21 ರೂ. ನರೇಗಾ ಕೂಲಿ ಹೆಚ್ಚಳ: ಏ.1 ರಿಂದಲೇ ಜಾರಿ: ಮೈಸೂರು ಜಿ.ಪಂ CEO ಎಸ್.ಯುಕೇಶ್‌ ಕುಮಾರ್‌   

ಮೈಸೂರು,ಏಪ್ರಿಲ್,8,2025 (www.justkannada.in): ನರೇಗಾ ಕೂಲಿಯನ್ನ 21 ರೂ.  ಹೆಚ್ಚಳ ಮಾಡಲಾಗಿದ್ದು  ಏಪ್ರಿಲ್ 1 ರಿಂದಲೇ ಜಾರಿಯಾಗಿದೆ ಎಂದು  ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್‌ ಕುಮಾರ್‌ ತಿಳಿಸಿದರು.

ಕೂಲಿ ಹೆಚ್ಚಳ ಕುರಿತು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್‌ ಕುಮಾರ್‌  ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಭಾಗದ ಅಕುಶಲ ಕೂಲಿ ಕೆಲಸ ಮಾಡುವ ಕೂಲಿಕಾರರ ದಿನಗೂಲಿ ದರವನ್ನು 349 ರಿಂದ  370 ರೂ.ಗಳಿಗೆ ಹೆಚ್ಚಳ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ದಿನಗೂಲಿ 21 ರೂ. ಹೆಚ್ಚಳ:  2024-25 ನೇ ಸಾಲಿನಲ್ಲಿ 349  ರೂ. ಗಳಿಂದ ಕೂಲಿಯನ್ನು 2025-26 ನೇ ಸಾಲಿನಲ್ಲಿ 370 ರೂ.ಗಳಿಗೆ ಕೂಲಿ ಹೆಚ್ಚಳ  ಮಾಡಿದೆ. ಏಪ್ರಿಲ್‌ 1, 2025 ರಿಂದ 370 ರೂ.ಗಳ ಕೂಲಿ ಜಾರಿಯಲ್ಲಿರುತ್ತದೆ. ಅರ್ಹ ಮತ್ತು ನೊಂದಾಯಿತ ಕೂಲಿಕಾರ್ಮಿಕರು ಸೌಲಭ್ಯವನ್ನು ಪಡೆದುಕೊಳ್ಳಬಹುದು. ಮ-ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶ ಪ್ರತಿ ಅರ್ಹ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ 100 ದಿನಗಳ ಕೂಲಿ ಕೆಲಸದ ಖಾತ್ರಿ ನೀಡಿದೆ. ಒಂದು ಕುಟುಂಬ ನೂರು ದಿನ ಕೆಲಸ ಮಾಡಿದರೆ 37000 ರೂ.ಗಳನ್ನು ಪಡೆದುಕೊಳ್ಳಬಹುದು. ಗಂಡು ಹೆಣ್ಣಿಗೆ ದಿನಕ್ಕೆ 370 ರೂ.ಗಳ ಸಮಾನ ಕೂಲಿ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು ಮಾತನಾಡಿ, ಗ್ರಾಮೀಣ ಭಾಗದಲ್ಲಿ ದುಡಿಯುವವರೇ ಇಲ್ಲವಾಗಿದೆ. ಇಂತಹ ವೇಳೆ ಜಿಲ್ಲಾ ಪಂಚಾಯಿತಿ ಸಾಕಷ್ಟು ಕಾರ್ಯಕ್ರಮಗಳನ್ನು ಮೂಡಿಸಿ ಅರಿವು ಮೂಡಿಸಿ ಹಲವು ಸೌಲಭ್ಯದ ನೆರವು ನೀಡಿದ ಬಳಿಕ ಹೆಚ್ಚಿನ ಮಂದಿ ಇತ್ತ ಮುಖ ಮಾಡಿದ್ದಾರೆ. ಇಂತಹ ವೇಳೆ ಕೂಲಿ ಹೆಚ್ಚಳದಿಂದ ಇನ್ನಷ್ಟು ಮಂದಿ ಇದರ ಲಾಭ ಪಡೆಯುವ ನಿಟ್ಟಿನಲ್ಲಿ ಈ ಹೆಚ್ಚಳ ಸದುಪಯೋಗವಾಗಲಿದೆ. ಇದನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ನರೇಗಾ ಕೂಲಿ ಶಿಕ್ಷಣಕ್ಕೆ ನೆರವಾಯಿತೆಂದ ನಿರುದ್ಯೋಗಿ ವಿದ್ಯಾರ್ಥಿಗೆ ಕೂಲಿ ಹೆಚ್ಚಳ ಮತ್ತಷ್ಟು ಕೂಲಿ ಮಾಡಲು ಪ್ರೇರಣೆ ನೀಡಿದ್ದರೆ, ನಗರದತ್ತ ಮುಖ ಮಾಡಿದ್ದ ಮಹಿಳೆಗೆ ಕೂಲಿ ಹೆಚ್ಚಳ ಗ್ರಾಮದಲ್ಲೇ ಕೂಲಿ ಹುಡುಕುವಂತೆ ಮಾಡಿದೆ. ಹೀಗೆ ನರೇಗಾ ಕೂಲಿಯಲ್ಲಿ 21 ರೂ.ಗಳ ಏರಿಕೆ ಮಾಡಿರುವುದು ಮೈಸೂರಿನ ನರೇಗಾ ಕೂಲಿ ಕಾರ್ಮಿಕರಲ್ಲಿ ಒಂದಿಲ್ಲೊಂದು ಸಂತಸ ಹೆಚ್ಚು ಮಾಡಿದೆ.

Key words: NREGA, wage, hike,  from, April 1,  Mysore