ಒಂದು ಕಾಲದಲ್ಲಿ ಕನಸಿನ ವಾಹನವಾಗಿದ್ದ ವೋಲ್ವೊ ಬಸ್ಸುಗಳು ಕೋವಿಡ್ ಸಾಂಕ್ರಾಮಿಕದ ನಂತರ ಬಿಳಿ ಐರಾವತಗಳಂತಾಗಿವೆ..!

 

ಬೆಂಗಳೂರು, ಆಗಸ್ಟ್ ೭, ೨೦೨೧ (www.justkannada.in): ಬೆಂಗಳೂರು ನಗರ ದೇಶದ ಸಿಲಿಕಾನ್ ವ್ಯಾಲಿ ಎಂಬ ಪ್ರತಿಷ್ಠೆಯನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಬಿಎಂಟಿಸಿಯು ಅಧಿಕ ಲಾಭಗಳಿಸುವ ಹಾಗೂ ಅಭಿವೃದ್ಧಿ ಹೊಂದುವ ಉದ್ದೇಶದೊಂದಿಗೆ ಮೇಲ್ಮಟ್ಟದ ಜನರ ಕನಸಿನ ದುಬಾರಿ ವೋಲ್ವೊ ಬಸ್ಸುಗಳನ್ನು ಖರೀದಿಸಿತು. ಈ ವೋಲ್ವೊ ಬಸ್ಸುಗಳು ಜನರಲ್ಲಿ ಅತ್ಯಂತ ಬೇಡಿಕೆಯನ್ನೂ ಪಡೆದುಕೊಂಡಿತು. ಆದರೆ ಕಳೆದ ಎರಡು ವರ್ಷಗಳಿಂದ ಈ ಬಸ್ಸುಗಳು ಬಿಎಂಟಿಸಿ ಪಾಲಿಗಂತೂ ಐರಾವತಗಳಾಗಿ ಪರಿವರ್ತಿತಗೊಂಡು ಬೃಹತ್ ನಷ್ಟವನ್ನುಂಟು ಮಾಡುತ್ತಿವೆ.

ಪ್ರಸ್ತುತ ಬಿಎಂಟಿಸಿ ಈ ಹವಾನಿಯಂತ್ರಿತ ಬಸ್ಸುಗಳನ್ನು ಕಾರ್ಯನಿರ್ವಹಣಾ ಪರಿಸ್ಥಿತಿಯಲ್ಲಿರಿಸಲು ಹೆಣಗಾಡುತ್ತಿದೆ. ನಿಗಮವು ವೋಲ್ವೊ ಬಸ್ಸಿನ ಪ್ರತಿ ಕಿ.ಮೀ.ಗೆ ರೂ.೮೦-ರೂ.೮೫ವರೆಗೆ ವೆಚ್ಚ ಭರಿಸುತ್ತದಂತೆ! ಆದರೆ ಕೋವಿಡ್ ಸಾಂಕ್ರಾಮಿಕದ ನಂತರ, ನಿಗಮ ಭರಿಸುತ್ತಿರುವ ವೆಚ್ಚಕ್ಕೆ ಬದಲಾಗಿ ಪ್ರತಿ ಕಿ.ಮೀ.ಗೆ ನಿಗಮಕ್ಕೆ ಬರುವ ಲಾಭ ಕೇವಲ ರೂ.೫೦.

ಬಿಎಂಟಿಸಿ ಒಟ್ಟು ೮೬೦ ವೋಲ್ವೊ ಬಸ್ಸುಗಳನ್ನು ಹೊಂದಿದ್ದು, ಈ ವರ್ಷ ಜೂನ್ ೨೧ರಿಂದ ಕಾರ್ಯಾಚರಣೆಗಳನ್ನು ಆರಂಭಿಸಿದಾಗಿನಿಂದ ಕೇವಲ ೬೦ ಬಸ್ಸುಗಳನ್ನು ಮಾತ್ರ ರಸ್ತೆಗಿಳಿಸಿದೆ. ಈ ಪೈಕಿ ಯಾವ ಬಸ್ಸುಗಳೂ ಸಹ ನಗರ ಪ್ರದೇಶದ ಮಾರ್ಗದಲಿಲ್ಲ. ಬಹುಪಾಲು ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನಿಯೋಜಿಸಿರುವ ಕಾರಣದಿಂದಾಗಿ ಈ ವೋಲ್ವೊ ಬಸ್ಸುಗಳನ್ನು ಬಾಡಿಗೆಗೂ ಪಡೆಯುತ್ತಿಲ್ಲವಂತೆ!

