ಬೆಂಗಳೂರು, ನವೆಂಬರ್ 30, 2021 (www.justkannada.in): ಓಮಿಕ್ರಾನ್ ಸೋಂಕು ಹರಡದಂತೆ ರಾಜ್ಯ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ನಿರ್ದೇಶನದಂತೆ ಓಮಿಕ್ರಾನ್ ಸೋಂಕು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಒಂದು ಕಡೆ ಓಮಿಕ್ರಾನ್ ತಡೆಗಟ್ಟುವುದು ಮತ್ತು ಡೆಲ್ಟಾ ಸ್ಟೇನ್ ಕೂಡ ಅಲ್ಲಲ್ಲಿ ವ್ಯಾಪಿಸುತ್ತಿದೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಎಲ್ಲ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.
ವಿದೇಶದಿಂದ ಬಂದವರ ಮೇಲೆ ತೀವ್ರವಾದ ನಿಗಾ ಇಡಲಾಗಿದೆ. ಅವರನ್ನು ವಿಮಾನ ನಿಲ್ದಾಣದಲ್ಲೇ ಕೋವಿಡ್ ಟೆಸ್ಟ್ಗೆ ಒಳಪಡಿಸುವುದು, ಹೋಂ ಕ್ವಾರಂಟೈನ್, ಆರ್ಟಿಪಿಸಿಆರ್ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.