ಭಾರತದ ನೆಲ, ಬುದ್ಧಿವಂತರ ನೆಲಬೀಡು:  ಸ್ವಾಮಿ ನಿರ್ಭಯಾನಂದ ಸರಸ್ವತಿಗಳ ಅಭಿಮತ

ಮೈಸೂರು,ಫೆಬ್ರವರಿ,3,2025 (www.justkannada.in): ಜಗತ್ತಿಗೆ ಪಸರಿಸುವಷ್ಟು ಬುದ್ಧಿವಂತರನ್ನು ಸೃಷ್ಟಿಸುವ ಶಕ್ತಿ ಭಾರತದ ಮಣ್ಣಿಗಿದೆ. ಇದು ಉತ್ಪ್ರೇಕ್ಷೆಯ ಮಾತಲ್ಲ, ವೈಜ್ಞಾನಿಕ ಅಂಶವನ್ನಾಧರಿಸಿ ಹೇಳುತ್ತಿದ್ದೇನೆ ಎಂದು ಗದುಗಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ನುಡಿದರು.

ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್‍ ನ ವಾರ್ಷಿಕ ಸಂಭ್ರಮ ನೈಪುಣ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ  ಪಾಲ್ಗೊಂಡು ಮಾತನಾಡಿದ ಅವರು,  ಪ್ರಾಚೀನ ಕಾಲದಿಂದಲೂ ವೇದ-ಉಪನಿಷತ್ತು ಕಾಲದಿಂದಲೂ ಬುದ್ಧಿವಂತರನ್ನು ಸೃಷ್ಟಿ ಮಾಡಿ ಜಗತ್ತಿನ ಮನುಕುಲದ ಕಣ್ಣು ತೆರೆಸುವ ಸಾಧಕರನ್ನು ಸೃಷ್ಟಿಸಿದ ಕೀರ್ತಿ ಭಾರತದ ಪುಣ್ಯಭೂಮಿಗೆ ಸಲ್ಲಬೇಕು. ದೇಶ ವಿದೇಶಗಳನ್ನು ಸುತ್ತಿದಾಗ ನಾನು ಈ ಅಂಶಗಳನ್ನು ಸಂಗ್ರಹಿಸಿ ಹಾಗೂ ಅಮೂಲ್ಯ ಗ್ರಂಥಗಳನ್ನು ಆಧರಿಸಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಹೇಳಿದರು.