“ಏರುತ್ತಿರುವ ಡೀಸೆಲ್ ದರಗಳ ಹಿನ್ನೆಲೆಯಲ್ಲಿ, ಪ್ರಸ್ತುತ ಈ ಬಸ್ಸುಗಳ ಸೇವೆ ಆರಂಭಿಸುವುದು ಕಷ್ಟ. ಈ ಬಸ್ಸುಗಳನ್ನು ಓಡಿಸದೆ ನಿಲ್ಲಿಸಿದ್ದರೂ ಸಹ ವಾರ್ಷಿಕ ತಲಾ ಒಂದು ಬಸ್ಸಿಗೆ ರೂ.೧ ಲಕ್ಷ ನಿರ್ವಹಣಾ ವೆಚ್ಚ ತಗಲುತ್ತದೆ. ಜೊತೆಗೆ ಕೆಲವು ತಿಂಗಳವರೆಗೂ ಹಾಗೇ ನಿಲ್ಲಿಸಿದ್ದರೂ ಸಹ ಇನ್ನೂ ಹೆಚ್ಚಿನ ವೆಚ್ಚಗಳನ್ನು ಭರಿಸಬೇಕಾಗುವುದನ್ನು ಪ್ರತ್ಯೇಕವಾಗಿ ತಿಳಿಸಬೇಕಾಗಿಲ್ಲ,” ಎನ್ನುತ್ತಾರೆ ಅಧಿಕಾರಿಯೊಬ್ಬರು.
ವೋಲ್ವೊ ಬಸ್ಸುಗಳಲ್ಲಿರುವ ಹವಾನಿಯಂತ್ರಣ ಉಪಕರಣಗಳನ್ನು ತೆಗೆಯುವುದು, ಈ ಬಸ್ಸುಗಳನ್ನು ಇತರೆ ನಿಗಮಗಳಿಗೆ ಹಸ್ತಾಂತರಿಸುವುದೂ ಸೇರಿದಂತೆ ಹಲವು ಆಯ್ಕೆಗಳನ್ನು ಬಿಎಂಟಿಸಿ ಪರಿಗಣಿಸುತ್ತಿದೆ.

“ಕೋವಿಡ್ ಸಾಂಕ್ರಾಮಿಕಕ್ಕೆ ಮುಂಚೆಯೂ ಸಹ, ವಿಮಾನನಿಲ್ದಾಣದ ಮಾರ್ಗವೊಂದನ್ನು ಹೊರತುಪಡಿಸಿ, ಇತರೆ ಮಾರ್ಗಗಗಳಲ್ಲಿ ಓಡುವ ಈ ಎಸಿ ಬಸ್ಸುಗಳು ನಿಗಮಕ್ಕೆ ದೊಡ್ಡ ಮಟ್ಟದ ನಷ್ಟವನ್ನುಂಟು ಮಾಡುತ್ತಿದ್ದವು. ಸಾಂಕ್ರಾಮಿಕದ ನಂತರ ವಿಮಾನ ನಿಲ್ದಾಣದಲ್ಲಿ ಉಂಟಾಗಿರುವ ಸೀಮಿತ ಚಟುವಟಿಕೆಗಳ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಈ ಬಸ್ಸುಗಳ ನಿರ್ವಹಣೆಯ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ,” ಎನ್ನುತ್ತಾರೆ ಬಿಎಂಟಿಸಿ ಅಧಿಕಾರಿಯೊಬ್ಬರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : once-a-dream-vehicle-volvos-turn-white-elephants-post-pandemic