ಮೈಸೂರು,ನವೆಂಬರ್,19,2020(www.justkannada.in) : ಬಡವರ ನಿವೇಶನಕ್ಕಾಗಿ ಕೊಟ್ಟಿರುವ ಒಂದು ಎಕರೆ 20ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸಮಾಜ ಸೇವಕ ಗಿರೀಶ್ ಮಾದನಹಳ್ಳಿ ಕುಟುಂಬ ಸಮೇತ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗುರುವಾರ ಜಮಾವಣೆಗೊಂಡು ಸಮಾಜ ಸೇವಕ ಗಿರೀಶ್ ಮಾದನಹಳ್ಳಿ ಕುಟುಂಬದವರು ನಂಜನಗೂಡು ತಾಲೂಕು ಮಾದನಹಳ್ಳಿ ಗ್ರಾಮದಲ್ಲಿ 1ಎಕರೆ, 20ಗುಂಟೆ ಜಮೀನು ಸರಕಾರದ್ದಾಗಿದ್ದು, ಅದನ್ನು ಅಲ್ಲಿನ ಗ್ರಾಮದವರಾದ ಮಲ್ಲಿಕಾರ್ಜುನ ಮಹಾದೇವಪ್ಪ, ಬಸವರಾಜು, ಶಿವಣ್ಣ ಎಂಬವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ನಂಜನಗೂಡು ತಾಲೂಕು ಅಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ಸಂಬಂಧಪಟ್ಟ 13/1ಎ, 1ಎ, 12/1,12/2 ಎಲ್ಲಾ ದಾಖಲಾತಿಗಳನ್ನು ಸಾಕಷ್ಟು ಬಾರಿ ನೀಡಿ ಮನವಿ ಸಲ್ಲಿಸಿದ್ದೇವೆ. ಹೀಗಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಒತ್ತುವರಿದಾರರ ಆಮಿಷಕ್ಕೆ ಒಳಗಾಗಿರುತ್ತಾರೆ ಎಂದು ದೂರಿದರು.
ನಮಗೆ ಕೊಟ್ಟಿರುವ ಹಕ್ಕು ಪತ್ರದಂತೆ ಜಾಗವನ್ನು ಗುರುತಿಸಿಕೊಡುವಂತೆ ಕುಟುಂಬ ಸಮೇತ ಹೋರಾಟ ಮಾಡಿದ್ದೇನೆ. ನಾವು ಕೂಲಿ ಕಾರ್ಮಿಕರಾಗಿರುತ್ತೇವೆ. ಕಳೆದ ವರ್ಷ ಮಳೆಯಲ್ಲಿ ಮನೆ ಕುಸಿದು ಹೋಗಿದೆ. ಹೊಸದಾಗಿ ಕಟ್ಟಿರುವ ಮನೆಗೆ ಸರಕಾರದಿಂದ 5ಲಕ್ಷ ರೂ.ಪರಿಹಾರ ಬಂದಿದ್ದರೂ ಒಂದು ಲಕ್ಷ ಮಾತ್ರ ಪರಿಹಾರ ನೀಡಿ ಇನ್ನೂ ಕೊಡಬೇಕಾದ ಹಣ ನೀಡದೆ ವಂಚಿಸಲಾಗಿದೆ ಎಂದು ಕಿಡಿಕಾರಿದರು.
ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದು 2ವರ್ಷದಿಂದ ಶೌಚಾಲಯವನ್ನು ನಿರ್ಮಿಸಲು ಅವಕಾಶ ನೀಡುತ್ತಿಲ್ಲ. ಪ್ರತಿನಿತ್ಯ 1/2ಕಿಮೀ ನಡೆದುಕೊಂಡು ಬಯಲು ಪ್ರದೇಶಕ್ಕೆ ಬಹಿರ್ದೆಸೆಗೆ ಹೋಗಬೇಕಿದೆ. ಗುಡ್ಡಗಾಡು ಪ್ರದೇಶವಾಗಿದ್ದು ಚಿರತೆ ಹಾವಳಿ ಇರುತ್ತದೆ. ಕಂದಾಯ ಅಧಿಕಾರಿಗಳು ಸರಕಾರಿ ಜಾಗವನ್ನು ಅಳತೆ ಮಾಡಿಕೊಡದೆ ಇರುವುದರಿಂದ ಹಲವು ಸಮಸ್ಯೆ ಎದುರಿಸುವಂತ್ತಾಗಿದೆ ಎಂದು ಅಳಲು ತೋಡಿಕೊಂಡರು.
key words : One acre, 20 bell Fields-occupy-Social-worker-Girish Madanahalli-Protest-family