ಪೋಷಕ ವರ್ಗ ಇಂದು ಮಕ್ಕಳ ಮೇಲೆ ತನ್ನ ಪ್ರಭಾವವನ್ನು ಬೀರುವಲ್ಲಿ ವಿಫಲವಾಗುತ್ತಿದೆ. ಮಕ್ಕಳ ಬುದ್ಧಿವಂತಿಕೆಯನ್ನು ಗುರುತಿಸುವಲ್ಲಿ ತಮ್ಮ ಜವಾಬ್ದಾರಿಯನ್ನು ಮರೆಯುತ್ತಿದೆ. ಈ ಕಾರಣಕ್ಕಾಗಿಯೇ ಕೆಲವು ಮಕ್ಕಳು ಶಿಕ್ಷಣ ಹಾಗೂ ಬದುಕಿನ ಗುರಿ ಸಾಧಿಸುವಲ್ಲಿ ಹಿಂದುಳಿಯುವಂತಾಗಿದೆ, ಇದು ಅತ್ಯಂತ ನೋವಿನ ಸಂಗತಿ. ಜಗತ್ತನ್ನು ನೋಡಲು ಕಣ್ಣುಬಿಡುವ ಪ್ರತಿಯೊಂದು ಮಗುವಿನಲ್ಲೂ ಬುದ್ಧಿವಂತ ಇದ್ದೇ ಇರುತ್ತಾನೆ, ಆದರೆ ಆ ಬುದ್ಧಿವಂತನನ್ನು ಗುರುತಿಸುವಲ್ಲಿ ಪೋಷಕರು ವಿಫಲರಾಗುತ್ತಾರೆ, ಶಿಕ್ಷಕರೂ ಕೂಡ ಕೆಲವೊಮ್ಮೆ ಇಂತದ್ದೇ ತಪ್ಪು ಮಾಡುತ್ತಾರೆ. ಮಕ್ಕಳ ನಡುವೆ ಹೋಲಿಕೆ ಮಗುವಿನ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೊಡ್ಡವರಾದ ನಮ್ಮ ವರ್ತನೆಯೂ ಅವರಲ್ಲಿ ಕೀಳರಿಮೆಯ ಬೀಜ ಬಿತ್ತುತ್ತದೆ. ಇದರಿಂದಾಗಿ ಮಹತ್ಸಾಧನೆ ಮಾಡಬಹುದಾದ ಅನೇಕರ ಭವಿಷ್ಯ ಮುಸುಕಾಗಿಬಿಡುತ್ತದೆ ಎಂಬುದನ್ನು ಪೋಷಕರು ಅರಿಯಬೇಕಾಗಿದೆ. 6, 10ನೇ ತರಗತಿಯಲ್ಲಿ ಉತ್ತೀರ್ಣರಾಗಲು ಐದಾರು ಬಾರಿ ಅವಕಾಶ ತೆಗೆದುಕೊಳ್ಳುವ ಮಕ್ಕಳು ಜಗತ್ತಲ್ಲಿ ಮಹತ್ಸಾಧನೆ ಮಾಡಿದ್ದನ್ನು ನಾನು ನೋಡಿದ್ದೇನೆ. ನಮ್ಮ ಆಶ್ರಮದ ವಿದ್ಯಾರ್ಥಿಗಳಲ್ಲೇ ಅನೇಕ ಮಕ್ಕಳು ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದನ್ನು ನಾನು ಕಂಡಿದ್ದೇನೆ, ಅವರಿಗೆ ಮಾರ್ಗದರ್ಶನ ನೀಡಿದ್ದೇನೆ. ಈ ಅನುಭವದಿಂದ ನಾನು ಈ ಮಾತು ಹೇಳುತ್ತಿದ್ದೇನೆ. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆಯೂ ಇರುತ್ತದೆ, ಬುದ್ಧಿವಂತಿಕೆಯೂ ಇರುತ್ತದೆ. ಅದನ್ನು ಗಮನಿಸಬೇಕಾಗಿರುವುದೇ ನಮ್ಮ ಕರ್ತವ್ಯವಾಗಿರುತ್ತದೆ ಎಂದರು.

ಭಾರತದ ಕುಟುಂಬ ಸಂಸ್ಕೃತಿ ಸಂಸ್ಕಾರದ ಶಿಕ್ಷಣವನ್ನು ನೀಡುವ ಪದ್ಧತಿಯಾಗಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಮಾನವಿಯ ಸ್ಪರ್ಶಗಳಿಂದ ನಾವು ದೂರವಾಗುತ್ತಿದ್ದೇವೆ. ಇದರಿಂದಾಗಿ ಮಕ್ಕಳ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದೇವೆ. ಮಗುವಿನ ಸಾಮರ್ಥ್ಯಕ್ಕನುಗುಣವಾಗಿ ಮಕ್ಕಳ ಬೆಳವಣಿಗೆಯನ್ನು ಪೋಷಿಸಬೇಕು, ಉತ್ತೇಜಿಸಬೇಕು ಹೊರತು ನಮ್ಮ ಒತ್ತಡವನ್ನು ಹೇರಿ ಮಕ್ಕಳ ಭವಿಷ್ಯ ಅಂಧಕಾರಕ್ಕೆ ತಳ್ಳುವಂತಾಗಬಾರದೆಂಬುದೇ ನಮ್ಮ ಆಶಯವಾಗಿದೆ. ಆದ್ದರಿಂದ ಪೋಷಕರು ಮಕ್ಕಳನ್ನು ಮಕ್ಕಳಾಗಿ ನೋಡಿ ಅವರಿಗೆ ಸನ್ಮಾರ್ಗ ತೋರಿಸುವ ಉತ್ತಮ ವಾತಾವರಣ ತೋರಿಸುವ ಅನಿವಾರ್ಯತೆ ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ ಎಂದು ಅವರು ಹೇಳಿದರು. ನೈಪುಣ್ಯ ಸಂಸ್ಥೆಯು ರಘು ಅವರ ಸಾರಥ್ಯದಲ್ಲಿ ಒಂದು ಉತ್ತಮ ಉದ್ದೇಶ, ಯೋಜನೆ ರೂಪಿಸಿ ಪ್ರತಿಯೊಂದು ಮಗುವಿನ ಭವಿಷ್ಯ ರೂಪಿಸುವುದೇ ನೈಜ ಶಿಕ್ಷಣ ಎಂದು ಸಂಕಲ್ಪ ತೊಟ್ಟಿದೆ. ಈ ಕಾರಣ್ಕಕಾಗಿಯೇ ಗದಗಿನಿಂದ ಈ ಕಾರ್ಯಕ್ರಮಕ್ಕೆ ಬರಬೇಕಾಯಿತೆಂದು ಹೇಳಿದರು.

