ಬೆಂಗಳೂರು,ಡಿಸೆಂಬರ್,07,2020(www.justkannada.in) : ಚಳಿಗಾಲದ ಅಧಿವೇಶನಕ್ಕೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಇಂದಿನಿಂದ ಏಳು ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ರಾಜಕೀಯ ಪಕ್ಷಗಳ ಕದನ ತಾರಕಕ್ಕೇರಲಿದೆ.
ಅಂದಹಾಗೆ ಪ್ರತಿ ಬಾರಿ ಚಳಿಗಾಲದ ಅಧಿವೇಶನ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿತ್ತು. ಆದರೆ, ಈ ಬಾರಿ ಬೆಂಗಳೂರಲ್ಲೇ ಚಳಿಗಾಲದ ವಿಧಾನ ಮಂಡಲ ಅಧಿವೇಶನ ನಡೆಯಲಿದೆ.
14 ಪ್ರಮುಖ ಮಸೂದೆಗಳ ಮಂಡನೆಗೆ ಸರ್ಕಾರ ಸಜ್ಜು
ಈ ಬಾರಿಯ ಅಧಿವೇಶನದಲ್ಲಿ 14 ಪ್ರಮುಖ ಮಸೂದೆಗಳನ್ನ ಮಂಡಿಸಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ. ಸರ್ಕಾರವನ್ನ ಸದನದಲ್ಲಿ ಕಟ್ಟಿ ಹಾಕಲು ಕಾಂಗ್ರೆಸ್ ಕೂಡ ಸಿದ್ಧವಾಗಿದೆ. ಅಂದ್ಹಾಗೆ ಮಂಡನೆಗೆ ಸಿದ್ಧವಾಗಿರುವ ಮಸೂದೆಗಳು ಯಾವುವು ಎಂದರೆ?
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿಧಾನ ಪರಿಷತ್ ನಲ್ಲಿ ಪಾಸ್ ಆಗಿರಲಿಲ್ಲ. ಹೀಗಾಗಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತೆ ಮಂಡನೆಯಾಗಲಿದೆ. ಇದರ ಜೊತೆಗೆ ಈಗಾಗಲೇ, ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವ ದೃಷ್ಠಿಯಿಂದ ಬಿಬಿಎಂಪಿ ವಿಧೇಯಕವನ್ನು ಮಂಡಿಸುವ ಸಾಧ್ಯತೆ ದಟ್ಟವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ವಿಧೇಯಕ ತಿದ್ದುಪಡಿ, ರಾಜ್ಯ ವಿಶ್ವವಿದ್ಯಾಲಯಗಳ ಕಾನೂನು ತಿದ್ದುಪಡಿ ಸೇರಿದಂತೆ ಮಹತ್ವದ ವಿಧೇಯಕಗಳ ಮೇಲೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
ಬಿಜೆಪಿಯ ಕೆಲ ನಾಯಕರು ಹೇಳಿರುವ ಪ್ರಕಾರ ಗೋ ಹತ್ಯೆ ನಿಷೇಧ ಕಾಯ್ದೆ, ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಸನ್ನದ್ದವಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆಗೆ ಅಗತ್ಯ ಸಿದ್ಧತೆಯಾಗಿರುವ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್ ಗೂ ಮುನ್ಸೂಚನೆ ಸಿಕ್ಕಿದೆ. ಇದನ್ನು ವಿರೋಧಿಸಲು ವಿಪಕ್ಷ ನಾಯಕರು ಸಿದ್ಧರಾಗಿದ್ದಾರೆ.
ಒನ್ ನೇಷನ್ ಒನ್ ಎಲೆಕ್ಷನ್ ಕುರಿತು ಎರಡು ದಿನ ವಿಶೇಷ ಚರ್ಚೆ
ಈ ಬಾರಿಯ ಅಧಿವೇಶನದ ಕೊನೆಯ ಎರಡು ದಿನಗಳ ಕಾಳ ಮಹತ್ವದ ಚರ್ಚೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಕಲ್ಪಿಸಿದ್ದು, ಸದ್ದುಗದ್ದಲ ಏರ್ಪಡಲಿದೆ. ಒನ್ ನೇಷನ್ ಒನ್ ಎಲೆಕ್ಷನ್ ಕುರಿತು ಎರಡು ದಿನಗಳ ವಿಶೇಷ ಚರ್ಚೆಗೆ ನಿರ್ಧರಿಸಿರುವುದು ಈ ಅಧಿವೇಶನದ ಹೈಲೈಟ್ಸ್ ಆಗಿದೆ.
key words : now-For 7 days-Winter-session