‘ಒಂದು ದೇಶ-ಒಂದು ಚುನಾವಣೆ’ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ- ಕೆವಿ ಮಲ್ಲೇಶ್

ಮೈಸೂರು,ಡಿಸೆಂಬರ್,17,2024 (www.justkannada.in): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ “ಒಂದು ದೇಶ- ಒಂದು ಚುನಾವಣೆ” ಜಾರಿಯ ಉದ್ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ದೇಶವನ್ನು ಏಕಚಕ್ರಾಧಿಪತ್ಯದತ್ತ ಕೊಂಡೊಯ್ಯುವ ಷಡ್ಯಂತ್ರದಂತೆ ಕಾಣುತ್ತಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಕಾಂಗ್ರೆಸ್ ಮುಖಂಡ ಕೆ.ವಿ ಮಲ್ಲೇಶ್ ಕಿಡಿಕಾರಿದರು.

ಕೇಂದ್ರ ಸರ್ಕಾರ ಜಾರಿ ಮಾಡಲು ಮುಂದಾಗಿರುವ “ಒಂದು ದೇಶ-ಒಂದು ಚುನಾವಣೆ ಕುರಿತು ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್,  ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಮನ್ನಣೆ ಕಳೆದುಕೊಂಡಿರುವುದು ಇತ್ತೀಚಿನ ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ರುಜುವಾತಾಗಿದೆ. ಅದನ್ನು ಮರೆಮಾಚಲು ಮತ್ತು‌ ವಾಮಮಾರ್ಗದಲ್ಲಿ ‘ಜನ ಮತ’ವನ್ನು ತನ್ನ ಹಿತಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಲು ಆರ್ ಎಸ್ ಎಸ್ ಮತ್ತು ಬಿಜೆಪಿ ನಡೆಸುತ್ತಿರುವ ಸಂಚಿನ ಭಾಗವೇ  ಈ “ಒಂದು ದೇಶ- ಒಂದು ಚುನಾವಣೆ”.

ಲೋಕಸಭೆ- ವಿಧಾನಸಭಾ ಚುನಾವಣೆಗಳು ಪ್ರತ್ಯೇಕ‌ ನಡೆದರೆ ಚರ್ಚಿತ ಸಂಗತಿ-ಸಂಕಥನಗಳು ಭಿನ್ನವಾಗಿರುತ್ತವೆ. ವಿಧಾನಸಭಾ ಚುನಾವಣೆಗಳಲ್ಲಿ ಆಯಾ ಪ್ರದೇಶದ ಒಲವು, ನಿಲುವು, ಹಿತಾಸಕ್ತಿಗಳು ಚರ್ಚೆಯ ಮುನ್ನೆಲೆಯಲ್ಲಿರುತ್ತವೆ. ಹೀಗಾಗಿಯೇ ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿವೆ. ತಮ್ಮ ಹಿತಕ್ಕೆ ಪೂರಕವಾಗುವಂತ ಪಕ್ಷಗಳನ್ನು ಜನ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ದೇಶದಲ್ಲೆಡೆ ಆಡಳಿತದಲ್ಲಿ ಕೇಸರಿಯನ್ನು ಹಬ್ಬಿಸುವ ಆರ್ ಎಸ್ ಎಸ್ ಉದ್ದೇಶ ಈಡೇರಿಲ್ಲ. ಒಂದು‌ ದೇಶ-ಒಂದು ಚುನಾವಣೆಯ ಮೂಲಕ ಈ ‘ಪ್ರಾದೇಶಿಕ ರಾಜಕೀಯ ವೈವಿಧ್ಯವನ್ನು  ನಾಶ ಪಡಿಸಿ, ಏಕ ಚಕ್ರಾಧಿಪತ್ಯ ಸ್ಥಾಪಿಸಲು ಬಿಜೆಪಿ ಹವಣಿಸುತ್ತಿದೆ ಎಂದು ಕೆ.ವಿ ಮಲ್ಲೇಶ್ ಆರೋಪಿಸಿದ್ದಾರೆ.

