ಮೈಸೂರು,ಜೂ,11,2020(www.justkannada.in): ಸರ್ಕಾರ 5ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣವನ್ನ ರದ್ದುಪಡಿಸಿದೆ. ಅಂತೆಯೇ ಪಿಯುವರೆಗೂ ಆನ್ ಲೈನ್ ಶಿಕ್ಷಣ ರದ್ದುಪಡಿಸಲಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, 5ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದುಗೊಳಿಸಿ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಹಾಗೆಯೇ ಪಿಯುಸಿವರೆಗೆ ಆನ್ ಲೈನ್ ಶಿಕ್ಷಣ ರದ್ದುಪಡಿಸಬೇಕು. ಮಕ್ಕಳಿಗೆ ಶಾಲೆಯಲ್ಲೇ ಪಾಠ ಮಾಡಬೇಕು ಎಂದು ತಿಳಿಸಿದರು.
ಖಾಸಗಿ ಶಾಲೆಗಳ ಶುಲ್ಕ ಕಡಿಮೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಈ ಕುರಿತು ಸರ್ಕಾರವೇ ಯೋಚಿಸಿ ತೀರ್ಮಾನ ಕೈಗೊಳ್ಳಬೇಕು. ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ. ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಸಂಬಂಧ ಶಿಕ್ಷಣ ಸಚಿವರು ಅಗತ್ಯ ಕ್ರಮ ತೆಗೆದುಕೊಂಡು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹೊರೆಯಾಗದಂತೆ ಅನುಕೂಲ ಕಲ್ಪಿಸಬೇಕಿದೆ ಎಂದು ಸಿದ್ಧರಾಮಯ್ಯ ಹೇಳಿದರು.
ರಾಜ್ಯದಲ್ಲಿ ಅಕ್ಟೋಬರ್ ವರೆಗೂ ಶಾಲೆಗಳನ್ನು ಆರಂಭಿಸಬಾರದು. ಪ್ರಾಥಮಿಕ ಶಾಲೆಗಳಲ್ಲಿ ಆನ್ ಲೈನ್ ಶಿಕ್ಷಣ ರದ್ದುಪಡಿಸಿರುವುದು ಸ್ವಾಗತಾರ್ಹ. ಶಾಲೆಗಳಲ್ಲಿ ಪಾಠ ಕಲಿಯುವುದೇ ಬೇರೆ, ಆನ್ ಲೈನ್ ಶಿಕ್ಷಣವೇ ಬೇರೆ. ಶಾಲೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಎಚ್ಚರಿಕೆಯ ತೀರ್ಮಾನ ಮಾಡಬೇಕಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
Key words: online- education – cancel- Former CM -Siddaramaiah.