ಮೈಸೂರು,ಡಿಸೆಂಬರ್,2,2024 (www.justkannada.in): ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದಿದ್ದರೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲೇಬೇಕು. ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಬಾಲ್ಯದಲ್ಲಿ ಕ್ರೀಡಾ ನೈಪುಣ್ಯತೆ ಹೊಂದಲು ಪ್ರತಿಯೊಬ್ಬ ಮಗುವಿಗೂ ಮುಕ್ತ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾದುದು ಎಂದು ಭಾರತದ ಸಶಸ್ತ್ರ ಪಡೆಗಳ ನಿವೃತ್ತ ಗ್ರೂಪ್ ಕ್ಯಾಪ್ಟನ್ ಎ. ಚತುರ್ವೇದಿ ಅವರು ಹೇಳಿದರು.
ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ನ ಕನಕದಾಸನಗರ ಹಾಗೂ ಆರ್. ಟಿ. ನಗರದ ಕ್ಯಾಂಪಸ್ ಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಶಾಲಾ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಮಗುವಿನಲ್ಲೂ ಒಬ್ಬೊಬ್ಬ ಪ್ರತಿಭಾವಂತನಿರುತ್ತಾನೆ, ಆ ಪ್ರತಿಭಾವಂತನನ್ನು ಹೊರತರಲು ಆ ವಿದ್ಯಾರ್ಥಿಯ ಆಸಕ್ತಿವಲಯವನ್ನು ಗುರುತಿಸಬೇಕು, ಈ ನಿಟ್ಟಿನಲ್ಲಿ ಜೀವನೋತ್ಸಾಹ ಸಾಧಿಸಲು ಕ್ರೀಡೆಯನ್ನು ಉತ್ತೇಜಿಸಬೇಕು, ಶಾಲಾ ಹಂತದಲ್ಲಿ ಮಕ್ಕಳು ಕ್ರೀಡಾ ಸಾಧಕರಾಗಲು ಅವಕಾಶವಿರುತ್ತದೆ. ಆ ಅವಕಾಶಗಳ ಬಾಗಿಲು ತೆರೆದುಕೊಡಲು ಇಂತಹ ಕ್ರೀಡಾಕೂಟಗಳನ್ನು ಏರ್ಪಡಿಸುವುದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿರುತ್ತದೆ. ಯಾವುದೇ ಮಗುವೂ ಅಕ್ಷರವಂಚಿತರಾಗಬಾರದೆಂದು ಹೇಗೆ ಭಾವಿಸುತ್ತೇವೆಯೋ ಹಾಗೆಯೇ ಮಗುವಿಗೆ ಕ್ರೀಡಾ ಅವಕಾಶಗಳೂ ತಪ್ಪಬಾರದು ಎಂಬುದು ನೈಜ ಶಿಕ್ಷಣದ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ ಅಕ್ಷರ ಜ್ಞಾನದ ಜೊತೆಗೆ ಮಗುವಿನ ಇತರ ಆಸಕ್ತಿಗಳ ಬಗ್ಗೆಯೂ ಹೆಚ್ಚು ಆಸ್ಥೆ ವಹಿಸಿ ಶಿಕ್ಷಣ ನೀತಿ ರೂಪಿಸಿಕೊಂಡಿರುವ ನೈಪುಣ್ಯ ವಿದ್ಯಾ ಸಂಸ್ಥೆಯ ಬದ್ಧತೆ ಪ್ರಶಂಸನೀಯ ಎಂದು ಎ. ಚತುರ್ವೇದಿ ಹೇಳಿದರು.
ನಗರದ ವಿಶ್ವವಿದ್ಯಾಲಯದ ಓವಲ್ ಗ್ರೌಂಡ್ಸ್ನಲ್ಲಿ ನಡೆದ ನೈಪುಣ್ಯ ಕ್ರೀಡಾಕೂಟದಲ್ಲಿ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡರು. ಪೋಷಕರಿಗಾಗಿಯೂ ವಿಶೇಷ ಕ್ರೀಡೆಗಳನ್ನು ಏರ್ಪಡಿಸಿದ್ದು ಕ್ರೀಡಾಕೂಟದ ಆಕರ್ಷಣೆಯಾಗಿತ್ತು. ಕ್ರೀಡಾಕೂಟದ ಆರಂಭಕ್ಕೂ ಮೊದಲು ಕ್ರೀಡಾ ಜ್ಯೋತಿಯನ್ನು ಹೊತ್ತು ತಂದ ನೈಪುಣ್ಯ ವಿದ್ಯಾರ್ಥಿಗಳು, ಸ್ಪರ್ಧಾಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪಥಸಂಚಲನ, ಏರೋಬಿಕ್ಸ್ ನೃತ್ಯ ಪ್ರೇಕ್ಷಕ ವೃಂದವನ್ನು ಆಕರ್ಷಿಸಿತು. ವಿವಿಧ ಪಂದ್ಯಾವಳಿಗಳಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಬಹುಮಾನ ವಿತರಿಸಲಾಯಿತು.
ಕ್ರೀಡಾಕೂಟದಲ್ಲಿ ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಪ್ರೊಫೆಸರ್ ಸಿ. ವೆಂಕಟೇಶ್, ನೈಪುಣ್ಯ ಸಂಸ್ಥೆಯ ಅಧ್ಯಕ್ಷ ಆರ್. ರಘು, ಪ್ರಾಂಶುಪಾಲೆ ಶಾಂತಿನಿ ಜೆರಾಲ್ಡ್, ಸಾರ್ವಜನಿಕ ಸಂಪರ್ಕಾಧಿಕಾರಿ ಭಾವನಾ ಶ್ರೀಕಾಂತ್, ಶಿಕ್ಷಣ ವಿಭಾಗದ ಮುಖ್ಯಸ್ಥ ಅಕ್ಷಯ್ ಜಿ. ಉಪಸ್ಥಿತರಿದ್ದರು.
Key words: Sports, lifelong, achievement, Chaturvedi, Nypunya