ಜನಸಂಖ್ಯೆ, ಪ್ರದೇಶ ವ್ಯಾಪ್ತಿ ಮತ್ತಿತರ ಕಾರಣಗಳಿಂದ ಮುಂದಿನ ಕ್ಷೇತ್ರ‌ ಪುನರ್ವಿಂಗಡಣೆ ಹೊತ್ತಿಗೆ ಹಿಂದಿ ಭಾಷಿಕ ಉತ್ತರ ಮತ್ತು ಮಧ್ಯಭಾರತದ ರಾಜ್ಯಗಳು ಸಂಸತ್ ಕ್ಷೇತ್ರಗಳನ್ನು ಹೆಚ್ಚಿಸಿಕೊಳ್ಳಲಿವೆ. ದಕ್ಷಿಣದ ರಾಜ್ಯಗಳು ರಾಜಕೀಯವಾಗಿ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದರೂ ಉತ್ತರದ ‘ಶಕ್ತಿಯ ಮೇಲೆಯೇ ಅಧಿಕಾರದಲ್ಲಿ ಮುಂದುವರಿಯುವ ಲೆಕ್ಕಾಚಾರ ಬಿಜೆಪಿಯದು. ಹೀಗಾದರೆ, ಈಗಾಗಲೇ‌ ಅನುದಾನ ತಾರತಮ್ಯಕ್ಕೆ ಈಡಾಗಿರುವ ದಕ್ಷಿಣ ರಾಜ್ಯಗಳು ಇನ್ನಷ್ಟು ತುಳಿತಕ್ಕೆ ಒಳಗಾಗಬೇಕಾಗುತ್ತದೆ ಎಂದು ಕೆ.ವಿ ಮಲ್ಲೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಯಾವುದೇ ರಾಜ್ಯ ತನ್ನದೇ ರಾಜಕೀಯ ಕಾರಣಕ್ಕೆ ವಿಧಾನಸಭೆಯನ್ನು ವಿಸರ್ಜಿಸಿದರೂ ಮುಂದಿನ ಅವಧಿವರೆಗೆ ಚುನಾವಣೆಗಾಗಿ ಕಾಯಬೇಕಾಗುತ್ತೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಹೊಡೆತ ಬೀಳಲಿದೆ. ರಾಜ್ಯಗಳು ಚುನಾವಣಾ ಸಮಯ ನಿರ್ಧರಿಸುವಲ್ಲಿ ತಮಗಿರುವ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತವೆ.

ಕೇಂದ್ರದಲ್ಲಿ ಮೂರು ಅವಧಿಯ ಅಧಿಕಾರ ನಡೆಸಿ‌ ಎಲ್ಲಾ ರೀತಿಯ ಸಂಪನ್ಮೂಲ ಕ್ರೋಢೀಕರಿಸಿ ಸದೃಢಗೊಂಡಿರುವ ಬಿಜೆಪಿ, ಇದೀಗ ಹಣಬಲ- ಅಧಿಕಾರ ಬಲದ ಮೂಲಕ ಸಣ್ಣಪುಟ್ಟ ಪಕ್ಷಗಳನ್ನು ಹಣಿಯುವ ಕೆಲಸಕ್ಕೆ ಕೈ ಹಾಕಿದೆ. ಒಂದು ದೇಶ- ಒಂದು ಚುನಾವಣೆಗೆ 15 ಪಕ್ಷಗಳ ತೀವ್ರ ವಿರೋಧವಿದ್ದಾಗ್ಯೂ ಅವುಗಳ ಮನವಿಗೆ ಮನ್ನಣೆ ನೀಡದೆ ಅಭಿಪ್ರಾಯ ಹತ್ತಿಕ್ಕಿ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಸವಾರಿ ಮಾಡಲು ಬಿಜೆಪಿ, ಆರ್ಎಸ್ಎಸ್ ಮುಂದಾಗಿರುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.

ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ನೆರೆಯ ದೇಶಗಳಿಗೆ ಮಾದರಿ ಆಗಬೇಕೇ ಹೊರತು ಹಿಟ್ಲರ್, ಈದಿ ಅಮೀನ್, ಮುಷರಫ್ ರೀತಿ ಸರ್ವಾಧಿಕಾರಿ ಆಡಳಿತದ ‘ದುಷ್ಟ ಮಾದರಿ’ ಸೃಷ್ಟಿಸುವ ದುಸ್ಸಾಹಸಕ್ಕೆ ಕೈಹಾಕಬಾರದು. ಕೇಂದ್ರ ಸರ್ಕಾರ ಈ ಕೂಡಲೇ ತನ್ನ ನಿಲುವು ಬದಲಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕು. ಸ್ವಾರ್ಥ ಸಾಧನೆಗಾಗಿ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸಿದರೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಕಾಂಗ್ರೆಸ್ ದೇಶಾದ್ಯಂತ ಜನಾಂದೋಲನ ರೂಪಿಸಿ ತಕ್ಕ ಶಾಸ್ತಿ ಮಾಡಲಿದೆ ಎಂದು ಕೆ.ವಿ ಮಲ್ಲೇಶ್ ಹೇಳಿದ್ದಾರೆ.

Key words: One Nation-one election, mysore,  KV Mallesh