ಇದಕ್ಕೂ ಮೊದಲು ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಚುನಾವಣಾ ಆಯೋಗದ ಮಾಜಿ ಆಯುಕ್ತರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಪಿ. ಎನ್. ಶ್ರೀನಿವಾಸಾಚಾರಿ ಅವರು ಮಾತನಾಡಿ ಪ್ರತಿಯೊಂದು ಮಗುವಿನಲ್ಲೂ ಸಾಧಕನಿರುತ್ತಾನೆ. ಆದರೆ ಕಷ್ಟದ ಪರಿಚಯ ಒಬ್ಬ ಮಗುವಿನಲ್ಲಿ ಸಾಧಕನಾಗುವ ಗುರಿಯತ್ತ ಸಾಗಲು ಪ್ರೇರೇಪಿಸುತ್ತದೆ. ಒಬ್ಬ ಸಾಧಕನಿಗೆ ಜಾತಿ, ಶ್ರೀಮಂತಿಕೆ, ಬಡತನ ಆಧಾರವಾಗುವುದಿಲ್ಲ, ಬದಲಾಗಿ ಅವನಲ್ಲಿ ಪಡಿಮೂಡುವ ಛಲ ಅವನನ್ನು ಸಾಧನೆಯ ಗುರಿಯತ್ತ ಕೊಂಡೊಯ್ಯುತ್ತದೆ. ಈ ನಿಟ್ಟಿನಲ್ಲಿ ನಗರ-ಗ್ರಾಮೀಣ ಪ್ರದೇಶದ ಅಂತರವಿಲ್ಲದೇ ಸಾಧಿಸಬಹುದು ಎನ್ನುವುದಕ್ಕೆ ಗ್ರಾಮೀಣ ಪ್ರದೇಶದಿಂದ ಬಂದ ತಾವೇ ಒಂದು ಉದಾಹರಣೆಯಾಗಿರುವುದಾಗಿ ಹೇಳಿದರು. ಸರ್ಕಾರದ ವ್ಯವಸ್ಥೆಯಲ್ಲಿ ನಾವು ಅಧಿಕಾರದಲ್ಲಿದ್ದಾಗ ನಾವು ನಡೆದು ಬಂದ ದಾರಿಯನ್ನು ನೆನಪಿಸಿಕೊಂಡು ಹೆಜ್ಜೆಯಿಟ್ಟರೆ ಸಮಾಜದ ಕಣ್ಣೊರೆಸಬಹುದು, ಸಮಾಜದ ದನಿಯಾಗಬಹುದು, ಶಿಕ್ಷಣಕ್ಕೆ ಮಾದರಿಯಾಗಬಹುದು ಎನ್ನುವುದನ್ನು ತಮ್ಮ ಸೇವಾ ಅನುಭವದಲ್ಲಿ ಅನುಸರಿಸಿದ್ದಾಗಿ ಅವರು ಇದೇ ಸಂದರ್ಭದಲ್ಲಿ ಅನುಭವವನ್ನು ಹಂಚಿಕೊಂಡರು.

ನಗರದ ಕೆಎಸ್‍ಓಯು ಘಟಿಕೋತ್ಸವ ಭವನದಲ್ಲಿ ಶಾಲೆಯ ನೈಪುಣ್ಯೋತ್ಸವ ಕಾರ್ಯಕ್ರಮವನ್ನು ಬೆಳಿಗ್ಗೆ ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ|| ಕೆ ಎಸ್ ಸದಾನಂದ ಅವರು ಉದ್ಘಾಟಿಸಿ, ಮಕ್ಕಳು ಪೋಷಕರನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಾರೆ , ಆದ್ದರಿಂದ ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಪೋಷಕರು ಸೃಷ್ಟಿಸಬೇಕು ಎಂದು ಹೇಳಿದರು. ಎರಡೂ ಕಾರ್ಯಕ್ರಮ ಅಧ್ಯಕ್ಷತೆಯನ್ನು ನೈಪುಣ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಆರ್. ರಘು ಅವರು ವಹಿಸಿದ್ದರು.

