ಮೈಸೂರು,ಜೂನ್.19,2023(www.justkannada.in): ಸರ್ಕಾರಿ ನೌಕರರು ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರವನ್ನು ಒದಗಿಸುವ ನೈತಿಕತೆಯನ್ನು ಹೊಂದಿರಬೇಕು ಎಂದು ಕರ್ನಾಟಕ ಲೋಕಾಯುಕ್ತ ಆಯೋಗದ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಅಹವಾಲು/ಕುಂದುಕೊರತೆ, ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಾಯುಕ್ತ ಕಾನೂನು ಅಡಿ ಬರುವ ಪ್ರಕರಣಗಳನ್ನು ವಿಚಾರಣೆ ನಡೆಸಿ, ಸೂಕ್ತ ಪರಿಹಾರವನ್ನ ನೀಡಲಾಗುವುದು. ನಮ್ಮ ವ್ಯಾಪ್ತಿಯಲ್ಲಿ ಬಾರೆದೆ ಇರುವ ಪ್ರಕರಣಗಳಾದ ಕೋರ್ಟಿಗೆ ಸಂಬಂಧಿಸಿದ ಪ್ರಕರಣಗಳು, ಮೇಲ್ಮನವಿ ಸಲ್ಲಿಸುವಿಕೆ, ವೈಯಕ್ತಿಕ ದೂರು ಇತ್ಯಾದಿಗಳನ್ನು ಸಂಬಂಧಿಸಿದ ಕಚೇರಿಗಳಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ತಿಳಿಸಿದರು.
ಸರ್ಕಾರಿ ನೌಕರರು ಸಾರ್ವಜನಿಕರ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕೆಲವು ಸರ್ಕಾರಿ ಕಚೇರಿಗಳಲ್ಲಿ ಉಂಟಾಗುವ ಲೋಪಗಳಿಂದಲೇ ಜನರು ಬೇಸತ್ತು, ಲೋಕಾಯುಕ್ತರ ಮೊರೆ ಹೋಗುತ್ತಾರೆ. ಸರ್ಕಾರಿ ಅಧಿಕಾರಿಗಳೇ ತಮ್ಮ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳನ್ನು ಪ್ರಾಮಾಣಿಕತೆಯಿಂದ ಇತ್ಯರ್ಥಪಡಿಸಿಕೊಂಡಲ್ಲಿ ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸಾಮರಸ್ಯ ಉಂಟಾಗುವುದು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಸರ್ಕಾರಿ ಕಚೇರಿಗಳಲ್ಲಿ ಉಂಟಾಗುವ ಅನಗತ್ಯ ವಿಳಂಬವನ್ನು ನಿಲ್ಲಿಸಿ ಸಾರ್ವಜನಿಕರಿಗೆ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದರು.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಮನೆಗಳ ಖಾತೆ ಹಂಚಿಕೆ, ಪೌತಿ ಖಾತೆ ಬದಲಾವಣೆ, ಹಕ್ಕು ಪತ್ರ ವಿತರಣೆ, ಚರಂಡಿಗಳ ಸಮಸ್ಯೆ ಇನ್ನಿತರೆ ಸಮಸ್ಯೆಗಳಿಗಳನ್ನು ಗ್ರಾಮ ಪಂಚಾಯಿತಿಯ ಪಿ.ಡಿ.ಒ ಗಳು ಯಾವುದೇ ವಿಳಂಬವಿಲ್ಲದೇ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಮಯದಲ್ಲಿ 200 ಕ್ಕೂ ಹೆಚ್ಚು ಪ್ರಕರಣಗಳನ್ನು ಕೈಗೆತ್ತಿಕೊಂಡು ಸ್ಥಳದಲ್ಲಿಯೇ ದೂರುದಾರರು ಮತ್ತು ಎದುರುದಾರರು ನಡುವೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು ಹಾಗೂ ಕೆಲವು ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಕಾಲಾವಕಾಶವನ್ನು ತೆಗೆದುಕೊಳ್ಳಲಾಯಿತು.
