ಮೈಸೂರು, ಜುಲೈ 02, 2023 (www.justkannada.in): ದೂರ ಶಿಕ್ಷಣದಿಂದ ಮಾತ್ರ ಪ್ರಸ್ತುತ ಭಾರತೀಯ ಸಮಾಜದ ಹೆಚ್ಚಿನ ಭಾಗಕ್ಕೆ ಶಿಕ್ಷಣವನ್ನು ಪೂರೈಸಬಹುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ದೂರ ಶಿಕ್ಷಣ ಕೆಲವು ನ್ಯೂನತೆಗಳನ್ನು ಹೊಂದಿದ್ದರೂ ಸಾಕಷ್ಟು ಗುಣಾತ್ಮಕ ಅಂಶಗಳನ್ನು ಹೊಂದಿದೆ. ದೂರ ಶಿಕ್ಷಣದ ಪ್ರಾಯೋಗಿಕ ಮೌಲ್ಯಗಳನ್ನು ಎಂದಿಗೂ ನಿರಾಕರಿಸಲಾಗುವುದಿಲ್ಲ. ದೂರ ಶಿಕ್ಷಣದಿಂದ ಮಾತ್ರ ಪ್ರಸ್ತುತ ಭಾರತೀಯ ಸಮಾಜದ ಹೆಚ್ಚಿನ ಭಾಗಕ್ಕೆ ಶಿಕ್ಷಣವನ್ನು ಪೂರೈಸಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಕಳೆದ ಎರಡೂವರೆ ದಶಕಗಳಲ್ಲಿ ದೂರ ಶಿಕ್ಷಣದ ಮೂಲಕ ದೇಶದಾದ್ಯಂತ ಉನ್ನತ ಶಿಕ್ಷಣಕ್ಕೆ ಆಪಾರ ಕೊಡುಗೆ ನೀಡುತ್ತಾ ಬಂದಿದೆ. ಇದಕ್ಕೆ ಪೂರಕವಾಗಿ ವಿಶ್ವವಿದ್ಯಾನಿಲಯದ ಎಲ್ಲಾ ಬೋಧಕರ ಗುಣಮಟ್ಟದ ಬೋಧನೆ ಮತ್ತು ಬೋಧಕೇತರರ ನಿರಂತರ ಕಾರ್ಯನಿರ್ವಹಣೆ ಹಾಗೂ ಆಡಳಿತ ವರ್ಗದವರ ಪರಿಶ್ರಮದ ಫಲವಾಗಿದೆ. ಇದರಿಂದಾಗಿ ಈ ವಿಶ್ವವಿದ್ಯಾನಿಲಯವು ದೇಶದಲ್ಲಿಯೇ ನ್ಯಾಕ್ ಸಂಸ್ಥೆಯಿಂದ “A” ಮಾನ್ಯತೆಯನ್ನು ಪಡೆದಿದ್ದು ನಮ್ಮ ದೇಶದಲ್ಲಿಯೇ ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆಯ ಎರಡನೇ ವಿಶ್ವವಿದ್ಯಾನಿಲಯವಾಗಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಕ್ತ ವಿಶ್ವವಿದ್ಯಾನಿಲಯದ ಬೋಧಕರ ಕಠಿಣ ಪರಿಶ್ರಮ ಮತ್ತು ಗುಣಮಟ್ಟದ ಮೇಲಿನ ಶ್ರದ್ಧೆ ಹಾಗೂ ಅಧಿಕಾರಿಗಳ ಮತ್ತು ಬೋಧಕೇತರರ ಕಾರ್ಯಕ್ಷಮತೆ ಹಾಗೂ ಕುಲಪತಿ ಪ್ರೊ. ಶರಣಪ್ಪ ವಿ. ಹಲ್ಲೆ ಅವರ ಕ್ರಿಯಾತ್ಮಕ ನಾಯಕತ್ವದಿಂದಾಗಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾಗಿ ಗುರುತಿಸಲ್ಪಟ್ಟಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.