ ಸ್ಥಳಾವಕಾಶ ಒದಗಿಸಲು ಆಲೋಚಿಸಬೇಕು ಹಾಗೂ ಶರ್ಡ್ಖ ಬೈಸಿಕಲ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಆಲೋಚಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಮ್ಮಲ್ಲಿ ಪ್ರಸ್ತುತ ಲಭ್ಯವಿರುವ ಮಡಚುವ ಸೈಕಲ್ ಗಳು ಮೆಟ್ರೋ ಸೂಚಿಸಿರುವ ಗಾತ್ರದ ಪ್ರಕಾರ ಇವೆಯೋ ಇಲ್ಲವೋ ಅನ್ನುವುದನ್ನೂ ಸಹ ವಿಶ್ಲೇಷಿಸಬೇಕು. ಸೈಕಲ್ ತಯಾರಿಸುವ ಸಂಸ್ಥೆಗಳು ಈ ಅಳತೆಯನ್ನು ಪರಿಗಣಿಸಿ ತಮ್ಮ ಸೈಕಲ್ ಗಳ ವಿನ್ಯಾಸದಲ್ಲಿ ಅಳವಡಿಸಿಕೊಳ್ಳಬೇಕು. ಮೆಟ್ರೋ ಬ್ಯಾಗ್ಗೇಜ್ ಸ್ಕ್ಯಾನರ್ ಗಳ ಬದಲಿಗೆ ಹ್ಯಾಂಡ್ ಸ್ಕ್ಯಾನ್ನರ್ ಗಳ ಬಳಕೆಯ ಬಗ್ಗೆ ಆಲೋಚಿಸುವುದು ಉತ್ತಮ,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೈಕಲ್ ಸವಾರರಾದ ರಾಜೀವ್ ಮಾಳಗಿ ಅವರು ಈ ಘೋಷಣೆಯಿಂದ ಅಸಂತೃಪ್ತರಾಗಿದ್ದಾರೆ. “ನಾನು ಬಳಸುವಂತಹ ಮಡಚುವ ಸೈಕಲ್ ಮೆಟ್ರೋ ನೀಡಿರುವ ನಿಗಧಿತ ಅಳತೆಯ ಪ್ರಕಾರ ಇಲ್ಲ. ಸ್ಕ್ಯಾನರ್ ಮೂಲಕ ಹೋಗದಿರುವಂತಹ ಮಡಚುವ ಸೈಕಲ್ ಗಳಿಗೆ ಅದರಿಂದ ವಿನಾಯಿತಿ ನೀಡಬೇಕು,” ಎಂದು ಕೋರಿದರು.
ಬೆಂಗಳೂರು ಸೆಂಟ್ರಲ್ ನ ಎಂಪಿ ಪಿ.ಸಿ. ಮೋಹನ್ ಅವರು ಸೈಕಲ್ ಸವಾರರನ್ನು ಬೆಂಬಲಿಸಿದ್ದಾರೆ. ತಮ್ಮ ಟ್ವಿಟ್ಟರ್ ಸಂದೇಶವೊಂದರಲ್ಲಿ ಅವರು, “ಸಾರ್ವಜನಿಕರು ಹಾಗೂ ಸೈಕಲ್ ಸವಾರರ ಕೋರಿಕೆಗಳನ್ನು ಪರಿಗಣಿಸಿ ಬಿಎಂಆರ್‌ಸಿಎಲ್ ಬೇರೆ ಸೈಕಲ್ ಗಳಿಗೂ ಅನುಮತಿ ನೀಡಬೇಕು. ಇದರಿಂದ ಮೆಟ್ರೋ ಬಳಸುವಂತಹ ಅನೇಕರಿಗೆ ಮೊದಲ ಹಾಗೂ ಅಂತಿಮ ಸ್ಥಳ ಕ್ರಮಿಸುವಲ್ಲಿ ಇರುವ ತಡೆಗಳು ನಿವಾರಣೆಯಾಗುತ್ತವೆ. ಹಾಗಾಗಿ, ಬಿಎಂಆರ್‌ಸಿಎಲ್ ಎಲ್ಲಾ ರೀತಿಯ ಸೈಕಲ್ ಗಳಿಗೂ ಅನುಮತಿ ನೀಡಬೇಕು,” ಎಂದು ಕೋರಿದ್ದಾರೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: now- Permission – bicycles – metro-bangalore