ಕಾಯ್ದೆ ಪರಿಶೀಲಿಸಿ ಅವಕಾಶವಿದ್ದರೆ ಕೊಡಿ : ವಿಕಲಚೇತನ ವ್ಯಕ್ತಿಯೋರ್ವರು ದೂರು ನೀಡಿದ್ದು,ವಿಕಲಚೇತನರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂಗಳನ್ನು ಏಕೆ ಕಂತಿನಲ್ಲಿ ನೀಡಲು ಅವಕಾಶವಿದ್ದು, ಅಧಿಕಾರಿಗಳು ಹಂತ ಹಂತವಾಗಿ ನೀಡುವುದಾಗಿ ಹೇಳಿ ಸತಾಯಿಸುತ್ತಿದ್ದಾರೆ ಎಂದಾಗ ಉಪಲೋಕಾಯುಕ್ತರು ಒಂದು ವೇಳೆ ಏಕ ಕಂತಿನಲ್ಲಿ ಫಲಾನುಭವಿಗೆ ಪಾವತಿಸಲು ಅವಕಾಶವಿದ್ದರೆ ಸಿಇಓ ಅವರು ಅಂಗವಿಕಲರ ಕಮೀಷನರ್ ಅವರೊಂದಿಗೆ ಚರ್ಚಿಸಿ ನೀಡಲು ಆದೇಶಿಸಿದರು.
ಚಿತ್ರದುರ್ಗ ಮೂಲದ ಪಂಚೆ ಶಿವರುದ್ರಪ್ಪ ಅವರ ಮೈಸೂರು ಜಿಲ್ಲೆಗೆ ಸಂಬಂಧಿಸಿದ 84 ದೂರುಗಳಿದ್ದು,ಇಂದು 15 ಕೇಸುಗಳ ವಿಚಾರಣೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.ಈ ಎಲ್ಲಾ ಕೇಸುಗಳ ಒಟ್ಟು ಮೊತ್ತ 174 ಕೋಟಿ 42 ಲಕ್ಷ .
ಕೆಲಸ ಆದಮೇಲೆ ಹಣ ಕೊಡಬೇಕಿಲ್ವ?
ಗುತ್ತಿಗೆದಾರೋರ್ವರು 2021 ರಲ್ಲಿ ಸರ್ಕಾರಿ ಕಾಮಗಾರಿ ಮುಗಿಸಿ ಬಿಲ್ಲುಗಳನ್ನು ನೀಡಿದ್ದರೂ ಹಣ ಪಾವತಿಸುತ್ತಲ್ಲ ಎಂದು ನೀಡಿರುವ ದೂರಿಗೆ ಸಂಬಂಧಿಸಿದಂತೆ ಉಪ ಲೋಕಾಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ಕೆಲಸ ಆದ್ಮೇಲೆ ಗುತ್ತಿಗೆದಾರರಿಗೆ ಹಣ ನೀಡಬೇಕಲ್ವ ಎಂದರು
ಕೆಲವು ಪ್ರಕರಣಗಳಲ್ಲಿ ದೂರುದಾರರು ಮತ್ತು ಎದುರುದಾರರು ಗೈರುಹಾಜರಾಗಿದ್ದರು ಹಾಗೂ ಗೈರುಹಾಜರಾದ ಕೆಲವು ಸರ್ಕಾರಿ ನೌಕರರಿಗೆ ಷೋಕಾಸ್ ನೋಟಿಸನ್ನು ಜಾರಿಮಾಡಲಾಯಿತು ಮತ್ತು ಕೆಲವು ಪೊಲೀಸರ ಮೇಲಿನ ದೂರುಗಳನ್ನು ಪೊಲೀಸ್ ಕಮಿಷರ್ ಅವರ ಉಪಸ್ಥಿತಿಯಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ತಿಳಿಸಿದರು.
ಕೆ.ಆರ್.ನಗರ, ನಂಜನಗೂಡು, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಮೈಸೂರು ತಾಲ್ಲೂಕು, ಹುಣಸೂರು ಸೇರಿದಂತೆ ಜಿಲ್ಲೆಯ ಇನ್ನಿತರೆ ತಾಲ್ಲೂಕುಗಳಿಗೆ ಸೇರಿದ ಜನರು ಉಪ-ಲೋಕಾಯುಕ್ತರ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ ಪರಿಹಾರ ಕಂಡುಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ.ಗಾಯತ್ರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Key words: Officials – public work-humanity – Deputy Lokayukta -KN Phanindra