ತುಮಕೂರು,ಜೂ.1,2020(www.justkannada.in): ಕೃಷಿ ವಿಜ್ಞಾನ ಕೇಂದ್ರದಲ್ಲಿ ಗೈರಾದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.
ಸಚಿವ ಬಿ.ಸಿ ಪಾಟೀಲ್ ಇಂದು ತುಮಕೂರು ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ತಿಪಟೂರಿನಿಂದ ದೊಡ್ಡ ಮೇಟಿ ಕುರ್ಕೆಗೆ ಹೋಗುವ ಮಾರ್ಗ ಮಧ್ಯದಲ್ಲಿರುವ ಬಿದರೆಗುಡಿ ಕವಲುನ ಐಸಿಎಆರ್ ಪ್ರಾಯೋಜಿತ ಕೃಷಿ ವಿಜ್ಞಾನ ಕೇಂದ್ರಕ್ಕೆ ಆಕಸ್ಮಿಕ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ವಿಜ್ಞಾನ ಕೇಂದ್ರದ ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿ ಪುಸ್ತಕ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದರು. ಪರಿಶೀಲನೆ ವೇಳೆ ದಾಖಲೆಗಳು ಅಸ್ಪಷ್ಟವಾಗಿದ್ದು ಮತ್ತು ಅಧಿಕಾರಿಗಳು ಗೈರು ಹಾಜರಾಗಿದ್ದು ಕಂಡುಬಂದಿತು. ಈ ಬಗ್ಗೆ ಕೇಂದ್ರದಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಹಾಗೂ ಕೇಂದ್ರದ ಮುಖ್ಯಸ್ಥ ಗೋವಿಂದೇಗೌಡ ರವರ ಬಗ್ಗೆ ವಿಚಾರಿಸಿದಾಗ ಮುಖ್ಯಸ್ಥರು ಬೆಂಗಳೂರಿಗೆ ಹೋಗಿರುವುದಾಗಿ ತಿಳಿಸಿದರು.
ಇವರ ಉತ್ತರ ಸಮರ್ಪಕವೆನಿಸದೆ ಇದ್ದಾಗ ಸಚಿವ ಬಿ.ಸಿ ಪಾಟೀಲ್ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಹಾಗೂ ನ್ಯಾಷನಲ್ ಸೀಡ್ಸ್ ಪ್ರಾಜೆಕ್ಟ್ ಮುಖ್ಯಸ್ಥರೊಂದಿಗೆ ದೂರವಾಣಿಯಲ್ಲಿ ವಿಚಾರಿಸಿದಾಗ, ವಿಜ್ಞಾನ ಕೇಂದ್ರದ ಮುಖ್ಯಸ್ಥರು ಬರದೇ ಗೈರಾಗಿರುವ ಬಗ್ಗೆ ಮಾಹಿತಿ ಲಭ್ಯವಾಯಿತು.ಈ ಬಗ್ಗೆ ಕೃಷಿ ಸಚಿವರು ಬೆಂಗಳೂರಿನ ಕುಲಪತಿಗಳೊಂದಿಗೆ ಚರ್ಚಿಸಿ ಕೂಡಲೇ ತಪ್ಪಿತಸ್ಥರು ಹಾಗೂ ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಪದೇಪದೇ ಸಮರ್ಪಕ ಕಾರಣವಿಲ್ಲದೇ ಗೈರಾಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತುಗೊಳಿಸುವಂತೆ ಸಚಿವ ಬಿ.ಸಿ ಪಾಟೀಲ್ ಖಡಕ್ ಸೂಚನೆ ನೀಡಿದರು.
Key words: Officers -absent – duty-Agriculture Minister- BC Patil -instructs – suspend