ಬೆಳಗಿನ ಕಾರ್ಯಕ್ರಮದಲ್ಲಿ ಚಿಣ್ಣರ ಮನರಂಜನಾ ಕಾರ್ಯಕ್ರಮ ಜೊತೆಗೆ ಕೂಡು ಕುಟುಂಬವನ್ನು ಉತ್ತೇಜಿಸುವ ಬೇರು-ಬಳ್ಳಿ ಕಾರ್ಯಕ್ರಮದಲ್ಲಿ ರ್ಯಾಂಪ್ ವಾಕ್ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳು, ಅವಿಭಕ್ತ ಕುಟುಂಬದ ಸಮಾಗಮ ಉತ್ತಮ ಮನರಂಜೆಯನ್ನು ಒದಗಿಸಿತ್ತಲ್ಲದೇ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾಕ್ಷೀಕರಿಸಿತು. ಕೂಡು ಕುಟುಂಬದ ಪರಿಣಾಮದ ಕುರಿತು ಕೂಡು ಕುಟುಂಬದ ಪ್ರತಿನಿಧಿಗಳು ಈ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡರು. ಮಕ್ಕಳ ತಾಯಂದಿರು ಸಮೂಹ ನೃತ್ಯ ಪ್ರದರ್ಶಿಸಿ ನೈಪುಣ್ಯೋತ್ಸವಕ್ಕೆ ಹಬ್ಬದ ಮೆರಗನ್ನು ತಂದರು.

ಸಂಜೆಯ ಮನರಂಜನಾ ಕಾರ್ಯಕ್ರಮದಲ್ಲಿ ವಿದೂಷಿ ಡಾ. ಶಾಂಭವಿ ಸ್ವಾಮಿ ಅವರ ನಿರ್ದೇಶನದದಲ್ಲಿ ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು 1.30 ಗಂಟೆಗಳ ಕಾಲ ನೃತ್ಯ ರೂಪಕವನ್ನು ಪ್ರದರ್ಶಿಸಿ, ಪರಿಸರ ಜಾಗೃತಿ ಮೂಡಿಸುವ ಸಂದೇಶ ನೀಡಿ “ಭವಿಷ್ಯದ ಪೀಳಿಗೆಯ ನಮಗೆ ಏನನ್ನೂ ಕೊಡಲಾಗದಿದ್ದರೂ ಪರವಾಗಿಲ್ಲ, ಒಂದಷ್ಟು ಗಾಳಿ ಉಳಿಸಿ, ಉತ್ತಮ ಜಲಸಂಪತ್ತು, ಉಳಿಸಿ ಅರಣ್ಯ ಸಂಪತ್ತು ಉಳಿಸಿ, ಜೀವ ವೈವಿಧ್ಯತೆ ಉಳಿಸಿ, ನಾವೂ ಬದುಕಲು ಪರಿಸರ ಉಳಿಸಿ” ಎನ್ನುವ ಸಂದೇಶ ಹೃದಯಸ್ಪರ್ಶಿಯಾಗಿತ್ತು.

ಸಂಸ್ಥೆಯ ಹಿರಿಯ ಶಿಕ್ಷಕಿ ಶಾಲಿನಿ ಮಾಜೊ ಅವರಿಗೆ ಹತ್ತು ಸಾವಿರ ನಗದು ಪುರಸ್ಕೃತವನ್ನೊಳಗೊಂಡ ‘ನೈಪುಣ್ಯಶ್ರೀ’ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇತರ ಶಿಕ್ಷಕರಾದ ದೇಚಮ್ಮ, ಭಾರ್ಗವಿ ಹಾಗೂ ತೀರ್ಥಕುಮಾರ ಅವರುಗಳ ಸಾರ್ಥಕ ಸೇವೆ ಗುರುತಿಸಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಾಂಶುಪಾಲರಾದ ಶಾಂತಿನಿ ಜೆರಾಲ್ಡ್, ಚಿಣ್ಣರ ವಿಭಾಗದ ಮುಖ್ಯಸ್ಥರಾದ ಭಾವನಾ ಶ್ರೀಕಾಂತ್ ಉಪಸ್ಥಿತರಿದ್ದರು.

Key words: mysore, nyapunyotsava, Swami Nirbhayananda Saraswati