ಮೈತ್ರಿ ನಡೆ ಯಾವ ಕಡೆ?

ಬೆಂಗಳೂರು:ಜುಲೈ-8: ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿರುವುದರಿಂದ, ಮೈತ್ರಿ ಸರ್ಕಾರವನ್ನು ಮುಂದುವರಿಸಬೇಕೇ ಎಂಬ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಕಳೆದ ಆರು ತಿಂಗಳಿಂದ ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದ 12 ಬಂಡಾಯ ಶಾಸಕರು ಶನಿವಾರ ದಿಢೀರೆಂದು ಏಕಕಾಲಕ್ಕೆ ರಾಜೀನಾಮೆ ನೀಡಿರುವುದು ಪಕ್ಷ ಹಾಗೂ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಮೂಡಿಸಿದೆ. ಈ ಸಂದರ್ಭದಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿ ಮುಂದುವರಿಸುವುದರಿಂದ ಕಾಂಗ್ರೆಸ್‌ಗೆ ಆಗುವ ಲಾಭ ನಷ್ಟದ ಬಗ್ಗೆ ಕಾಂಗ್ರೆಸ್‌ ಹೈ ಕಮಾಂಡ್‌ ಚಿಂತನೆ ನಡೆಸಿದ್ದು, ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಿದೆ.

ಭಾನುವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಕಂಟಕದಿಂದ ಪಾರಾಗಲು ನಡೆಸಬೇಕಾದ ಕಾರ್ಯತಂತ್ರದ ಜೊತೆಗೆ ಪಕ್ಷದ ಹಿರಿಯ ನಾಯಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಎಂ.ಬಿ. ಪಾಟೀಲ್, ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ, ಹಿರಿಯ ಶಾಸಕ ಎಚ್.ಕೆ. ಪಾಟೀಲ್ ಅವರೊಂದಿಗೆ ಒನ್‌ ಟು ಒನ್‌ ಸಭೆ ನಡೆಸಿ ವೇಣುಗೋಪಾಲ್ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಮೈತ್ರಿಯಿಂದ ಪ್ರಯೋಜನವಾಗಿಲ್ಲ: ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಆದರೆ, ಒಂದು ವರ್ಷ ಪೂರೈಸುವಷ್ಟರಲ್ಲಿ ಸರ್ಕಾರದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಜಂಟಿಯಾಗಿ ಚುನಾವಣೆ ಎದುರಿಸಿದರೂ ಕಾಂಗ್ರೆಸ್‌ಗೆ ಯಾವುದೇ ಪ್ರಯೋಜನವಾಗಿಲ್ಲ. ಮೈತ್ರಿ ಸರ್ಕಾರದ ನಾಯಕತ್ವದ ಬಗ್ಗೆ ಕಾಂಗ್ರೆಸ್‌ ಶಾಸಕರಿಗೆ ವಿಶ್ವಾಸ ಉಳಿದಿಲ್ಲ. ಒಂದಿಬ್ಬರು ಶಾಸಕರು ರಾಜೀನಾಮೆ ನೀಡಿದ್ದರೆ, ಹೇಗಾದರೂ ಮನವೊಲಿಕೆ ಮಾಡಬಹುದಿತ್ತು. ಆದರೆ, 13 ಜನ ಶಾಸಕರು ರಾಜೀನಾಮೆ ನೀಡಿದ್ದು, ಎಲ್ಲರನ್ನು ವಾಪಸ್‌ ಕರೆದುಕೊಂಡು ಬಂದರೂ ಸರ್ಕಾರ ಸುಗಮವಾಗಿ ನಡೆಯುವ ಬಗ್ಗೆ ಅನುಮಾನವಿದೆ ಎಂಬ ಅಭಿಪ್ರಾಯವನ್ನು ಬಹುತೇಕ ರಾಜ್ಯ ಕಾಂಗ್ರೆಸ್‌ ನಾಯಕರು ಹೈ ಕಮಾಂಡ್‌ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್‌ ಪಟೇಲ್ ಕೂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸರ್ಕಾರ ಮುಂದುವರೆಸುವ ಬಗ್ಗೆ ಅಭಿಪ್ರಾಯ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರ ಮುಂದುವರೆಸುವುದರಿಂದ ಕಾಂಗ್ರೆಸ್‌ಗೆ ಭವಿಷ್ಯದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್‌ ಸೂಚನೆ ಮೇರೆಗೆ ಮೈತ್ರಿ ಸರ್ಕಾರ ರಚನೆಯಾಗಿರುವುದರಿಂದ ಹೈ ಕಮಾಂಡ್‌ ನಿರ್ಧಾರ ಏನು ಎನ್ನುವುದನ್ನು ತಿಳಿಸಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅತೃಪ್ತರ ಮನವೊಲಿಸಿ ಮೈತ್ರಿ ಮುಂದುವರೆಸುವ ಬಗ್ಗೆಯೇ ಒಲವು ತೋರಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಮೂಲಗಳ ಪ್ರಕಾರ ಬಹುತೇಕ ಶಾಸಕರು ವಿಧಾನಸಭೆ ವಿಸರ್ಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಸದಸ್ಯ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸುವುದು ಕಷ್ಟವಾಗಲಿದ್ದು, ಮೈತ್ರಿ ಸರ್ಕಾರ ಮುಂದುವರೆಸಲು ಕಷ್ಟವಾದರೆ, ಬಿಜೆಪಿ ಅಧಿಕಾರ ಮಾಡಲು ಅವಕಾಶ ನೀಡಿ, ಪ್ರತಿಪಕ್ಷದಲ್ಲಿ ಕೂಳಿತರು ತೊಂದರೆಯಿಲ್ಲ ಎಂಬ ಅಭಿಪ್ರಾಯವನ್ನು ನಾಯಕರ ಎದುರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಈಶ್ವರ್‌ ಖಂಡ್ರೆ ವಿರುದ್ಧ ವೇಣುಗೋಪಾಲ್ ಗರಂ: ಪಕ್ಷದ ಹಿರಿಯ ನಾಯಕ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದೇ ಮೌನ ವಹಿಸಿದ್ದೇಕೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅವರ ರಾಜೀನಾಮೆಯ ಮಾಹಿತಿ ತಿಳಿದ ತಕ್ಷಣ ರಾತ್ರಿಯೇ ಅವರ ಮನೆಗೆ ತೆರಳಿ ಮನವೊಲಿಕೆ ಪ್ರಯತ್ನ ನಡೆಸುವುದನ್ನು ಬಿಟ್ಟು ಬೆಳಿಗ್ಗೆ ಹೂಗುಚ್ಚ ಕೊಟ್ಟು ಮಾತನಾಡಿಸುವ ಅಗತ್ಯವೇನಿತ್ತು ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ನಾಳೆ ಶಾಸಕಾಂಗ ಸಭೆ
ಮಂಗಳವಾರ ಕಾಂಗ್ರೆಸ್‌ ಶಾಸಕಾಂಗ ಸಭೆ ಕರೆಯಲಾಗಿದೆ. ಸ್ವತಃ ಸಿದ್ದರಾಮಯ್ಯ ಅವರೇ ಸಭೆ ಬಗ್ಗೆ ಸೂಚನೆ ಹೊರಡಿಸಿದ್ದು, ಎಲ್ಲಾ ಶಾಸಕರಿಗೂ ಕಡ್ಡಾಯವಾಗಿ ಹಾಜರಿರುವಂತೆ ಆದೇಶ ಹೊರಡಿಸಲಾಗಿದೆ. ಇನ್ನಷ್ಟು ಅತೃಪ್ತ ಶಾಸಕರು ಪಕ್ಷ ಬಿಟ್ಟು ಹೋಗದಂತೆ ತಡೆಯಲು ಶಾಸಕಾಂಗ ಸಭೆ ಕರೆಯಲಾಗಿದೆ ಎಂದು ಹೇಳಲಾಗಿದೆ. ಎಲ್ಲ ಶಾಸಕರಿಗೂ ವಿಪ್‌ ಜಾರಿ ಮಾಡಿರುವುದರಿಂದ ಸಭೆ ಮಹತ್ವ ಪಡೆದುಕೊಂಡಿದೆ. ಒಂದು ವೇಳೆ, ರಾಜೀನಾಮೆ ಸಲ್ಲಿಸಿರುವ ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದಿದ್ದರೆ, ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಸ್ಪೀಕರ್‌ ರಮೇಶ್‌ಕುಮಾರ್‌ಗೆ ದೂರು ನೀಡಲು ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸಿದ್ದಾರೆ.
ಇನ್ನಿಬ್ಬರು ರಾಜೀನಾಮೆ?
ಈಗಾಗಲೇ 10 ರಾಜೀನಾಮೆಯಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಸೋಮವಾರವೂ ಒಂದೆರಡು ಶಾಸಕರು ಶಾಕ್‌ ನೀಡುವ ಸಾಧ್ಯತೆ ಇದೆ. ವಿಶೇಷವಾಗಿ ಮೈತ್ರಿ ಸರ್ಕಾರದಲ್ಲಿ ಯುವಜನ ಮತ್ತು ಕ್ರೀಡಾ ಸಚಿವರಾಗಿರುವ ರಹೀಂ ಖಾನ್‌ ಕೂಡ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಮೇಶ್‌ ಜಾರಕಿಹೊಳಿ ಸೂಚನೆ ಮೇರೆಗೆ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಕ್ಷದ ನಾಯಕರ ವಿರುದ್ಧ ಮಾತನಾಡಿ ಅಮಾನತ್ತಿನಲ್ಲಿರುವ ರೋಷನ್‌ ಬೇಗ್‌ ಕೂಡ ಸೋಮವಾರ ರಾಜೀನಾಮೆ ನೀಡುವ ಸಾಧ್ಯತೆ ಇದೆ
ಕೃಪೆ:ವಿಜಯವಾಣಿ

ಮೈತ್ರಿ ನಡೆ ಯಾವ ಕಡೆ?

on-which-side-of-the-alliance